ಶರತ್ ಬಚ್ಚೇಗೌಡರ ಬೆಂಬಲಿಗರಿಂದ ಬಿಎಸ್‌ವೈ ಮನೆ ಮುಂದೆ ಭಾರೀ ಪ್ರತಿಭಟನೆ…

ನಿರೀಕ್ಷೆಯಂತೆಯೇ ಉಪಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಬಂಡಾಯ ಬಿರುಸುಗೊಂಡಿದೆ. ಅನರ್ಹರ ವಲಸೆಯಿಂದಾಗಿ ಮೂಲ ಬಿಜೆಪಿಗರು ಟಿಕೆಟ್ ಕೈತಪ್ಪುವ ಮೊದಲೇ ಎಚ್ಚೆತ್ತುಕೊಂಡಿದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಹೊಸಕೋಟೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಶರತ್ ಬಚ್ಚೇಗೌಡರ ಬೆಂಬಲಿಗರಿಂದ ಇಂದು ಮುಖ್ಯಮಂತ್ರಿ ಬಿಎಸ್‌ವೈ ಮನೆ ಮುಂದೆ ಭಾರೀ ಪ್ರತಿಭಟನೆ ನಡೆದಿದ್ದು, ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರನಾಗಿ ಕಣಕ್ಕಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ಬಿಎಸ್‌ವೈ ಮನೆ ಎದುರು ನಡೆದ ಪ್ರತಿಭಟನೆಯಲ್ಲಿ ಬಚ್ಚೇಗೌಡರಿಗೆ ಜಯವಾಗಲಿ, ನರೇಂದ್ರ ಜಯವಾಗಲಿ ಎಂಬ ಘೋಷಣೆ ಮೊಳಗಿದರೆ, ಯಡಿಯೂರಪ್ಪನವರಿಗೆ ಜಯವಾಗಲಿ ಎಂಬ ಘೋಷಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಜೊತೆಗೆ ಶರತ್ ಬಚ್ಚೇಗೌಡರಿಗೆ ಟಿಕೆಟ್ ನೀಡದಿದ್ದರೆ ಬಿಜೆಪಿ ಸೋಲು ಖಚಿತ ಎಂದು ಬೆಂಬಲಿಗರು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.

ಈ ಕುರಿತು ಶರತ್ ಬಚ್ಚೆಗೌಡ ಮಾತನಾಡಿ ನಾನೀಗಾಗಲೇ ಯಡಿಯೂರಪ್ಪನವರ ಬಳಿ ಮಾತಾಡಿದ್ದೇನೆ. ಅವರು ಟಿಕೇಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅನರ್ಹರ ವಿಚಾರ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಹಾಗಾಗಿ ಕಾದು ನೋಡಿ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.

ನಿನ್ನೆ ಚುನಾವಣಾ ಆಯೋಗ ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಎಂದಿದ್ದೇ ತಡ ಮೂಲ ಬಿಜೆಪಿಗರಲ್ಲಿ ಆತಂಕಮೂಡಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರಿಗೆ ಇದು ದೊಡ್ಡ ಶಾಕ್ ಆಗಿದ್ದು ಕೂಡಲೇ ಕಾರ್ಯಪ್ರವೃತ್ತಿಯಾಗಿದ್ದಾರೆ. ಅದರಲ್ಲಿ ಯಶವಂತಪುರದಲ್ಲಿ ಜಗ್ಗೇಶ್, ಹೀರೆಕೇರೂರಿನಲ್ಲಿ ಬಣಗಾರ್, ಕಾಗವಾಡದಲ್ಲಿ ರಾಜೂಕಾ, ಮಹಾಲಕ್ಷ್ಮಿ ಲೇಔಟ್ ನಲ್ಲಿ ಹರೀಶ್, ಯಲ್ಲಾಪುರದಲ್ಲಿ ವಿ.ಎಸ್ ಪಾಟೀಲ್, ಗೋಕಾಕ್ ನಲ್ಲಿ ಅಶೋಕ್ ಪೂಜಾರಿ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.

ಬಂಡಾಯಗಾರರಲ್ಲಿ ಕೆಲವರು ಈಗಾಗಲೇ ಕಾಂಗ್ರೆಸ್ ನ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದಲ್ಲಿ ಕಾಂಗ್ರೆಸ್ ಹಾರಿ ಟಿಕೆಟ್ ಪಡೆಯಲು ಒಳಗಿನಿಂದಲೇ ಪ್ರಯತ್ನ ಮಾಡುತ್ತಿದ್ದಾರೆ. ಗೋಕಾಕ್ ನ ಬಿಜೆಪಿ ಮುಖಂಡ ಅಶೋಕ್ ಪೂಜಾರಿಯವರಂತೂ ನನಗೆ ಕಾಂಗ್ರೆಸ್ ಟಿಕೇಟ್ ನೀಡದಿದ್ದರೂ ಸಹ ಬಿಜೆಪಿ ಸೋಲಿಸಲು ಕಾಂಗ್ರೆಸ್ ಅನ್ನೇ ಬೆಂಬಲಿಸುತ್ತೇನೆ ಎಂಬ ಬ್ಲಾಕ್ ಮೇಲ್ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights