ವಿಜಯನಗರ ಜಿಲ್ಲೆ ಉದ್ಭವವಾಗಲು ತಯಾರಿ : ಆನಂದ್‍ಸಿಂಗ್ ಹೊಸ ಜಿಲ್ಲೆಯ ನಿರ್ಮಾತೃ ಪದವಿಗೆ ಸಜ್ಜು

ರಾಜ್ಯದ 31 ನೇ ಜಿಲ್ಲೆಯಾಗಿ ಹೊಸಪೇಟೆ ಕೇಂದ್ರಿತ ವಿಜಯನಗರ ಜಿಲ್ಲೆ ಉದ್ಭವವಾಗಲು ತಯಾರಿ ನಡೆದಿವೆ. ಇದು ಅಭಿವೃದ್ಧಿಯ ಯಾವ ಮಾನದಂಡವನ್ನೂ ನೋಡದೇ ಕೇವಲ ರಾಜಕೀಯ ಕಾರಣಕ್ಕಾಗಿ ಹೊಸ ಜಿಲ್ಲೆ ಮಾಡಲು ಹೊರಟಂತಿದೆ. ಬಳ್ಳಾರಿಯ ರೆಡ್ಡಿ-ರಾಮುಲುಗಳು ಇದಕ್ಕೆ ವಿರೋಧವಾಗಿದ್ದರೆ, ಹೊಸಪೇಟೆಯ ಆನಂದ್‍ಸಿಂಗ್ ಹೊಸ ಜಿಲ್ಲೆಯ ನಿರ್ಮಾತೃ ಎಂಬ ಪದವಿ ಪಡೆಯಲು ಹಾತೊರೆಯುತ್ತಿದ್ದಾರೆ.

ಜಿಲ್ಲೆ ವಿಭಜನೆಯಾದರೆ ಬಳ್ಳಾರಿ ಜಿಲ್ಲೆ ರೆವಿನ್ಯೂ ದೃಷ್ಟಿಯಿಂದ ಬಡವಾಗಿ ಹೋಗಲಿದೆ. ಬಳ್ಳಾರಿ ಜಿಲ್ಲೆ ಮೇಲೆ ಹಿಡಿತ ಹೊಂದಲು ಸದಾ ಯತ್ನಿಸುತ್ತ ಬಂದಿರುವ ರೆಡ್ಡಿ-ರಾಮುಲುಗಳ ರಾಜಕೀಯ ಅಸ್ತಿತ್ವಕ್ಕೆ ಹೊಸ ವಿಜಯನಗರ ಜಿಲ್ಲೆ ಸವಾಲು ಎಸೆಯಲಿದೆ. ಹೀಗಾಗಿ ರೆಡ್ಡಿ-ರಾಮುಲುಗಳು ಈಗ ಬಹಿರಂಗವಾಗಿ ಹೊಸ ಜಿಲ್ಲೆ ಬೇಡ ಎಂದು ವಾದ ಮಂಡಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಹೊಸ ಜಿಲ್ಲೆಯಾದರೆ ಅದರ ಕ್ರೆಡಿಟ್ಟು ತನಗೆ ಸಿಕ್ಕಿ ಉಪ ಚುನಾವಣೆಯನ್ನು ಸುಲಭವಾಗಿ ಗೆಲ್ಲುವ ಮತ್ತು ಮುಂದೆ ಹೊಸ ಜಿಲ್ಲೆಯ ರಾಜಕಾರಣದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಉಮೇದಿನಲ್ಲಿ ಆನಂದ್‍ಸಿಂಗ್ ಇದ್ದಾರೆ.

ಸುಪ್ರಿಂಕೋರ್ಟಿನಿಂದ ಕ್ಲೀನ್‍ಚಿಟ್ ಸಿಕ್ಕರೆ ಹೊಸಪೇಟೆ (ವಿಜಯನಗರ ಕ್ಷೇತ್ರ)ಯಿಂದ ತಾನು ನಿಲ್ಲುವುದು ಇಲ್ಲವಾದರೆ ಮಗ ಸಿದ್ದಾರ್ಥನನ್ನು ನಿಲ್ಲಿಸುವ ಮತ್ತು ಹೊಸ ಜಿಲ್ಲೆ ಗರಿಮೆ ಇಟ್ಟುಕೊಂಡು ಗೆಲ್ಲುವ ತರಾತುರುಯಲ್ಲಿ ಆನಂದಸಿಂಗ್ ಇದ್ದಾರೆ.

ಮುಂದೆ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ತನ್ನ ಸಂಬಂಧಿಕರನ್ನು ನಿಲ್ಲಿಸುವ ವಿಚಾರವೂ ಆನಂದ್‍ಸಿಂಗ್‍ ತಲೆಯಲ್ಲಿದೆ. ಅದಕ್ಕೆ ಅಲ್ಲಿನ ಶಾಸಕ ಭೀಮಾನಾಯ್ಕ್ ವಿರೋಧ ಎದುರಿಸುತ್ತಿರುವ ಆನಂದ್‍ಸಿಂಗ್ ಮೇಲೆ ಹಲ್ಲೆ ಆಗಲು ಇದೂ ಒಂದು ಕಾರಣವಾಗಿತ್ತು. ಕಂಪ್ಲಿಯಲ್ಲೂ ಶಾಸಕ ಗಣೇಶ್‍ಗೆ ಎದುರಾಗಿ ಆನಂದ್‍ಸಿಂಗ್ ಸಂಬಂಧಿ ಸಂದೀಪ್‍ಸಿಂಗ್‍ನನ್ನು ಬೆಳೆಸುತ್ತಿದ್ದಾರೆ. ಹೊಸ ಜಿಲ್ಲೆಯಾದರೆ ಇಡೀ ಜಿಲ್ಲೆಯ ಮೇಲೆ ಪಾರುಪತ್ಯ ಸಾಧಿಸುವುದು ಆನಂದ್‍ಸಿಂಗ್ ಗುರಿಯಾಗಿದೆ.

ಇತ್ತ ಜಿಲ್ಲೆ ವಿಭಜನೆಯಾದರೆ ತಮ್ಮ ರಾಜಕೀಯ ಅಸ್ತಿತ್ವಕ್ಕೇ ಧಕ್ಕೆ ಎಂದು ಗಾಬರಿ ಬಿದ್ದಿರುವ ಶಾಸಕ ಸೋಮಶೇಖರ್‍ರೆಡ್ಡಿ ಮತ್ತು ಸಚಿವ ಶ್ರೀರಾಮುಲು ಜಿಲ್ಲೆಯ ವಿಭಜನೆ ಬೇಡ, ಬದಲಿಗೆ ಬಳ್ಳಾರಿ ಜಿಲ್ಲೆಗೆ ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಲಿ ಎಂದು ಮೀಡಿಯಾಗಳ ಮುಂದೆ ಹೇಳುವ ಮೂಲಕ ಸಿಎಂ ಮೇಲೆ ಒತ್ತಡ ಹಾಕುವ ಯತ್ನ ನಡೆಸಿದ್ದಾರೆ. ಬಳ್ಳಾರಿ ರೆಡ್ಡಿಗಳನ್ನು ಹದ್ದುಬಸ್ತಿನಲ್ಲಿ ಇಡಲು ಹೊಸ ಜಿಲ್ಲೆ ಮಾಡುವ ತಂತ್ರವನ್ನು ಸಂತೋಷ್ ಗ್ಯಾಂಗ್ ಹೆಣೆದಿದೆ. ಯಡಿಯೂರಪ್ಪನವರಿಗೂ ಅದೇ ಬೇಕಾಗಿದ್ದು ಆನಂದ್‍ಸಿಂಗ್ ಪರ ನಿಂತಿದ್ದಾರೆ ಎನ್ನಲಾಗುತ್ತಿದೆ.

ಹೊಸ ಜಿಲ್ಲೆಯಾದರೆ, ಹಳೆ ಬಳ್ಳಾರಿ ಜಿಲ್ಲೆ ‘ಆದಾಯವಿಲ್ಲದ’ ಜಿಲ್ಲೆಯಾಗಲಿದೆ. ಬಳ್ಳಾರಿ, ಕುರಗೋಡು ಮತ್ತು ಕೂಡ್ಲಿಗಿ ರೆವಿನ್ಯೂ ಲೆಕ್ಕದಲ್ಲಿ ಹಿಂದಿವೆ. ಹೊಸ ಜಿಲ್ಲೆಗೆ ರೆವಿನ್ಯೂವಿನಲ್ಲಿ ಮುಂದಿರುವ ಹೊಸಪೇಟೆ, ಕಂಪ್ಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳು ಸೇರಲಿವೆ.

ಕೊಟ್ಟೂರಿನ ಸಂಗಬಸವಸ್ವಾಮಿ ಮತ್ತು ಉಜ್ಜಯಿನಿ ಪೀಠದ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳನ್ನು ಬಳಸಿಕೊಂಡಿರುವ ಆನಂದ್‍ಸಿಂಗ್ ಯಡಿಯೂರಪ್ಪನವರ ವಿಶ್ವಾಸ ಗೆಲ್ಲುವಲ್ಲಿ ಮತ್ತು ರೆಡ್ಡಿಗಳ ಪೊರತಿರೋಧವನ್ನು ಮೆತ್ತಗೆ ಮಾಡುವಲ್ಲಿ ಸಫಲರಾಗಿದ್ದಾರೆ.

ಹೊಸ ಜಿಲ್ಲೆಯ ಪರ ಮತ್ತು ವಿರೋಧಗಳ ಹಿಂದೆ ಎಲ್ಲರದ್ದೂ ಸ್ವಾರ್ಥವಿದೆ, ಒಬ್ಬರು ಇನ್ನೊಬ್ಬರನ್ನು ಹಣಿಯುವ ಮಸಲತ್ತೂ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights