ಮೋದಿರನ್ನು ಶಾ ಕತ್ತಲೆಯಲ್ಲಿ ಇರಿಸಿದ್ದಾರೆ – ಉದ್ಧವ್‌ ಠಾಕ್ರೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕತ್ತಲೆಯಲ್ಲಿ ಇರಿಸಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮೊದಲೇ ಮಾತನಾಡಿದ್ದರು. 50:50 ಸೂತ್ರದ ಬಗ್ಗೆಯೂ ಚರ್ಚಿಸಲಾಗಿತ್ತು, ಆದರೂ ಅಮಿತ್‌ ಶಾ ಏನು ಗೊತ್ತಿಲ್ಲವೆಂದು ಹೇಳುವುದು ಸರಿಯಲ್ಲವೆಂದು ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಕಿಡಿಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ನಡೆಯುತ್ತಿರುವ ಸರ್ಕಸ್‌ ಮತ್ತು ಶಿವಸೇನೆಯ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್‌ ಶಾ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಿಜೆಪಿಯಿಂದ ದೇವೇಂದ್ರ ಫಡ್ನವೀಸ್‌ ಸಿಎಂ ಆಗಲಿದ್ದಾರೆ ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಇದನ್ನು ಪ್ರಧಾನಿ ಮೋದಿಯವರು ಚುನಾವಣಾ ರ್‍ಯಾಲಿಗಳಲ್ಲಿ ಪದೇ ಪದೆ ಹೇಳಿದ್ದರು. ಆದರೆ ಆಗ ಏನೊಂದು ಮಾತನಾಡದೆ, ವಿರೋಧ ಮಾಡಿರದ ಶಿವಸೇನೆ, ಈಗ ಹೊಸ ಹೊಸ ಬೇಡಿಕೆಗಳನ್ನು ಮುಂದಿಟ್ಟಿದೆ. ಇದನ್ನೆಲ್ಲಾ ಒಪ್ಪಲು ಸಾಧ್ಯವಿಲ್ಲ. ಈಗಲೂ ನಮ್ಮ ಜೊತೆ ಸೇರಲು ಶಿವಸೇನೆಗೆ ಅವಕಾಶವಿದೆ. ಇಲ್ಲ ಬಹುಮತವಿದ್ದರೆ, ಸರ್ಕಾರ ರಚಿಸಿಕೊಳ್ಳಲಿ” ಎಂದು ಹೇಳಿದ್ದಾರೆ.

ಅಮಿತ್‌ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನೆ ವಕ್ತಾರ ಸಂಜಯ್‌ ರಾವತ್, ಉದ್ಧವ್‌ ಠಾಕ್ರೆ ಅವರೂ ಸಹ ಮುಂದಿನ ಸಿಎಂ ಶಿವಸೇನೆ ಪಕ್ಷದಿಂದಲೇ ಆಗಲಿದ್ದಾರೆ ಎಂದು ಹೇಳಿದ್ದರು. ಆಗ ಬಿಜೆಪಿ ಯಾಕೆ ವಿರೋಧಿಸಲಿಲ್ಲ..? ಎಂದು ಮರು ಪ್ರಶ್ನಿಸಿದ್ದಾರೆ.

’ನಮಗೆ ಮೋದಿ ಅವರ ಬಗ್ಗೆ ಬಹಳ ಗೌರವವಿದೆ. ಅಮಿತ್‌ ಶಾ ನೀಡಿರುವ ಹೇಳಿಕೆ ಅವರಿಗೆ ಅವಮಾನ ಮಾಡಿದಂತಿದೆ. ಮೋದಿ ಅವರೊಂದಿಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು, ಸೂತ್ರವನ್ನು ಅಮಿತ್‌ ಶಾ ಒಪ್ಪುತ್ತಿಲ್ಲ. 50:50 ಸೂತ್ರದಂತೆ ಎರಡೂವರೆ ವರ್ಷದ ಅವಧಿಗೆ ಸಿಎಂ ಸ್ಥಾನ ಹಂಚಿಕೊಳ್ಳುವುದಾಗಿ ನಿರ್ಣಯಿಸಲಾಗಿತ್ತು. ಆದರೆ ಈಗ ಶಿವಸೇನೆ ವಿರುದ್ಧ ಬಿಜೆಪಿ ಸುಳ್ಳು ಹೇಳುತ್ತಿದೆ’ ಎಂದು ರಾವತ್‌ ಹೇಳಿದ್ದಾರೆ.

ಸರ್ಕಾರ ರಚಿಸುವಲ್ಲಿ ಎಲ್ಲಾ ಪಕ್ಷಗಳು ವಿಫಲವಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಸದ್ಯ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಎನ್‌ಸಿಪಿ, ಕಾಂಗ್ರೆಸ್‌, ಶಿವಸೇನೆ ಮೈತ್ರಿ ಲೆಕ್ಕಾಚಾರ ಇನ್ನೂ ನಿರ್ಣಾಯಕ ಹಂತ ತಲುಪಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights