ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಗೌರಿ ಹಬ್ಬ ಬಂದೇ ಬಿಡ್ತು…

ಗಣೇಶ ಬಂದಾ.. ಗಣೇಶ ಬಂದಾ… ಎಲ್ಲಿ ಕೇಳಿದ್ರೂ ಮುಂದಿನ ವಾರ ಆಚರಿಸಲ್ಪಡುವ ಗಣೇಶನ ಹಬ್ಬದ್ದೇ ಮಾತು. ಎಲ್ಲಿ ನೋಡಿದ್ರೂ ಬೆರಳಷ್ಟು ಗಾತ್ರದ ಗಣೇಶನಿಂದ ಹಿಡಿದು ಆಕಾಶದತ್ತ ತಲೆ ಮಾಡಿ ನೋಡುವಷ್ಟು ಎತ್ತರದ ಗಣೇಶನ ಮೂರ್ತಿಗಳು ಕಾಣಸಿಗುತ್ತವೆ. ಅಷ್ಟಕ್ಕೂ ಗಣೇಶ ಸುಮ್ನೆ ಬರೋದಿಲ್ಲ ರೀ. ಗೌರಿ ಬಂದ್ರೆನೇ ಗಣೇಶ ಬರೋದು. ಹೀಗಾಗಿ ಗೌರಿ ಹಬ್ಬದ ವಿಶೇಷತೆ ಕಡೆಗೂ ಕೊಂಚ ಗಮನ ಹರಿಸೋಣ.

ನಾಡಿನಾದ್ಯಂತ ಜನರು ಗೌರಿ ಹಬ್ಬಕ್ಕೆ ಸಿದ್ಧಗೊಳ್ಳುತ್ತಿದ್ದಾರೆ. ಮಹಿಳೆಯರೆಲ್ಲರೂ ಗೌರಿಯನ್ನ ಮನೆಗೆ ಬರ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಗಣೇಶ ಚತುರ್ಥಿಯ ಹಿಂದಿನ ದಿನ ಆಚರಿಸಲ್ಪಡುವ ಗೌರಿ ಹಬ್ಬದಂದು ಸ್ವರ್ಣಗೌರಿ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆಯಿದ್ದು ,ಗೌರಿಯನ್ನು ಭೂಮಿಯಲ್ಲಿ ಸ್ವಾಗತಿಸಲು ಗಣೇಶ ಬರುತ್ತಾನೆಂಬ ಪ್ರತೀತಿಯಿದೆ.
  
ಉತ್ತರಾಂಚಲದಲ್ಲಿರುವ ಗೌರಿಕುಂಡ ವಿಶೇಷ ಸ್ಥಾನಮಾನ ಗಳಿಸಿದೆ. ಗೌರಿಕುಂಡದಲ್ಲಿರುವ ಬಿಸಿನೀರು ವಿಶೇಷ ಮಹತ್ವ ಪಡೆದಿದೆ. ಈ ಬಿಸಿನೀರಿನ ಬುಗ್ಗೆಯಲ್ಲಿ ಗೌರಿ ಸ್ನಾನ ಮಾಡುವಾಗ ಗಣೇಶನನ್ನು ಸ್ನಾನದ ಕೋಣೆಯ ಹೊರಗೆ ನಿಲ್ಲಿಸಿದ್ದಳು. ಶಿವನು ಬಂದಾಗ ಗಣೇಶ ಶಿವನನ್ನು ಒಳಕ್ಕೆ ಬಿಡದೇ ತಡೆಯುತ್ತಾನೆ ಎಂಬ ಪೌರಾಣಿಕ ಕತೆಯಿದೆ. ಗೌರಿ ಕುಂಡದಲ್ಲಿ ಗೌರಿ ಹಬ್ಬದಂದು ಪವಾಡ ನಡೆಯುತ್ತದೆಂದು ನಂಬಿಕೆಯಿದೆ. ಇಲ್ಲಿ ಭಕ್ತರ ಭಕ್ತಿಗೆ ಒಲಿದ ಗೌರಿ ತನ್ನ ಕಣ್ಣನ್ನು ತೆರೆದು ಭಕ್ತರಿಗೆ ದರ್ಶನ ನೀಡುತ್ತಾಳೆನ್ನುವುದು ಜನಜನಿತವಾಗಿದೆ.

ಗಣೇಶ ಮತ್ತು ಸುಬ್ರಹ್ಮಣ್ಯನ ತಾಯಿ ಭಗವಾನ್ ಶಿವನ ಪತ್ನಿ ಗೌರಿ ತನ್ನ ಭಕ್ತರಿಗೆ ಶಕ್ತಿ, ಧೈರ್ಯ ತುಂಬುವ ಸಾಮರ್ಥ್ಯದಿಂದ ಪೂಜೆಗೆ ಅರ್ಹಳಾಗಿದ್ದಾಳಲ್ಲದೇ ಎಲ್ಲಾ ದೇವತೆಗಳಿಗಿಂತ ಶಕ್ತಿಶಾಲಿ. ಈಕೆಯನ್ನ ಆದಿ ಶಕ್ತಿ ಮಹಾಮಾಯಾ ಅವತಾರವೆಂದು ಪರಿಗಣಿಸಲಾಗುತ್ತದೆ.

ಭಾದ್ರಪದ ಮಾಸದ ತದಿಗೆಯ 13ನೇ ದಿನ ಗೌರಿಯನ್ನು ಮನೆಗೆ ಸ್ವಾಗತಿಸಲಾಗುತ್ತದೆ. ಮರು ದಿನ ಗೌರಿಯ ಪುತ್ರ ಗಣೇಶ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಭೂಮಿಗೆ ಆಗಮಿಸುತ್ತಾನೆ.  ಸ್ವರ್ಣ ಗೌರಿ ವ್ರತವನ್ನು ಇದೇ ಸಂದರ್ಭದಲ್ಲಿ ಗೌರಿಯನ್ನು ತೃಪ್ತಿಪಡಿಸಲು ಆಚರಿಸಲಾಗುತ್ತದೆ.

ಈ ದಿನ ಹಿಂದು ಮಹಿಳೆಯರು ಮತ್ತು ಯುವತಿಯರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸುತ್ತಾರೆ. ಜಲಗೌರಿ ಅಥವಾ ಅರಿಶಿನಗೌರಿಯ ಮೂರ್ತಿಗೆ ಭಕ್ತಿಯಿಂದ ಪೂಜೆ ನೆರವೇರಿಸಿ ಪುನೀತರಾಗುತ್ತಾರೆ, ಗೌರಿ ಮೂರ್ತಿಯನ್ನು ಅಕ್ಕಿ ಅಥವಾ ಗೋಧಿ ಧಾನ್ಯದೊಂದಿಗೆ ತಟ್ಟೆಯಲ್ಲಿರಿಸಿ, ವ್ರತದ ಪ್ರಕಾರ ಶುಚಿ ಮತ್ತು ಶ್ರದ್ಧೆಯಿಂದ ಪೂಜೆ ನೆರವೇರಿಸಲಾಗುತ್ತದೆ.


ಬಾಳೆಯ ಗೊನೆ ಮತ್ತು ಮಾವಿನ ಎಲೆಯಿಂದ ಅಲಂಕೃತವಾದ ಮಂಟಪವನ್ನು ಮೂರ್ತಿಯ ಸುತ್ತ ನಿರ್ಮಿಸಲಾಗುತ್ತದೆ. ಹತ್ತಿ, ರೇಶ್ಮೆ ವಸ್ತ್ರದಿಂದ, ಹೂವಿನ ಹಾರಗಳಿಂದ ಗೌರಿಯನ್ನು ಅಲಂಕರಿಸಲಾಗುತ್ತದೆ. ಮಹಿಳೆಯರು 16 ಗಂಟುಗಳ ಪವಿತ್ರ ಗೌರಿದಾರವನ್ನು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಈ ದಾರ ಹೆಣ್ಣಿಗೆ ಗೌರಿಯ ಆಶೀರ್ವಾದವಿದ್ದಂತೆ.

ವ್ರತದ ಅಂಗವಾಗಿ 5 ಬಾಗಿನಗಳನ್ನು ಅರ್ಪಿಸಲಾಗುತ್ತದೆ. ಪ್ರತಿ ಬಾಗಿನವು ಅರಶಿನ, ಕುಂಕುಮ, ಕಪ್ಪು ಬಳೆಗಳು, ಕಪ್ಪು ಮಣಿಗಳು, ಬಾಚಣಿಗೆ, ಸಣ್ಣ ಕನ್ನಡಿ, ತೆಂಗು, ಬ್ಲೌಸ್ ಪೀಸ್, ಅಕ್ಕಿ, ಗೋಧಿ ರವೆ, ಬೆಲ್ಲ ಮುಂತಾದವುಗಳು ಈ ಬಾಗಿನದಲ್ಲಿ ಇಡಲಾಗುತ್ತೆ.

ಒಂದು ಬಾಗಿನವನ್ನು ಗೌರಿ ದೇವತೆಗೆ ಅರ್ಪಿಸಿ, ಉಳಿದ ಗೌರಿ ಬಾಗಿನಗಳನ್ನು ಮುತ್ತೈದೆಯರಿಗೆ ನೀಡಲಾಗುತ್ತದೆ. ಗೌರಿ ಹಬ್ಬದ ಇನ್ನೊಂದು ವಿಶೇಷ ತವರು ಮನೆಯವರು ಗೌರಿ ಹಬ್ಬದ ಮಂಗಳದ್ರವ್ಯವನ್ನು ತಮ್ಮ ಕುಟುಂಬದ ವಿವಾಹಿತ ಯುವತಿಯರಿಗೆ ಕಳಿಸುತ್ತಾರೆ.

ಮಂಗಳದ್ರವ್ಯದ ಭಾಗವಾಗಿ ಹಣವನ್ನು ಕೂಡ ಕೆಲವರು ಕಳಿಸುತ್ತಾರೆ. ದಕ್ಷಿಣ ಭಾರತದಲ್ಲಿ ಹೋಳಿಗೆ, ಒಬ್ಬಟ್ಟು, ಪಾಯಸ, ಹುಗ್ಗಿ/ ಚಿತ್ರಾನ್ನ, ಬಜ್ಜಿ, ಕೋಸುಂಬರಿಯನ್ನು ಸಿದ್ಧಪಡಿಸಿ ದೇವರಿಗೆ ಅರ್ಪಿಸಲಾಗುತ್ತದೆ. ಭಗವಾನ್ ಗಣೇಶನ ಉತ್ಸವದಲ್ಲಿ ಕೂಡ ಈ ಆಚರಣೆ ಮುಂದುವರಿಯುತ್ತದೆ. ಹೀಗೆ ಗೌರಿ ಗಣೇಶ ಹಬ್ಬದ ಆಚರಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆಚರಣೆ ಹೇಗೇ ಇರಲಿ ಇಂದಿಗೂ ನಮ್ಮ ಸಂಸ್ಖ್ರತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಿ ಆಚರಿಸುತ್ತಿರುವ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights