ಮಾರುಕಟ್ಟೆಯಲ್ಲಿ ದೀಪಾವಳಿ ದೀಪಗಳ ಕಾರುಬಾರು : ವಿವಿಧ ಹಣತೆಗಳನ್ನ ಕಂಡು ಫಿದಾ ಆದ ನಟಿಯರು

ದೀಪದಿಂದ ದೀಪ ಹಚ್ಚು ಹಬ್ಬ ಬಂದೇ ಬಿಡ್ತು. ಮಾರುಕಟ್ಟೆಯಲ್ಲೀಗ ಕಲರ್ ಫುಲ್ ದೀಪಗಳದ್ದೇ ಕಾರುಬಾರು. ಎಲ್ಲಿ ನೋಡಿದ್ರೂ ಬಣ್ಣ ಬಣ್ಣದ, ವಿವಿಧವಾದ ಅಲಂಕಾರ ಉಳ್ಳ ದೀಪಗಳನ್ನ ನೋಡೋದಕ್ಕೆ ಎರಡು ಕಣ್ಣು ಸಾಲದು.

ಮಣ್ಣಿನ ದೀಪ, ಹಿತ್ತಾಳೆಯ ದೀಪ, ಲಕ್ಷ್ಮಿ ದೀಪ, ಗಜರಾಜ ದೀಪ ಹೀಗೆ ಹತ್ತು ಹಲವಾರು ದೀಪಗಳ ಪ್ರದರ್ಶನ ಹಾಗೂ ಮಾರಾಟ ಬಲೂ ಜೋರಾಗಿದೆ. ಇದರ ಜೊತೆಯಲ್ಲಿಯೇ ದೀಪಾವಳಿ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸೀರೆ, ಅಲಂಕಾರಿಕ ವಸ್ತುಗಳು ಹಾಗೂ ಕಣ್ಮನ ಸೆಳೆಯುವ ಸಾಮಗ್ರಿಗಳ “ಬೆಂಗಳೂರು ಉತ್ಸವ” ಕ್ಕೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಚಾಲನೆ ನೀಡಲಾಗಿದೆ.

ಬೆಂಗಳೂರು ಉತ್ಸವಕ್ಕೆ ಚಾಲನೆ ನೀಡಿದ ನಟಿಯರಾದ ಸವಿತಾ ದೇವರಾಜ ರೆಡ್ಡಿ, ಸ್ಪೂರ್ತಿ ವಿಶ್ವಾಸ್‌, ಮೋನಿಕಾ ರಾಜ್‌ ದೀಪಗಳು ಹಾಗೂ ಹಬ್ಬಕ್ಕೆ ವಿಶೇಷವಾಗಿ ಪ್ರದರ್ಶನಕ್ಕೆ ಇಟ್ಟಿರುವ ಸಾಮಗ್ರಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಸಮಾಜ ಸೇವಕಿ ಹಾಗೂ ನಟಿ ಸವಿತಾ ದೇವರಾಜ್‌ ರೆಡ್ಡಿ ಮಾತನಾಡಿ, ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಿರುವ ಕರಕುಶಲ ಕಾರರು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿರುವ ದೀಪಗಳ ಕಲೆಕ್ಷನ್‌ ಮನಸೂರೆಗೊಳ್ಳುವಂತೆ ಇದೆ. ಇಲ್ಲಿನ ಎಷ್ಟೊ ವೆರೈಟಿ ಸಾಮಗ್ರಿಗಳನ್ನು ನಾನು ಇದುವರೆಗೂ ನೋಡಿರಲಿಲ್ಲಾ ಎಂದ ಅವರು ಹಲವಾರು ದೀಪಗಳನ್ನು ಕೊಂಡುಕೊಂಡರು.

      

ನಟಿ ಹಾಗೂ ಕೆಡಬ್ಯುಎಎ ಸಂಸ್ಥಾಪಕ ನಿರ್ದೇಶಕಿ ಸ್ಪೂರ್ತಿ ಮಾತನಾಡಿ, ದೀಪಗಳ ಹಬ್ಬ ದೀಪಾವಳಿ. ದೇಶದ ಎಲ್ಲಾ ಭಾಗಗಳಲ್ಲೂ ಆಚರಿಸಲ್ಪಡುವ ಈ ಹಬ್ಬಕ್ಕೆ ಭಾರತೀಯರ ಜೀವನದಲ್ಲಿ ಬಹಳ ಮಹತ್ವಪೂರ್ಣವಾದ ಸ್ಥಾನವಿದೆ. ಅದರಲ್ಲೂ ಅಂಧಕಾರವನ್ನು ಹೋಗಲಾಡಿಸುವ ದೀಪಗಳಿಗೆ ಅವುಗಳದೇ ಆದ ವೈಶಿಷ್ಟ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲ್ಪಡುವ ಈ ಹಬ್ಬದ ಕೇಂದ್ರ ಬಿಂದು ದೀಪಗಳು. ನಗರದ ಜನರಿಗೆ ದೇಶದ ವಿವಿಧ ಭಾಗದ ವೈವಿಧ್ಯಮಯ ದೀಪಗಳನ್ನು ಪ್ರದರ್ಶಿಸಬೇಕು ಹಾಗೂ ಅವುಗಳನ್ನು ಕೊಳ್ಳುವ ಅವಕಾಶ ನೀಡುವ ಉದ್ದೇಶದಿಂದ ಅಕ್ಟೋಬರ್‌ 11 ರಿಂದ 20 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ದೀಪಾವಳಿ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಆಯೋಜಕರಾದ ಅಫ್ತಾಬ್‌ ಮಾತನಾಡಿ, ಈ ಬಾರಿಯ ಈ ಉತ್ಸವದಲ್ಲಿ ದೀಪಗಳ ಪ್ರಮುಖ ಆಕರ್ಷಣೆಯಾಗಿರಲಿವೆ. ವೈವಿಧ್ಯಮಯ ಮಣ್ಣಿನ ದೀಪಗಳೂ, ಲೋಹದ ದೀಪಗಳು, ತರೇ ವಾರಿ ಲೈಟಿಂಗ್‌ ಆಯ್ಕೆಗಳ ಶ್ರೇಣಿ ಇಲ್ಲಿರಲಿದೆ. ದೇಶದ ಎಲ್ಲಾ ಭಾಗಗಳಿಂದ ಆಗಮಿಸಿದ ಕರಕುಶಲಕಾರರು ತಯಾರಿಸಿದ ವಿಭಿನ್ನ ರೀತಿಯ ದೀಪಗಳ ಪ್ರದರ್ಶನ ಇಲ್ಲಿರಲಿದೆ.

ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ತರೇವಾರಿ ದೀಪಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ದೀಪಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ ಎಂದು ಹೇಳಿದರು.

100 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ ಎಂದರು.

ಇದರ ಜೊತೆಯಲ್ಲಿಯೇ, ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

ಕಾರ್ಯಕ್ರಮದಲ್ಲಿ ರೂಪದರ್ಶಿ ಮೋನಿಕಾ ರಾಜ್‌, ಚಿತ್ರಕಲಾ ಪರಿಷತ್ತಿನ ಅಪ್ಪಾಜಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights