ಮಧ್ಯಂತರ ಚುನಾವಣೆಗೆ ಸಿದ್ದತೆ ಆರಂಭಿಸಿದ ಸಿದ್ದರಾಮಯ್ಯ, ವೀಕ್ಷಕರ ನೇಮಕ….

ರಾಜ್ಯ ಬಿಜೆಪಿ ಸರ್ಕಾರ ‘ಆಪರೇಷನ್ ಕಮಲದ ಅನೈತಿಕ ಕೂಸು’. ಹಣ, ಆಮಿಷ, ಒತ್ತಡ ತಂತ್ರ ಉಪಯೋಗಿಸಿ ಶಾಸಕರನ್ನು ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರ ಸರ್ಕಾರಕ್ಕೆ ಸ್ಪಷ್ಟ ಜನಾದೇಶವಿಲ್ಲ. ಈ ಸರ್ಕಾರ ಯಾವ ಕ್ಷಣದಲ್ಲಾದರೂ ಬಿದ್ದು, ಮಧ್ಯಂತರ ಚುನಾವಣೆ ಬರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಗೋಕಾಕ, ಕಾಗವಾಡ ಮತ್ತು ಅಥಣಿ ಉಪಚುನಾವಣೆಗೆ ಸಂಬಂಧಿಸಿದಂತೆ ನಮ್ಮ‌ ಪಕ್ಷದಿಂದ ವೀಕ್ಷಕರನ್ನು ನೇಮಿಸಲಾಗಿದೆ. ಅವರು ಈ ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಸಂಗ್ರಹಿಸಿ ನಮಗೆ ವರದಿ ಸಲ್ಲಿಸುತ್ತಾರೆ. ಆ ವರದಿಯ ಆಧಾರದ ಮೇಲೆ ನಾವು ನಮ್ಮ‌ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಮಧ್ಯಂತರ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದಾರೆ.

ನಮ್ಮದು ಹೈಕಮಾಂಡ್ ಪಕ್ಷ ಅಲ್ಲ ಅಂದಿದ್ದ ಬಿಜೆಪಿ ನಾಯಕರು ಈಗ ಮಾಡುತ್ತಿರುವುದು ಏನು? ವಾರದಲ್ಲಿ 3 ದಿನ ದೆಹಲಿಗೆ ಓಡಿ ಹೋಗುತ್ತಿದ್ದಾರೆ. ಅಮಿತ್ ಶಾ ಅನುಮತಿಯಿಲ್ಲದೆ ಯಡಿಯೂರಪ್ಪನವರು ಏನೂ ಮಾಡದಂತಹ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಪ್ರತಿಯೊಂದಕ್ಕೂ ಹೈಕಮಾಂಡ್ ಒಪ್ಪಿಗೆ ಪಡೆಯಬೇಕಾಗಿದೆ. ಇದೇ ಬಿಜೆಪಿಗರ ನಿಜಬಣ್ಣ ಎಂದ ವ್ಯಂಗ್ಯವಾಡಿದ್ದಾರೆ.

ನಾವೀಗ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ನಮ್ಮ ವಿರೋಧಿ ಕೋಮುವಾದಿ ಬಿಜೆಪಿ ಪಕ್ಷವೇ ಹೊರತು ಜೆಡಿಎಸ್ ಅಲ್ಲ. ನಾವ್ಯಾರು ಜೆಡಿಎಸ್ ಪಕ್ಷದವರ ಮೇಲೆ ಹಗೆ ಸಾಧಿಸುತ್ತಿಲ್ಲ. ಜಾತ್ಯಾತೀತ ಶಕ್ತಿಗೆ ಕೋಮುವಾದಿ ಶಕ್ತಿ ವಿರೋಧಿಯಾಗಿರುತ್ತದೆಯೇ ಹೊರತು, ಇನ್ನೊಂದು ಜಾತ್ಯಾತೀತ ಶಕ್ತಿಯಲ್ಲ ಎಂದು ಹೇಳುವ ಮೂಲಕ ಬಿಜೆಪಿಯನ್ನು ಟಾರ್ಗೆಟ್ ಮಾಡಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ.

ಯಡಿಯೂರಪ್ಪ, ಬಡವನ ಹಸಿವಿನ ಬಗ್ಗೆ ನೀವು ಅರಿಯದಷ್ಟು ನಿಮ್ಮ ಹೊಟ್ಟೆ ತುಂಬಿದೆಯೇ? ಅಥವಾ ನಿಮ್ಮ ಪಕ್ಷವು ಗಣ್ಯರ ಹಸಿವನ್ನು ಮಾತ್ರ ಪೂರೈಸುತ್ತದೆಯೇ? ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚುವ ಯಾವುದೇ ಪ್ರಯತ್ನವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್ ನಂತಹ ಜನಪರವಾದ ಯೋಜನೆಗಳು ಮತ್ತು ನೀತಿಗಳನ್ನು ಕಡಿಮೆ ಮಾಡಲು ಅಥವಾ ನಾಶಮಾಡಲು ಬಿಜೆಪಿ ಸರ್ಕಾರ ಮುಂದಾಗುತ್ತಿದೆ. ನಮ್ಮ ಬೆದರಿಕೆಯ ನಂತರ ಅನ್ನ ಭಾಗ್ಯ ನಿಲ್ಲಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು. ಇಂದಿರಾ ಕ್ಯಾಂಟೀನ್ ಬಗ್ಗೆಯೂ ಸಹ ನಮ್ಮ ನಿಲುವು ಭಿನ್ನವಾಗಿರುವುದಿಲ್ಲ. ಹಾಗಾಗಿ ಇಂದಿರಾ ಕ್ಯಾಂಟೀನ್ ಮುಚ್ಚಲು ಹೋದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಜನರಿಗೆ ಇಂದಿರಾ ಕ್ಯಾಂಟೀನ್ ಹೊಟ್ಟೆ ತುಂಬಿಸುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯಗಳಿಗೆ ಬಲಿಯಾದ ಅನೇಕ ಅಂಚಿನಲ್ಲಿರುವ ವರ್ಗಗಳ ಹಸಿವನ್ನು ನೀಗಿಸುವ ಕಾರ್ಯಕ್ರಮವಿದು. ಕ್ಯಾಂಟೀನ್‌ಗಳನ್ನು ಮುಚ್ಚುವ ಯಾವುದೇ ಪ್ರಯತ್ನವು ನಗರ ಬಡತನ ಮತ್ತು ಬಡ ಕುಟುಂಬಗಳ ಜೀವನೋಪಾಯವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಬಜೆಟ್ 2.3 ಲಕ್ಷಕ್ಕಿಂತ ಹೆಚ್ಚಿನದಾಗಿದೆ. ಅದರಲ್ಲಿ ಯಡಿಯುರಪ್ಪನವರು ಕೇವಲ 300-400 ಕೋಟಿ ನೀಡುವ ಮೂಲಕ ಇಂದಿರಾ ಕ್ಯಾಂಟೀನ್ ನಡೆಯಲು ಅವಕಾಶ ಕಲ್ಪಿಸುವುದು ಕಷ್ಟವೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯನವರು ನಿರ್ಗತಿಕರಿಗೆ ಆಹಾರಕ್ಕಾಗಿ ಸಬ್ಸಿಡಿಯ ಅರ್ಹತೆ ಇಲ್ಲವೆನ್ನುವುದಾದರೆ, ಮುಂದುವರಿದು ವರ್ಗಗಳಿಗೂ ಸಹ ಸಬ್ಸಿಡಿಯನ್ನು ಕೊಡಬಾರದು ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights