ಬಿಜೆಪಿ ಸೇರಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಆಸ್ತಿ 18 ತಿಂಗಳಲ್ಲಿ ಏರಿಕೆ ಎಷ್ಟು!!

ಆಪರೇಷನ್‌ ಕಮಲಕ್ಕೆ ಒಳಗಾಗಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಪತನಕ್ಕೆ ಕಾರಣನಾಗಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ರವರ ಆಸ್ತಿಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕುತೂಹಲದ ವಿಚಾರವೆಂದರೆ ಅವರು ರಾಜಿನಾಮೇ ನೀಡಿದ ಹದಿನೈದು ದಿನಗಳ ಅವಧಿಯಲ್ಲಿಯೇ ಮುಖ್ಯವಾಗಿ ಆಗಸ್ಟ್ 2 ಮತ್ತು 7 ರ ನಡುವೆ 48 ಕೋಟಿ ರೂ. ಅವರ ಖಾತೆಗೆ ಜಮಾ ಆಗಿದೆ ಎಂದು ಹಲವು ವರದಿಗಳು ತೋರಿಸಿವೆ.

ಕರ್ನಾಟಕದ ಶ್ರೀಮಂತ ರಾಜಕಾರಣಿಯಾದ ಎಂಟಿಬಿ ನಾಗರಾಜ್ ಆಸ್ತಿಯಲ್ಲಿ ಕೇವಲ 18 ತಿಂಗಳ ಅವಧಿಯಲ್ಲಿ 185.7 ಕೋಟಿ ರೂ ಏರಿಕೆಯಾಗಿದೆ ಎಂದು ಅವರ ಇತ್ತೀಚಿನ ಉಪಚುನಾವಣಾ ಅಫಿಡವಿಟ್ ತೋರಿಸುತ್ತದೆ.

ಹೊಸಕೋಟೆಯ ಬಿಜೆಪಿ ಅಭ್ಯರ್ಥಿಯಾಗಿ ಅವರು ಸಲ್ಲಿಸಿದ ಇತ್ತೀಚಿನ ಅಫಿಡವಿಟ್ ಪ್ರಕಾರ, ನಾಗರಾಜ್ ಮತ್ತು ಅವರ ಪತ್ನಿ ಶಾಂತಕುಮಾರಿ ಅವರ ಒಟ್ಟು ಆಸ್ತಿ ಮೌಲ್ಯ 1201.50 ಕೋಟಿ ರೂ ಆಗಿದೆ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ 2018 ರ ಮೇನಲ್ಲಿ ಅವರು ಘೋಷಿಸಿದ ಸ್ವತ್ತುಗಳಿಗೆ ಹೋಲಿಸಿದರೆ ಇದು ಅವರ ಸಂಪತ್ತಿನ 15.5% ಹೆಚ್ಚಳವಾಗಿದೆ. 2018 ಮತ್ತು 2019 ರಲ್ಲಿ ಸಲ್ಲಿಸಲಾದ ಅಫಿಡವಿಟ್‌ಗೆ ಹೋಲಿಸಿದಲ್ಲಿ ನಾಗರಾಜ್ ಅವರ ಆಸ್ತಿ 104.53 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ  ಮತ್ತು ಅವರ ಪತ್ನಿ ಶಾಂತಕುಮಾರಿಯ ಆಸ್ತಿ 44.95 ಕೋಟಿ ರೂ ಹೆಚ್ಚಾಗಿದೆ ಎಂದು ತೋರಿಸುತ್ತದೆ.

ಹಾಗಾದರೆ ಎಂಟಿಬಿ ನಾಗರಾಜ್ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಹಣವನ್ನು ಹೇಗೆ ಸಂಗ್ರಹಿಸಿದರು ಎಂದು ಅವರ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ನಾಗರಾಜ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದನ್ನು ವಿರೋಧಿಸುವ ಬಿಜೆಪಿಯ ಮೂಲಗಳು, “ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದಕ್ಕಾಗಿ ಅವರಿಗೆ ಮತ್ತು ಇನ್ನೊಬ್ಬ ಶಾಸಕ ಡಾ.ಕೆ ಸುಧಾಕರ್‌ರವರಿಗೆ ತಲಾ 50 ಕೋಟಿ ರೂ ಹಣ ನೀಡಲಾಗಿದೆ ಎಂದು ತಿಳಿಸಿದ್ದಾರೆಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಡಿ.ಕೆ ಶಿವಕುಮಾರ್‌ ಸೇರಿದಂತೆ ಇತರ ನಾಯಕರು ಎಂಟಿಬಿ ನಾಗರಾಜ್‌ರವರನ್ನು ರಾಜಿನಾಮೆ ಹಿಂಪಡೆಯುವಂತೆ ಮನವೊಲಿಸಿದ್ದರು. ಆಗ ಎಂಟಿಬಿ ನಾಗರಾಜ್‌ ಸುಧಾಕರ್‌ರವರು ರಾಜಿನಾಮೆ ವಾಪಸ್‌ ಪಡೆದರೆ ನಾನು ಕೂಡ ರಾಜಿನಾಮೆ ವಾಪಸ್‌ ಪಡೆಯುತ್ತೇನೆ ಎಂಬ ಷರತ್ತು ಹಾಕಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಅದಾದ ನಂತರ ಜುಲೈ 15 ರಂದು ನಾಗರಾಜ್‌ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದರು. ಅವರು ಈ ಹೇಳಿಕೆ ನೀಡಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಸಹಾಯಕ ಸಂತೋಷ್ ಅವರೊಂದಿಗೆ ಖಾಸಗಿ ಚಾರ್ಟರ್ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು.

ಜುಲೈ 23 ರಂದು ಎಚ್‌.ಡಿ ಕುಮಾರಸ್ವಾಮಿಯವರು ಬಹುಮತ ಸಾಬೀತುಪಡಿಸಲು ವಿಫಲವಾದ ನಂತರ ಮೈತ್ರಿ ಸರ್ಕಾರ ಬಿದ್ದುಹೋಯಿತು. ಜುಲೈ 26 ರಂದು ಬಿ.ಎಸ್‌ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ಅನರ್ಹಗೊಂಡಿದ್ದ ಶಾಸಕರು ಮುಂಬೈನ ಐಷರಾಮಿ ಹೋಟೆಲ್‌ನಿಂದ ಕರ್ನಾಟಕ್ಕೆ ವಾಪಸ್‌ ಆದರು.

ಅದಾಗಿ ನಾಲ್ಕು ದಿನಗಳ ನಂತರ ಆಗಸ್ಟ್‌ 2 ರಿಂದ 7ರವರೆಗೆ ಒಟ್ಟು 53 ಬಾರಿ 90 ಲಕ್ಷಕ್ಕೂ ಅಧಿಕ ಮತ್ತು ಒಂದು ಕೋಟಿಗಿಂತ ಕಡಿಮೆ ಮೊತ್ತದ ಹಣವನ್ನು ಅಂದರೆ 48 ಕೋಟಿ ರೂಗಳನ್ನು ಎಂಟಿಬಿ ನಾಗರಾಜ್‌ರವರ ಖಾತೆಗೆ ಜಮಾ ಮಾಡಲಾಗಿದೆ. ಅದರ ವಿವರ ಕೆಳಗಿನಂತಿದೆ.

ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್

ಒಟ್ಟಿನಲ್ಲಿ ಆಪರೇಷನ್ ಕಮಲ ನಡದೇ ಇಲ್ಲ ಎಂದು ಆಗ ಯಡಿಯೂರಪ್ಪ ಘಂಟಾಘೋಷವಾಗಿ ಹೇಳುತ್ತಿದ್ದರು. ರಾಜಿನಾಮೆ ನೀಡಿದ ಶಾಸಕರಿಗೂ ನಮಗೂ ಸಂಬಂಧವೇ ಇಲ್ಲ ಎಂದಿದ್ದವರು ಈಗ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಗೆಲ್ಲಿಸಿ ಮಂತ್ರಿ ಮಾಡುತ್ತೇನೆ ಎಂದು ಸಾರುತ್ತಿದ್ದಾರೆ.

ಇನ್ನೊಂದು ಕಡೆ ಅನರ್ಹ ಶಾಸಕರ ಆಸ್ತಿ ಏರುತ್ತಲೇ ಇದೆ. ಕುದುರೆ ವ್ಯಾಪರ ನಡೆದಿದೆ ಎಂಬ ಆರೋಪಕ್ಕೆ ಇವೆಲ್ಲವೂ ದಟ್ಟ ಸಾಕ್ಷಿಗಳಾಗುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights