ಬಿಜೆಪಿ ಸರ್ಕಾರದ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ : 3 ದಿನಗಳ ಅಧಿವೇಶನದಲ್ಲಿ ಹಲವು ವಿಷಯಗಳ ಬಿಸಿ ಬಿಸಿ ಚರ್ಚೆ

ನೆರೆ ಹಿನ್ನೆಲೆಯಲ್ಲಿ ಬೆಳಗಾವಿ ಬದಲು ಬೆಂಗಳೂರಿನಲ್ಲೇ ಅಧಿವೇಶನ ನಡೆಯುತ್ತಿದೆ. ಮೂರು ದಿನಗಳ ಅಧಿವೇಶನದಲ್ಲಿ ಹಲವು ವಿಷಯಗಳು ಬಿಸಿ ಬಿಸಿ ಚರ್ಚೆ, ಆರೋಪ-ಪ್ರತಿ ಆರೋಪಗಳಿಗೆ ವೇದಿಕೆ ಒದಗಿಸಲಿವೆ. ಇದೇ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಮಾಡೋ ವಿವಾದಾತ್ಮಕ ನಿರ್ಧಾರವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಇಂದಿನಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಮಾಧ್ಯಮಗಳ ನೇರ ಪ್ರಸಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಬಿಜೆಪಿ ಸರ್ಕಾರದ ಈ ಅನಗತ್ಯ ನಿರ್ಧಾರ ಪ್ರತಿಪಕ್ಷಗಳು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಬಿಜೆಪಿ ಸರ್ಕಾರದ ಎರಡನೇಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಮಾಡುವ ಮೂಲಕ ಆರಂಭದಲ್ಲೇ ಬಿಜೆಪಿ ಸರ್ಕಾರ ವಿವಾದಕ್ಕೆ ಗುರಿಯಾಗಿದೆ. ಕೇವಲ ಮೂರು ದಿನ ನಡೆಯುವ ಅಧಿವೇಶನದಲ್ಲಿ ಬೊಕ್ಕಸ ಖಾಲಿ, ನೆರೆ ಪರಿಹಾರ ಕಾರ್ಯಗಳ ಕುರಿತು ಆಡಳಿತ ಮತ್ತು ವಿಪಕ್ಷಗಳ ನಡುವೆ ಚರ್ಚೆ ತಾರಕಕ್ಕೇರುವ ಸಾಧ್ಯತೆಗಳಿವೆ. ಜೊತೆಗೆ ರೈತರ ಭಾರೀ ಪ್ರತಿಭಟನೆಯೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೆ.

ಈ ಚಳಿಗಾಲದ ಅಧಿವೇಶನದಲ್ಲಿ ಬೊಕ್ಕಸ ಖಾಲಿ, ನೆರೆ ಪರಿಹಾರ ಕಾರ್ಯ, ಕೇಂದ್ರದ ಅಲ್ಪ ಪರಿಹಾರ ವಿಚಾರಗಳೇ ಹೈಲೈಟ್. ಬೊಕ್ಕಸ ಖಾಲಿ, ನೆರೆ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸನ್ನದ್ಧವಾಗಿವೆ. ಪ್ರತಿಪಕ್ಷಗಳ ಠಕ್ಕರ್ ಗೆ ಪ್ರತಿಯಾಗಿ ಠಕ್ಕರ್ ಕೊಡಲು ಬಿಜೆಪಿಯೂ ತಕ್ಕ ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಅಂಕಿ-ಅಂಶಗಳ ಮೂಲಕ ಉತ್ತರ ಕೊಡಲು ಬಿಜೆಪಿ ಮುಂದಾಗಿದೆ.

ಕಾಂಗ್ರೆಸ್ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ನೇಮಕರಾಗಿದ್ದಾರೆ. ಇದು ಸದನದಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಬಲ ತುಂಬಲಿದ್ದು, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ವಾಕ್ಸಮರ ಸಾಕಷ್ಟು ಕುತೂಹಲ ಹುಟ್ಟಿಸಲಿದೆ. ಇನ್ನುಳಿದಂತೆ ಮೊದಲ ದಿನವೇ ಲೇಖಾನುದಾನಕ್ಕೆ ಸರ್ಕಾರ ಸದನದಲ್ಲಿ ಅನುಮೋದನೆ ಪಡೆದುಕೊಳ್ಳಲಿದೆ. ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಮೈತ್ರಿ ಅವಧಿಯ ಬಜೆಟ್ ಅನ್ನೇ ಉಳಿದ ಅವಧಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ನೆರೆಪೀಡಿತ ಜಿಲ್ಲೆಗಳಿಗೆ ಕೆಲವೊಂದು ಹೊಸ ಪರಿಹಾರ ಕಾರ್ಯಕ್ರಮಗಳನ್ನೂ ಸೇರಿಸಿ ಲೇಖಾನುದಾನಕ್ಕೆ ಒಪ್ಪಿಗೆ ತೆಗೆದುಕೊಳ್ಳಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights