ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ಭಾರೀ ಮಳೆ : ಜನಜೀವನ ಅಸ್ತವ್ಯಸ್ತ – ನೀರಾದ ರಸ್ತೆಗಳು

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವರುಣನ ಅರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಡಿನ್ನೆಲ್ಲೆಡೆ ಜನ ವಿಜಯ ದಶಮಿ ಹಬ್ಬದ ಆಚರಣೆಯಲ್ಲಿ ಸಂತಸದಲ್ಲಿದ್ದರೆ, ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ಮಾತ್ರ ಹಬ್ಬದ ವಾತಾವರಣಕ್ಕೆ ವರುಣ ಅಡ್ಡಿಪಡಿಸಿದ್ದಾನೆ.

ಹೌದು..  ಕೊಪ್ಪಳದಲ್ಲಿ ಅಧಿಕ ಮಳೆ ಸುರಿಯುತ್ತಿದ್ದು ಹಬ್ಬಕ್ಕೆ ವ್ಯಾಪರಿಗಳು ವ್ಯಾಪಾರವಿಲ್ಲದೆ ಮಂದಹಾಸ ಕಳೆದುಕೊಂಡಿದ್ದಾರೆ. ಅಧಿಕ ಮಳೆಯಿಂದಾಗಿ ಜನ ಮಾರುಕಟ್ಟೆಗೂ ತೆರಳದಂತಾ ಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿದಾಡುತ್ತಿದೆ. ಇನ್ನು ಗಂಗಾವತಿ ಗುಡ್ಡಮ್ಮ ಕ್ಯಾಂಪ್‍ನಲ್ಲಿ ರೈತರು ಮಾರಾಟ ಮಾಡಲು ಹೂ, ಬಾಳೆ ಕಂಬ, ಕಬ್ಬು ತಂದಿದ್ದರು. ಆದರೆ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಇದನ್ನೆಲ್ಲಾ ಮಾರಾಟ ಮಾಡಲು ತೊಂದರೆಯಾಗುತ್ತಿದೆ.

ಜಿಟಿಜಿಟಿ ಮಳೆಯಲ್ಲಿಯೇ ನಿಂತು ವ್ಯಾಪಾರಸ್ಥರು ಹೂ, ಹಣ್ಣು ವ್ಯಾಪಾರ ಮಾರಾಟ ಮಾಡುತ್ತಿದ್ದರೂ ಜನರು ಮಾತ್ರ ಮಾರ್ಕೆಟ್‍ಗೆ ಬರುತ್ತಿಲ್ಲ. ಜನರು ಮಾರ್ಕೆಟ್‍ಗೆ ಬರದ ಕಾರಣ ಹಾಕಿದ ಬಂಡವಾಳವಾದ್ರೂ ಬರುತ್ತೋ ಇಲ್ಲವೋ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಜಿನಿಗುಡುತ್ತಿದ್ದ ಮಾರ್ಕೆಟ್ ಈಗ ಜಿಟಿಜಿಟಿ ಮಳೆಯಿಂದ ಬಿಕೋ ಎನ್ನುತಿದೆ.

ಇತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಹೊಸಪೇಟೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೊಸಪೇಟೆ ನಗರದಲ್ಲಿ ಕಳೆದ ಮೂರು ಗಂಟೆಯಿಂದ ಎಡೆ ಬಿಡದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರ ಜೀವನ ಅಸ್ತವ್ಯಸ್ತವಾಗಿದೆ. ನಗರದ ಜಂಬುನಾಥಹಳ್ಳಿ ಸುಡುಗಾಡು ಸಿದ್ದರ ಕಾಲೋನಿಯಲ್ಲಿ ಮನೆಗಳು, ಗುಡಿಸಲುಗಳು ಜಲಾವೃತವಾಗಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ.

ಹುಬ್ಬಳ್ಳಿ ಹಾಗೂ ಹಾವೇರಿ ಜಿಲ್ಲೆಯ ಗಡಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಣ್ಣಿ ಹಳ್ಳದ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ಬೆಣ್ಣಿಹಳ್ಳದ ನೀರು ಏರಿದ್ದರಿಂದ ಯಮನೂರ, ತಡಹಾಳ, ಗುಡಿಸಾಗರ, ನವಲಗುಂದ ಭಾಗದ ರೈತರ ಜಮೀನಿಗೆ ನೀರು ನುಗ್ಗಿದೆ. ಭಾನುವಾರದಿಂದ ಹುಬ್ಬಳ್ಳಿ ಹಾಗೂ ಹಾವೇರಿ ಗಡಿ ಭಾಗದಲ್ಲಿ ಮಳೆ ಸುರಿಯುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights