ಪ್ರಾಣಿಪ್ರಿಯೆ ಅಮೇರಿಕಾದ ಮಹಾನ್ ಮಹಿಳೆ ಸ್ಯಾಲಿ ವಾಕರ್ ಇನ್ನಿಲ್ಲ…!

ಸ್ಯಾಲಿ ವಾಕರ್ ಇನ್ನಿಲ್ಲ ಎನ್ನುವ ಸುದ್ದಿ ನಂಬೋಕೆ ಆಗ್ತಿಲ್ಲ. ಈ ಮಹಾನ್ ಮಹಿಳೆ ಅಮೆರಿಕದವರು. ಮೈಸೂರಿನ ಜತೆಗೆ ಅದರಲ್ಲೂ ಮೃಗಾಲಯದ ಜತೆಗೆ ಗಾಢವಾದ ನಂಟನ್ನು ಹೊಂದಿದ್ದರು. ಇವತ್ತು ಮೈಸೂರು ಮೃಗಾಲಯದಲ್ಲಿ ಯೂತ್ ಕ್ಲಬ್ ಎನ್ನುವ ಶೈಕ್ಷಣಿಕ ಕಾರ್ಯಕ್ರಮದ ಮೂಲ ಇದೇ ಸ್ಯಾಲಿ ವಾಕರ್.

80ರ ದಶಕದಲ್ಲಿ ಮೈಸೂರು ಮೃಗಾಲಯದಲ್ಲಿ ಸಿ.ಡಿ.ಕೃಷ್ಣೇಗೌಡ ಎನ್ನುವ ನಿರ್ದೇಶಕರಿದ್ದರು. ಆಗ ಪ್ರವಾಸಿಗಳಾಗಿ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದ ಸ್ಯಾಲಿ ನಂತರದ ದಿನಗಳಲ್ಲಿ ಮೈಸೂರಿನ ನಿವಾಸಿಯಾಗಿಬಿಟ್ಟರು. ಈಕೆ ಅಪ್ಪಟ ಪ್ರಾಣಿಪ್ರಿಯೆ. ನಿತ್ಯ ಮೃಗಾಲಯಕ್ಕೆ ಬಂದು ಇಡೀ ದಿನ ಕಳೆಯುತ್ತಿದ್ದರು. ಈಕೆಯ ಆಸಕ್ತಿ ಗಮನಿಸಿದ ಕೃಷ್ಣೇಗೌಡರು ಮೃಗಾಲಯದಲ್ಲಿ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಡರು. ಅಲ್ಲಿಂದ ಆರಂಭಗೊಂಡ ಇವರ ಮೃಗಾಲಯದ ಸಂಬಂಧ ಅನೇಕ ವರ್ಷಗಳ ಕಾಲ ಮುಂದುವರಿಯಿತು.

ಕಾಲಕ್ರಮೇಣ ಫ್ರೆಂಡ್ಸ್ ಆಫ್ ಮೈಸೂರು ಝೂ ಎನ್ನುವ ತಂಡ ಕಟ್ಡಿದರು. ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಿದರು. ಮೃಗಾಲಯಕ್ಕೆ ವೈಜ್ಞಾನಿಕ ತಳಹದಿ ಹಾಕಿಕೊಟ್ಡರು.ಮೈಸೂರು ಮೃಗಾಲಯ ಜಗತ್ತಿನ ಅನೇಕ ಶ್ರೇಷ್ಠ ಮೃಗಾಲಯಗಳ ಜತೆ ಸಂಪರ್ಕ ಸಾಧಿಸಲು ಸೇತುವೆಯಾದರು. 90ರ ದಶಕದಲ್ಲಿ ನಾನು ಮತ್ತು ಕೆಲ ಗೆಳೆಯರು ಮೈಸೂರು ಮೃಗಾಲಯದಲ್ಲಿ ಯೂತ್ ಕ್ಲಬ್ ಹಾಗೂ ಸ್ವಯಂ ಸೇವಕರ ತಂಡವನ್ನು ಹೊಸದಾಗಿ ಕಟ್ಟೋದಕ್ಕೆ ಸ್ಯಾಲಿ ಮಾಡಿದ್ದ ಕೆಲಸಗಳೇ ಪ್ರೇರಣೆ. ಮೈಸೂರು ಮೃಗಾಲಯಕ್ಕೆ ಬಂದಾಗ‌ ನಮ್ಮನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿ, ಮಾರ್ಗದರ್ಶನ ನೀಡುತ್ತಿದ್ದರು.

ಅನಂತರ ಕೊಯಮತ್ತೂರಿಗೆ ಸ್ಥಳಾಂತರಗೊಂಡ ಸ್ಯಾಲಿ ಅಲ್ಲಿ ಝೂ ಔಟರೀಚ್ ಆರ್ಗನೈಸೇಷನ್ ಎನ್ನುವ ವಿಶ್ವದ ಅತ್ಯುತ್ತಮ ಸಂಶೋಧನಾ ಸಂಸ್ಥೆ ಹುಟ್ಟು ಹಾಕಿದರು. ಆ ಮೂಲಕ ಇಡೀ ದಕ್ಷಿಣ ಏಷ್ಯಾದ ಅನೇಕ ದೇಶಗಳ ಮೃಗಾಲಯಗಳ ಸುಧಾರಣಾ ಕೆಲಸ ಮಾಡಿದರು.

ಜಾಗತಿಕ ಮೃಗಾಲಯಗಳ ಸುಧಾರಣೆ, ವೈಜ್ಞಾನಿಕ ಚಿಂತನೆ ಹಾಗೂ ಆಧುನಿಕ ಸ್ಪರ್ಶತೆ ನೀಡುವಲ್ಲಿ ಸ್ಯಾಲಿ ವಾಕರ್ ಕೊಡುಗೆ ಅಪಾರ. ವಿಶ್ವದ ಅತ್ಯಂತ ಬೃಹತ್ ಪ್ರಾಣಿಸಂಗ್ರಹಾಲಯಗಳು ಸಹ ಇವರ ಸಲಹೆ, ಸೂಚನೆ ಪಡೆಯುತ್ತಿದ್ದವು. ಮೈಸೂರಿನ ಜತೆಗಿದ್ದ ತಮ್ಮ ನಂಟನ್ನು ಯಾವತ್ತೂ ಕಡಿಮೆ ಮಾಡಿರಲಿಲ್ಲ. ಅನೇಕ ಯುವ ವಿಜ್ಞಾನಿಗಳು, ಹೋರಾಟಗಾರರು ಹಾಗೂ ಪರಿಸರ ಶಿಕ್ಷಕರನ್ನು ಹುಟ್ಟುಹಾಕಿದ ಕೀರ್ತಿ ಈ ಮಹಾನ್ ಚೇತನಕ್ಕೆ ಸೇರಬೇಕು.

ಮಿಸ್ ಯೂ ಮ್ಯಾಡಂ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights