ನೆರೆಗೆ ನೆರವಾಗದ ಕೇಂದ್ರ : ಪರಿಹಾರಕ್ಕಾಗಿ ರಾಜ್ಯದ ತಿಣುಕಾಟ

ನೆರೆಗೆ ಸಿಲುಕಿ ನಲುಗಿದ ನಾಡಿನಲ್ಲೀಗ ಸ್ಮಶಾನ ಮೌನ. ಕಣ್ಣಲ್ಲಿ ರಕ್ತದ ಕೋಡಿ, ಮನದಲ್ಲಿ ಹುದುಗಿದ ಹತಾಶೆ, ನೋವು, ಸಂಕಟ. ಮನೆ, ಮಠ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡವರ ಬದುಕು ಬರ್ಬರವಾಗಿದೆ. ನೈಸರ್ಗಿಕ ವಿಕೋಪಕ್ಕೆ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕೊಡಗು ಸೇರಿದಂತೆ ರಾಜ್ಯದ ಮುಕ್ಕಾಲು ಭಾಗದ ಜನತೆ ತತ್ತರಿಸಿದ್ದಾರೆ. ಎದೆ ತುಂಬ ಭಾರ ಹೊತ್ತು ಹೆಂಗಪ್ಪ ಜೀವನ ಮಾಡೋದು ಅಂತಾ ತಲೆ ಮೇಲೆ ಕೈ ಹೊತ್ತು ಕೇದ್ರ ಸರ್ಕಾರದಿಂದ ಪರಿಹಾರ ಬಂದೀತು ಅನ್ನೋ ಆಸೆಗಣ್ಣಿನಿಂದ ನೋಡ್ತಿದ್ದಾರೆ. ನೆರೆ ಬಂದ ಊರಲ್ಲಿ ಸೆರೆ ಸಿಕ್ಕ ಮೂಕರಲ್ಲಿ ಈಗ ಬರೀ ಕಾರ್ಮೋಡ ತುಂಬಿದೆ. ಯಪ್ಪಾ ಒಂದು ಸೂರು ಬೇಕ್ರಿ.. ಮಕ್ಕಳು, ವೃದ್ಧರು, ದನ-ಕರು ಎಲ್ಲವನ್ನೂ ಕಟ್ಟಿಕೊಂಡು ಎಲ್ಲಿಗೆ ಹೋಗುದ್ರಿ..? ನೀರಿನ್ಯಾಗ ಮನೆ ಕೊಚ್ಚಿಕೊಂಡು ಹೋಗ್ಯದ. ಪುಸ್ತಕಗಳೆಲ್ಲಾ ತೇಲಿ ಹೋಗ್ಯಾವ, ಕಷ್ಟ ಪಟ್ಟು, ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಕೂಡ ನಾಶ ಆಗ್ಯದ. ಮೋದಿ ಸರ್ಕಾರ ನಮಗೇನರ ಸಹಾಯ ಮಾಡಬೇಕ್ರಿ. ನಮಗ ಮನೆ ಕಟ್ಟಿಸಿಕೊಟ್ರ ಬಹಳ ಉಪಕಾರ ಅಕ್ಕೇತಿ ನೋಡ್ರಿ…

 
ಒಂದು ಸಾರಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಹಾದು ಬಂದರೆ ಕಣ್ಣಿಗೆ ರಾಚಿ, ಮನ ಕಲಕುವ ದೃಶ್ಯಗಳಿವು. ಉಕ್ಕಿದ ಕೃಷ್ಣೆ, ತುಂಗಭದ್ರೆ, ಘಟಪ್ರಭಾ, ಮಲಪ್ರಭಾ, ಕಪಿಲೆ, ಕಬಿನಿ ನದಿಗಳ ರೌದ್ರ ನರ್ತನಕ್ಕೆ ನಗರಗಳು, ಗ್ರಾಮಗಳು ಜಲಾವೃತಗೊಂಡು ಅಲ್ಲೋಲಕಲ್ಲೋಲವಾಗಿದ್ವು. ಈಗ ಏನೂ ಮಾಡಿಲ್ಲವೆಂಬಂತೆ ಶಾಂತಗೊಂಡಿರುವ ನದಿಗಳು, ತೀರದ ಹಸಿವು, ಇಂಗದ ದಾಹ, ಕೆಸರು, ಕೊಳಕು ತುಂಬಿಕೊಂಡು ಕಾಯಿಲೆಗೆ ಆಹ್ವಾನ ನೀಡುತ್ತಿರುವ ಊರುಗಳು, ಮುಗುಚಿ ಬಿದ್ದ ಮನೆಗಳು, ಮಣ್ಣಲ್ಲಿ ಮಣ್ಣಾದ ಸೂರು, ಕೊಚ್ಚಿ ಹೋದ ಸೇತುವೆಗಳು, ಕಿತ್ತು ಹೋದ ರಸ್ತೆಗಳು, ಕೈಗೆ ಬರದ ಫಸಲು, ಮಳೆಗೆ ಬಲಿಯಾದವರ ಕುಟುಂಬಸ್ಥರ ಆಕ್ರಂದನ, ಕಾಳಜಿ ಕೇಂದ್ರಗಳಲ್ಲಿ ದಿನ ದೂಡುತ್ತಿರುವ ಸಂತ್ರಸ್ತರು. ಇವೆಲ್ಲಾ ನೆರೆ ಬಂದು ನಿಂತ ಮೇಲೆ ಮನಸ್ಸುಗಳನ್ನು ಕೆದಕುತ್ತಿರುವ ಚಿತ್ರಣ.

ಒಂದಲ್ಲ ಎರಡಲ್ಲ ಬರೋಬ್ಬರಿ 17ಕ್ಕೂ ಹೆಚ್ಚು ಜಿಲ್ಲೆಗಳು, 80ಕ್ಕೂ ಹೆಚ್ಚು ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ. ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಹಲವು ಭಾಗಗಳು ಅತಿ ಹೆಚ್ಚು ಹಾನಿಗೊಳಗಾಗಿವೆ. ಸಾವಿರಾರು ಕೋಟಿಯಷ್ಟು ನಷ್ಟ ಉಂಟಾಗಿದೆ. ಜನತೆಯ ಗೋಳಾಟ ಹೇಳತೀರದ್ದಾಗಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾದ್ರೂ ಕೇಂದ್ರದ ನಾಯಕರು ಮಾತ್ರ ಕರ್ನಾಟಕದ ಉತ್ತರ ಭಾಗದತ್ತ ಬರಲೇ ಇಲ್ಲ. ಜನರ ಗೋಳು ಕೇಳುವುದಿರಲಿ, ಸಾಂತ್ವನವನ್ನೂ ಹೇಳಲಿಲ್ಲ. ಇನ್ನು ಪರಿಹಾರದ ಭರವಸೆಯಂತೂ ದೂರದ ಬೆಟ್ಟ ನೋಡಿದಂತಾಗಿದೆ. ತನ್ನದೇ ದೇಶದ ಜನತೆ ಪ್ರಕೃತಿ ವಿಕೋಪಕ್ಕೆ ಸಿಲುಕಿ, ನರಳುತ್ತಿದ್ದರೂ ಪ್ರಧಾನಿ ಮೋದಿ ಮಾತ್ರ ತಿರುಗಿಯೂ ನೋಡಲಿಲ್ಲ. ಪ್ರಧಾನಿ ಬರ್ತಾರೆ, ನಮಗೆಲ್ಲಾ ಪರಿಹಾರ ನೀಡ್ತಾರೆ ಅನ್ನೋ ಸಂತ್ರಸ್ತರ ಆಸೆ ಗಗನಕುಸುಮದಂತೆ ಕರಗಿದೆ.


ಸೆಪ್ಟಂಬರ್‍ 7ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಾರೆ. ಸಂತ್ರಸ್ತರ ಸಂಕಷ್ಟ ಆಲಿಸಿ, ಕಣ್ಣೀರು ಒರೆಸುತ್ತಾರೆ ಅನ್ನೋ ಭರವಸೆಯ ಮಾತುಗಳು ಹರಿದಾಡಿದ್ದವು. ಆದ್ರೆ ತಿಂಗಳು ಕಳೆಯುತ್ತಾ ಬಂದರೂ ಮೋದಿಯವರು ಮಾತ್ರ ಬರಲಿಲ್ಲ. ಎರಡು ತಿಂಗಳಿಂದ ಪ್ರಧಾನಿ ಮೋದಿಯವರು ಫಾರಿನ್‍ ಟ್ರಿಪ್, ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊರ ದೇಶಗಳಿಗೆ ಕೋಟಿ ಕೋಟಿ ಅನುದಾನ ನೀಡೋದ್ರಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ತನ್ನದೇ ಜನರ ಅಳಲು ಕೇಳಿಸೋದಾದ್ರೂ ಹೇಗೆ..? ಕಾಟಾಚಾರಕ್ಕೆ ಎಂಬಂತೆ ಬಂದಿದ್ದ ಕೇಂದ್ರ ಅಧ್ಯಯನ ತಂಡ ಅದೇನು ವರದಿ ಮಾಡಿಕೊಂಡು ಹೋಯಿತೋ ಗೊತ್ತಿಲ್ಲ. ಇದುವರೆಗೆ ಕರ್ನಾಟಕಕ್ಕೆ ಎಷ್ಟು ಪರಿಹಾರ ನೀಡಬೇಕು ಎಂಬುದರ ಬಗ್ಗೆ ಮಾತುಗಳೇ ಹೊರ ಬಂದಿಲ್ಲ. ಸೆಪ್ಟಂಬರ್ ಮೊದಲ ವಾರದಲ್ಲಿ ಸಿಎಂ ಯಡಿಯೂರಪ್ಪ ರಾಜ್ಯದ ಜನತೆಗೆ ಸಿಹಿ ಸುದ್ದಿಯಿದೆ. ಪ್ರಧಾನಿ ಅವರೊಂದಿಗೆ ನೆರೆ ಪರಿಹಾರದ ಕುರಿತು ಚರ್ಚಿಸಿದ್ದೇನೆ.

5 ಸಾವಿರ ಕೋಟಿ ಪರಿಹಾರ ನೀಡಲು ಒಪ್ಪಿಗೆ ಸಿಕ್ಕಿದೆ. ಒಂದು ವಾರದಲ್ಲಿ ಮಧ್ಯಂತರ ಪರಿಹಾರ ಘೋಷಿಸಲಾಗುತ್ತದೆ ಅಂತೆಲ್ಲಾ ಹೇಳಿದ್ದರು. ಅದೆಲ್ಲಾ ಕೇವಲ ಘೋಷಣೆಯಾಗಿಯೇ ಉಳಿಯುವ ಲಕ್ಷಣಗಳು ಗೋಚರಿಸುತ್ತಿವೆ. ಯಾಕಂದ್ರೆ ಇದುವರೆಗೂ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಇತ್ತ ರಾಜ್ಯ ನಾಯಕರಂತೂ ಪರಿಹಾರ ಕೇಳುವುದು ಹೇಗೆ ಅಂತಾ ಮೀನಾಮೇಷ ಎಣಿಸುತ್ತಿದ್ದಾರೆ. ಜನರ ಸಂಕಷ್ಟ, ಗೋಳಾಟವನ್ನು ನೋಡಿಯೂ ತಮ್ಮದೇ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೋದಿ ಸರ್ಕಾರದ ವಿರುದ್ಧ ತುಟಿ ಪಿಟಿಕ್‍ ಎನ್ನದೇ, ಕೇಂದ್ರದ ಬಳಿ ಪರಿಹಾರ ಕೇಳಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಅಷ್ಟೇ ಯಾಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಸಂಬದ್ಧವಾಗಿ ಮಾತನಾಡಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೆರೆ ಪರಿಹಾರವನ್ನು ಕೇಂದ್ರ ಸರ್ಕಾರವೇ ನೀಡಬೇಕು ಅಂತೇನೂ ಇಲ್ಲ ಎಂದು ಅಪ್ರಬುದ್ಧ ಹೇಳಿಕೆ ನೀಡಿ, ನೆಲ, ಜಲ, ಭಾಷಾಭಿಮಾನದಂತ ಭಾವನಾತ್ಮಕ ವಿಷಯಗಳಿಗೆ ಧಕ್ಕೆ ತಂದಿದ್ದಾರೆ. ಒಟ್ಟಿನಲ್ಲಿ ಆರಕ್ಕೇರದ ಮೂರಕ್ಕಿಳಿಯದ ಮಂತ್ರಿಗಳು ಜನತೆಯ ನೋವು ಭರಿಸಲು ಮಾತ್ರ ಮುಂದಾಗುತ್ತಿಲ್ಲ. ರಾಜ್ಯದ ಸಚಿವರು ಗಟ್ಟಿಯಾಗಿ ನಿಂತು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಅತ್ತ ಕೇಂದ್ರ ಸರ್ಕಾರ ರಾಜ್ಯದ ಸಮಸ್ಯೆ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.


ಎಲ್ಲ ಹೋಗಲಿ.. ಕೇಂದ್ರದಿಂದ ಪರಿಹಾರ ಬೇಡ. ರಾಜ್ಯದ ಬೊಕ್ಕಸದಿಂದಲೇ ಪರಿಹಾರ ನೀಡುತ್ತೇವೆ ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ. ಸಾವಿರಾರು ಕೋಟಿಯಷ್ಟು ಆಗಿರುವ ನಷ್ಟವನ್ನು ರಾಜ್ಯದ ಬೊಕ್ಕಸದಿಂದ ಭರಿಸಲು ಸಾಧ್ಯವೆ..? ಇಷ್ಟೊಂದು ಹಣವನ್ನು ನೆರೆ ಪರಿಹಾರಕ್ಕೆ ವಿನಿಯೋಗಿಸಿದರೆ ರಾಜ್ಯದ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿದೆ..? ಇನ್ನು ಕಳೆದ ವರ್ಷದ ಬರ ಪರಿಹಾರವೇ ಜನತೆಯ ಕೈ ಸೇರಿಲ್ಲ. ಕೊಡಗಿನಲ್ಲಿ ಕಳೆದ ವರ್ಷದ ಪ್ರವಾಹಕ್ಕೆ ನಲುಗಿದ ಸಂತ್ರಸ್ತರಿಗೆ ಸೂರು ಸಿಕ್ಕಿಲ್ಲ. ಹೀಗಿರುವಾಗ ರಾಜ್ಯದ ಮುಕ್ಕಾಲು ಭಾಗದ ಜನತೆಯ ಅತಂತ್ರ ಸ್ಥಿತಿಯನ್ನು ರಾಜ್ಯ ನಾಯಕರು ಸರಿಪಡಿಸುತ್ತಾರಾ..? ರಾಜ್ಯದ ಹಿತ ಕಾಯಬೇಕಾದ ನಾಯಕರು ಪರಿಹಾರ ಕೇಳಲು ಹಿಂದು-ಮುಂದು ನೋಡ್ತಿರೋದು ನಿಜಕ್ಕೂ ವಿಪರ್ಯಾಸ.

ಅಂದ ಹಾಗೆ, ರಾಜ್ಯ ನಾಯಕರು ಇಷ್ಟೊಂದು ಕಾನ್ಫಿಡೆಂಟಾಗಿ ರಾಜ್ಯದ ಬೊಕ್ಕಸದಿಂದಲೇ ನೆರೆಗೆ ಪರಿಹಾರ ನೀಡುತ್ತೇವೆ ಅಂತಿರೋದು ಯಾಕೆ ಅನ್ನೋದ್ರ ಹಿಂದೆ ಮತ್ತೊಂದು ಗಮ್ಮತ್ತಿದೆ. ಈಗಾಗಲೇ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾದ ಅನುದಾನದ ಮೇಲೆ ಮಂತ್ರಿಗಳ ಕಣ್ಣು ಬಿದ್ದಿದೆ. ಇದೇ ಹಣವನ್ನು ಪ್ರವಾಹಪೀಡಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಸಂತ್ರಸ್ತರಿಗೆ ವಿನಿಯೋಗಿಸುವ ಹರಸಾಹಸವೊಂದು ಹಿಂಬಾಗಿಲಲ್ಲಿ ನಡೆದಿದೆ. ಇನ್ನೊಂದು ಇಂಟರೆಸ್ಟಿಂಗ್‍ ವಿಷಯ ಅಂದ್ರೆ ಇತ್ತೀಚೆಗೆ ಐಎಎಸ್‍ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಹಾಗೂ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹುದ್ದೆಯಿಂದ, ಬೇರೆ ಹುದ್ದೆ ತೋರಿಸದೇ ಏಕಾಏಕಿ ಎತ್ತಂಗಡಿ ಮಾಡಲಾಗಿತ್ತು. ಈ ಬಗ್ಗೆ ರೋಹಿಣಿ, ಸಿಎಂ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ವಿಷಯ ಏನಪ್ಪಾ ಅಂದ್ರೆ.. ಕಟ್ಟಡ ನಿರ್ಮಾಣ ಕ್ಷೇತ್ರ ಹಾಗೂ ಉದ್ಯಮಿಗಳಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್‍ ರೂಪದಲ್ಲಿ ಸಂಗ್ರಹವಾದ ಮೊತ್ತ 8 ಸಾವಿರ ಕೋಟಿ ರೂಪಾಯಿ ಕಾರ್ಮಿಕ ನಿಧಿಯಲ್ಲಿದೆ.

ಈ ನಿಧಿಯ ಮೇಲೆ ಕಣ್ಣಿಟ್ಟಿದ್ದ ಕಾರ್ಮಿಕ ಇಲಾಖೆಯ ಪ್ರಭಾವಿ ಅಧಿಕಾರಿಯೊಬ್ಬರು ಪದೇ ಪದೆ ಒತ್ತಡ ಹೇರುತ್ತಿದ್ದರು. ಅಷ್ಟೇ ಅಲ್ಲ, ಕಾರ್ಮಿಕರ ನಿಧಿಯನ್ನು ನೆರೆ ಪರಿಹಾರ ಹಾಗೂ ಇತರೆ ಉದ್ದೇಶಗಳ ಬಳಕೆಗೆ ಕೊಡಬೇಕು ಎಂಬ ಒತ್ತಡಕ್ಕೆ ರೋಹಿಣಿ ಮಣಿದಿರಲಿಲ್ಲ. ಕಾರ್ಮಿಕರ ನಿಧಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಸಲು ಬಿಡಲ್ಲ ಅಂತಾ ರಕ್ಷಣೆ ನೀಡಿದ್ದರು. ಕಾರ್ಮಿಕರು ಹಾಗೂ ಮಕ್ಕಳ ಆರೋಗ್ಯ, ಶಿಕ್ಷಣದಂತಹ ಉದ್ದೇಶಗಳಿಗೆ ಬಳಸಬೇಕು ಎಂದು ಸುಪ್ರೀಂಕೋರ್ಟ್‍ ನಿರ್ದೇಶಿಸಿದೆ ಅಂತಾ ಕಡ್ಡಿ ತುಂಡಾದಂತೆ ಹೇಳಿದ್ದರು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಬೆಂಗಳೂರಿನಲ್ಲಿ 100 ಪಾಲನಾ ಕೇಂದ್ರಗಳನ್ನು ತೆರೆಯುವುದು ಹಾಗೂ ಆ್ಯಪ್‍ ಅಭಿವೃದ್ಧಿಯ ಬಗ್ಗೆಯೂ ಸಿದ್ಧತೆ ನಡೆಸಿದ್ದರು. ಇಷ್ಟೆಲ್ಲಾ ಮಾಡಿದ ರೋಹಿಣಿ ಅವರಿಗೆ ಸಿಕ್ಕಿದ್ದು ಮಾತ್ರ ವರ್ಗಾವಣೆ ಭಾಗ್ಯ. ಕಾರ್ಮಿಕರ ನಿಧಿಗೆ ರಕ್ಷಣೆ ನೀಡಿದ್ದು, ಇತರೆ ಕಾರ್ಯಗಳಿಗೆ ನಿಧಿ ಬಳಕೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ರೋಹಿಣಿ ಅವರನ್ನು ವರ್ಗಾವಣೆ ಮಾಡಿ ಶಿಕ್ಷಿಸಲಾಯ್ತು. ಈ ಮೂಲಕ ನೆರೆಗೆ ನೆರವು ಕೇಳಲು ಕೇಂದ್ರಕ್ಕೆ ಮೊರೆ ಹೋಗುವುದನ್ನು ತಪ್ಪಿಸಲು ರಾಜ್ಯ ನಾಯಕರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಷ್ಟೇ ಯಾಕೆ ಸಂತ್ರಸ್ತರಿಗೆ ಹಗಲು ಚಂದ್ರನನ್ನು ತೋರಿಸಿ, ಪರಿಹಾರ ತರಲು ತಿಣುಕಾಡುತ್ತಿದ್ದಾರೆ.

ರಾಜ್ಯ ಸರ್ಕಾರ ನೆರೆ ಪರಿಹಾರವನ್ನು ಶತಾಯ ಗತಾಯ ಭರಿಸಿ ಕೈ ತೊಳೆದುಕೊಳ್ಳಬೇಕೆಂಬ ಧಾವಂತದಲ್ಲಿದೆ. ಕೇಂದ್ರದ ಬಳಿ ಅನುದಾನ ಕೇಳಿದರೆ ಎಲ್ಲಿ ಪದವಿ, ಮಂತ್ರಿಗಿರಿ ಕೈ ಬಿಟ್ಟು ಹೋಗುತ್ತದೆಯೋ ಎಂಬ ಆತಂಕವೂ ರಾಜ್ಯ ನಾಯಕರಲ್ಲಿದೆ. ಸಂತ್ರಸ್ತರ ನೋವಿಗೆ ಮಿಡಿಯುವ ನಿಜ ಮನಸ್ಸು ಜನಪ್ರತಿನಿಧಿಗಳಿಗೆ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಕೇಂದ್ರ ಸರ್ಕಾರ ಸ್ಪಂದಿಸಿರುತ್ತಿತ್ತೋ ಏನೋ..? ತಮ್ಮದೇ ಗೆಲುವಿಗೆ ಶ್ರಮಿಸಿದ ಜನತೆಯ ಕಣ್ಣೀರು, ಯಾತನೆ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲ. ಚುನಾಯಿತ ನಾಯಕರು ಗೋಳು ಕೇಳುತ್ತಾರೆ. ನೊಂದ ಮನಸುಗಳಿಗೆ ಹೆಗಲಾಗುತ್ತಾರೆ ಅನ್ನೋದು ಹುಸಿಯಾದಂತಿದೆ. ಕೇಂದ್ರ, ರಾಜ್ಯಗಳ ತಿಕ್ಕಾಟದಲ್ಲಿ ತೆರಿಗೆ ಭರಿಸಿದವರು ಮಾತ್ರ ನರಳುತ್ತಲೇ ಇದ್ದಾರೆ. ಭರವಸೆ ಈಡೇರಿತು, ಸೂರು ಸಿಕ್ಕೀತು, ಜೀವನ ಜಂಜಾಟ ಕಳೆದು ನಿರರ್ಗಳವಾದೀತೆಂಬ ನಿರೀಕ್ಷೆಯಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights