ನಿರಾಸೆ ಮೂಡಿಸಿದ ಚಂದ್ರಯಾನ-2 : ‘ಹತಾಶರಾಗೋದು ಬೇಡ, ಮರಳಿ ಪ್ರಯತ್ನ ಮಾಡೋಣ’ ಮೋದಿ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಶುಕ್ರವಾರ ನಡುರಾತ್ರಿ ಚಂದಿರನ ಅಂಗಳಕ್ಕೆ ಇಳಿಯುತ್ತಿದ್ದ ವಿಕ್ರಮ್ ಲ್ಯಾಂಡರ್ ಇನ್ನೇನು ದಕ್ಷಿಣ ಧ್ರುವದಲ್ಲಿ ಚಂದಿರನ ನೆಲ ಮುಟ್ಟಲು 2.1 ಕಿ.ಮೀಟರ್ ಇರುವಾಗಲೇ ದಿಢೀರನೆ ಸಂಪರ್ಕ ಕಡಿದುಕೊಂಡಿತ್ತು.

ವಿಕ್ರಮ್ ಲ್ಯಾಂಡರ್ ಚಂದಿರನ ಅಂಗಳಕ್ಕಿಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರರು ಬೆಂಗಳೂರು ಇಸ್ರೋ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಕಾದು ಕುಳಿತಿದ್ದರು. ಆದರೆ ಕೊನೇ ಕ್ಷಣದಲ್ಲಿ ಚಂದಿರನ ನೆಲಸ್ಪರ್ಶಿಸುವ ಮುನ್ನವೇ ವಿಕ್ರಮ್ ಸಂಪರ್ಕ ಕಡಿತಗೊಂಡಿತ್ತು.

ಬಹುನಿರೀಕ್ಷೆಯ, ಜಗತ್ತೇ ಬೆರಗುಗಣ್ಣಿನಿಂದ ಎದುರು ನೋಡುತ್ತಿದ್ದ ಚಂದ್ರಯಾನ-2 ಮಿಷನ್ ಗೆ ಹಿನ್ನಡೆಯಾಗಿದ್ದರಿಂದ ಇಸ್ರೋ ಮುಖ್ಯಸ್ಥ ಶಿವನ್ ಅವರು ಭಾವೋದ್ವೇಗದಿಂದ ಅಳುತ್ತಿದ್ದಾಗ ಮೋದಿ ಸಂತೈಸಿ, ಚಂದ್ರನನ್ನು ತಲುಪುವ ನಮ್ಮ ಗುರಿ ಮತ್ತಷ್ಟು ಪ್ರಬಲವಾಗಿದೆ. ಎದೆಗುಂದಬೇಡಿ ಭಾರತ ನಿಮ್ಮ ಜತೆಗಿದೆ ಎಂದು ಧೈರ್ಯ ತುಂಬಿದ್ದಾರೆ.

ಬಳಿಕ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಯಾವುದಕ್ಕೂ ಎದೆಗುಂದಬೇಡಿ. ಹತಾಶರಾಗೋದು ಬೇಡ, ಮರಳಿ ಪ್ರಯತ್ನ ಮಾಡೋಣ. ಚಂದ್ರನ ಮೇಲೆ ಇಳಿಯಲು ಹೊಸ ದಾರಿ ಕಂಡು ಹುಡುಕೋಣ ಎಂದು ಧೈರ್ಯ ತುಂಬಿದ್ದರು.

ಇಂದು ಬೆಳಗ್ಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು.

ಕಳೆದ ಕೆಲವು ದಿನಗಳಿಂದ ಇಸ್ರೋ ವಿಜ್ಞಾನಿಗಳು ನಿದ್ದೆ ಮಾಡಿಲ್ಲ ಎಂದು ಎಲ್ಲರಿಗೂ ಗೊತ್ತು. ಬೆಳಗಿನ ಜಾವ ನಿಮ್ಮ ಮುಖದಲ್ಲಿ ಬೇಸರ ಭಾವ ನೋಡಿದಾಗ ಹೆಚ್ಚು ಕಾಲ ನಾನು ಅಲ್ಲಿ ಉಳಿಯಲಿಲ್ಲ. ದಿಢೀರ್ ಅಂತ ಸಂಪರ್ಕ ಕಡಿತಗೊಂಡಾಗ ನಿಮ್ಮೆಲ್ಲರ ಮುಖದಲ್ಲಿ ನಿರಾಸೆ ಮೂಡಿತು. ನಾನು ನಿಮ್ಮೆಲ್ಲರ ಮನಸ್ಸು ಅರ್ಥ ಮಾಡಿಕೊಂಡಿದ್ದೇನೆ.

ಇಂದು ನಮಗೆ ಕೊನೆ ಹಂತದಲ್ಲಿ ಸಣ್ಣದೊಂದು ಅಡೆಯುಂಟಾಗಿದೆ. ಚಂದ್ರಯಾನ ಚಂದ್ರನನ್ನ ಅಪ್ಪಿಕೊಳ್ಳುವ ನಮ್ಮ ಇಚ್ಛಾಶಕ್ತಿ ಮತ್ತಷ್ಟು ಪ್ರಬಲಗೊಂಡಿದೆ. ಸಣ್ಣದೊಂದು ಅಡೆ ತಡೆಯಿಂದ ನಾವು ಹಿಂಜರಿಯದೇ ಅದರ ಪರಿಹಾರಕ್ಕಾಗಿ ಮುಂದಿನ ದಿನ ಕೆಲಸ ಮಾಡಬೇಕಿದೆ. ಕವಿಗಳು ಚಂದ್ರನ ಬಗ್ಗೆ ಹಲವು ಕವಿತೆಗಳನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಯಾನದ ಬಗ್ಗೆ ಕವನಗಳನ್ನು ಬರೆಯಲಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಇದೆ. ಚಂದ್ರನನ್ನ ಮುಟ್ಟುವ ಆಸೆ ಇನ್ನಷ್ಟು ಹೆಚ್ಚಾಗಿದೆ ಎಂದರು.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights