ಜಮಖಂಡಿ ಜಿಲ್ಲೆಯನ್ನಾಗಿಸೋ ಕೂಗು-ಜಿಲ್ಲೆಗಾಗಿ ಸಂಕಲ್ಪ ಸಭೆಗೆ ಮುಂದಾದ ಹೋರಾಟಗಾರು..

ವಿಜಯನಗರ ನೂತನ ಜಿಲ್ಲೆಯ ಬೇಡಿಕೆ ಬೆನ್ನಲ್ಲೇ ಇದೀಗ ಬಾಗಲಕೋಟೆ ಜಿಲ್ಲೆಯ ಮತ್ತೆ ಜಮಖಂಡಿ ನೂತನ ಜಿಲ್ಲೆಗೆ ಕೂಗು ಶುರುವಾಗಿದೆ.ಜಮಖಂಡಿ ನೂತನ ಜಿಲ್ಲೆಯಾಗಬೇಕೆನ್ನೋದು ಇಂದು ,ನಿನ್ನೆಯ ಬೇಡಿಕೆಯಲ್ಲ.ಸಂಸ್ಥಾನ ಕಾಲದಿಂದಲೂ ಜಮಖಂಡಿ ಜಿಲ್ಲೆಯಾಗಬೇಕು ಅನ್ನೋದು ಬೇಡಿಕೆಯಿದೆ.ಇದೇ ಸೆಪ್ಟಂಬರ್ 29ರಂದು ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಸಂಕಲ್ಪ ಸಭೆಯ ಮೂಲಕ ಹೋರಾಟದ ರೂಪುರೇಷೆ ನಿರ್ಧರಿಸೋಕೆ ಮುಂದಾಗಿದೆ..

ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಉಪವಿಭಾಗಗಳಿದ್ದು,.ಜಮಖಂಡಿ ಉಪವಿಭಾಗ, ಬಾಗಲಕೋಟೆ ಉಪವಿಭಾಗ.. ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ 9ತಾಲೂಕುಗಳಿವೆ. ಜಮಖಂಡಿ ಉಪವಿಭಾಗದಲ್ಲಿ 4ತಾಲೂಕುಗಳಿದ್ದು, ಜಮಖಂಡಿ,ಮುಧೋಳ,ಬೀಳಗಿ,ರಬಕವಿ- ಬನಹಟ್ಟಿ ತಾಲೂಕುಗಳು ಬರುತ್ತವೆ.ಬಾಗಲಕೋಟೆ ಉಪವಿಭಾಗದಲ್ಲಿ 5ತಾಲೂಕುಗಳಿದ್ದು, ಬಾಗಲಕೋಟೆ, ಹುನಗುಂದ, ಬಾದಾಮಿ, ಗುಳೇದಗುಡ್ಡ, ಇಲಕಲ್ ತಾಲೂಕುಗಳಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಜಮಖಂಡಿ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಹಿಂದೆ ಪಟವರ್ಧನ್ ಮಹಾರಾಜ ಕಾಲದಲ್ಲಿ ಜಮಖಂಡಿ ಪ್ರಮುಖ ಸಂಸ್ಥಾನವಾಗಿತ್ತು.ಸಂಸ್ಥಾನ ಒಕ್ಕೂಟದ ವ್ಯವಸ್ಥೆಯಲ್ಲಿ ವಿಲೀನವಾದಾಗ ಜಮಖಂಡಿ ಜಿಲ್ಲೆಯಾಗ ಬೇಕು ಅನ್ನೋ ಬೇಡಿಕೆಯೂ ಆರಂಭವಾಗಿತ್ತು.

ಜಮಖಂಡಿ ಐತಿಹಾಸಿಕ ಹಿನ್ನೆಲೆ ಈ ಪಟ್ಟಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇಗುಲ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.ಜಮಖಂಡಿ ಸಂಸ್ಥಾನದ ಮಹಾರಾಜ
ಟಿಪ್ಪು ಸುಲ್ತಾನ್ ನನ್ನು ಸೋಲಿಸಿದಾಗ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ ನಿನ್ನ ರಾಜ್ಯದಲ್ಲಿ ಕತ್ತೆಗಳು ಮೇಯಲಿ ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್, ಇಂದೋರ್, ಬರೋಡಾ, ಕೊಲ್ಹಾಪೂರ, ಸಂಡೂರು ಸಂಸ್ಥಾನಗಳು ಸೇರಿದಂತೆ ಒಟ್ಟು ೪೬೫ ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವು. ಹರಿಭಟ್ ಬಾಬಾ ಪಟವರ್ಧನ ಮಹಾರಾಜರು ಸಂಸ್ಸ್ಥಾನದ ಪೂರ್ವಜರಾಗಿದ್ದರು.೧೬೫೫ ರಿಂದ ಸ್ವಾತಂತ್ರ್ಯ ಬಂದು ಭಾರತದ ಒಕ್ಕೂಟದಲ್ಲಿ ಒಂದಾಗುವವರೆಗೆ ಈ ಸಂಸ್ಥಾನ ಆಡಳಿತ ನಡೆಸಿತ್ತು. ೧೯೨೩ ರಲ್ಲಿ ತನ್ನದೇಯಾದ ಜಮಖಂಡಿ ಸ್ಟೇಟ್ ಲೆಜಿಸ್ಲೇಟಿವ್ ಅಸೆಂಬ್ಲಿ ಎಂಬ ಶಾಸನಸಭೆ ಹೊಂದಿ ಪ್ರಜೆಗಳಿಗೆ ಮೂಲಸೌಕರ್ಯ ಒದಗಿಸಿ ಮಾದರಿಯಾಗಿತ್ತು. ೧೯೧೨ ರಷ್ಟು ಹಿಂದೆಯೇ ಅವರು ತಮ್ಮ ರಾಮತೀರ್ಥ ಅರಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ೧೯೩೯ರಲ್ಲಿ ರಷ್ಯನ್ ಎಂಜಿನ್ ನಿಂದ ಚಲಿಸುವ ಬೀಸುವ ಗಿರಣಿ ಹಾಗು ನೀರೆತ್ತುವ ಪಂಪ್ ಸೆಟ್ ಅಳವಡಿಸಿಕೊಂಡಿದ್ದರು. ನಗರದ ರೆಸ್ತೆಗಳು + ಆಕಾರದ ರಚನೆಯಾಗಿರುವುದರಿಂದ ಇದಕ್ಕೆ “ಪಗಡಿ ಪಟ್ಟಿ ಬಜಾರ್” ಎಂದು ಕರೆಯುತ್ತಿದ್ದರು. ಪಟವರ್ಧನ ಮಹಾರಾಜರು ಮೇಲ್ಜಾತಿ(ಬ್ರಾಹ್ಮಣ)ಗೆ ಸೇರಿದ್ದರೂ ಎಲ್ಲ ಜಾತಿಯವರಿಗೆ ಅರಮನೆಯಲ್ಲಿ ಔತಣಕೂಟವನ್ನು ಏರ್ಪಡಿಸುತ್ತಿದ್ದರು. ಆ ಕಾಲದಲ್ಲೇ ಸಿವಿಲ್ ಹಾಸ್ಪಿಟಲ್, ಮುನ್ಸಿಪಾಲಿಟಿ, ಹೈಸ್ಕೂಲ್, ಕಾಲೇಜುಗಳನ್ನು ಸ್ಥಾಪಿಸಿದ್ದರು. ಕೃಷಿಗಾಗಿ ಕೆರೆ-ಕಟ್ಟೆ ಕಟ್ಟಿಸಿದ್ದಾರೆ. ಕ್ರೀಡೆಯನ್ನು ಉತ್ತೇಜಿಸಲು ಪೋಲೋ ಮೈದಾನ, ಈಜುಕೊಳ,ಕುಸ್ತಿ ಕಣ ನಿರ್ಮಿಸಿದ್ದರು. ಸ್ವತ: ಮಹಾರಾಜರು ಟೆನಿಸ್ ಪ್ರಿಯರಾಗಿದ್ದ ಕಾರಣ ಪುರುಷ ಹಾಗು ಮಹಿಳೆಯರಿಗಾಗಿ ಪ್ರತ್ಯೇಕ ಟೆನಿಸ್ ಕೋರ್ಟ ನಿರ್ಮಾಣ ಮಾಡಿದರು. ಸ್ವಾತಂತ್ರ್ಯಾನಂತರ ಏಕೀಕರಣವು ಹಲವು ಸಂಸ್ಥಾನಿಕರ ಅಸಹಕಾರದಿಂದ ನೆನೆಗುದಿಗೆ ಬಿದ್ದಿತ್ತು. ಸಂಸ್ಥಾನಿಕರ ಆಂತರಿಕ ಕಚ್ಚಾಟ ಮತ್ತೊಮ್ಮೆ ಭಾರತವನ್ನು ಪರಕೀಯರ ಆಡಳಿತಕ್ಕೆ ದೂಡಬಹುದೆಂಬುದನ್ನು ದೇಶದ ಸಂಸ್ಥಾನಿಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಪಟವರ್ಧನರು ತಾವು ಭಾರತದೊಂದಿಗೆ ಮೊಟ್ಟ ಮೊದಲಿಗೆ ವಿಲೀನವಾಗುವುದರೊಂದಿಗೆ ಮುನ್ನುಡಿಯನ್ನು ಬರೆದರು. ಆ ಸಂದರ್ಭದಲ್ಲಿ ತಮ್ಮ ಜೊತೆಗಿನ ಇತರ ಸಂಸ್ಥಾನಿಕರನ್ನು ಎದುರು ಹಾಕಿಕೊಂಡೂ ಕೂಡ ಭವ್ಯ ಭಾರತದ ಕನಸನ್ನು ಕಂಡವರಲ್ಲಿ ಮೊದಲಿಗರಾಗಿದ್ದರು..

೧೯೯೭ರಲ್ಲಿ ಬಿಜಾಪುರ ಅವಿಭಜಿತ ಜಿಲ್ಲೆ ಮಾಡುವ ವೇಳೆ ಜಮಖಂಡಿ ಜಿಲ್ಲೆಯಾಗ್ಬೇಕು ಅನ್ನೋ ಕೂಗು ಬಲವಾಗಿತ್ತು.ಆಗ ಬಿಜಾಪುರದಿಂದ ವಿಭಜನೆಗೊಂಡು ಬಾಗಲಕೋಟೆ ನೂತನ ಜಿಲ್ಲೆಯಾಯಿತು‌.೧೯೯೭ರಲ್ಲಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.ಆಗ ನ್ಯಾಯವಾದಿ ಡಾ, ತಾತಾಸಾಹೇಬ ಬಾಂಗಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದರು.ಓಲೈಮಠ ದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಅಂದಿನ ಶಾಸಕ ರಾಮಣ್ಣ ಕಲೂತಿ,ಮಾಜಿ ಕೇಂದ್ರ ಸಚಿವ ದಿವಂಗತ ಸಿದ್ದು ನ್ಯಾಮಗೌಡ,ಜಿ ಎಚ್ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಸಿದ್ದು ಸವದಿ, ಸುಶೀಲ್ ಕುಮಾರ್ ಬೆಳಗಲಿ, ಶ್ರೀಶೈಲ ದಳವಾಯಿ, ಸೇರಿದಂತೆ ಅನೇಕ ರಾಜಕಾರಣಿಗಳು ಹೋರಾಟಕ್ಕೆ ಸಾಥ್ ನೀಡಿದ್ದರು.ಜಮಖಂಡಿ ತಹಶೀಲ್ದಾರ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ಮಾಡಿದ್ದರು‌.ಆ ಬಳಿಕ ಜಮಖಂಡಿ ನೂತನ ಜಿಲ್ಲೆಯಾಗಬೇಕೆಂದು ಕೂಗು ಕೇಳಿ ಬರುತ್ತಾನೆ ಇರುತ್ತದೆ.ಸರ್ಕಾರಕ್ಕೆ ಮನವಿ ಕೊಡೋದು, ರಾಜಕಾರಣಿಗಳ ಮೇಲೆ ಒತ್ತಡ ಹಾಕುತ್ತಾ ಬಂದಿದ್ದಾರೆ.ದಿವಗಂತ ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ ಜಮಖಂಡಿ ನೂತನ ಜಿಲ್ಲೆಯನ್ನಾಗಿಸುವ ಕನಸು ಕಂಡಿದ್ದರು.ಈಗ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ, ಸೇರಿದಂತೆ ವಿವಿಧ ಪಕ್ಷದ ಮುಖಂಡರು ಜಮಖಂಡಿ ನೂತನ ಜಿಲ್ಲೆಗಾಗಿ ಪಕ್ಷಾತೀತ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.ಇದೀಗ ವಿಜಯನಗರ ನೂತನ ಜಿಲ್ಲೆಯ ಬೇಡಿಕೆ ಬೆನ್ನಲ್ಲೇ ಜಮಖಂಡಿ ನೂತನ ಜಿಲ್ಲೆಯ ಬೇಡಿಕೆಯ ಕೂಗು ಎದ್ದಿದೆ.ಜಮಖಂಡಿ ಜಿಲ್ಲಾ ಹೋರಾಟ ಸಮಿತಿಯಿಂದ ಸೆಪ್ಟೆಂಬರ್ 29ರಂದು ಜಮಖಂಡಿ ನಗರದ ಬಸವ ಭವನದಲ್ಲಿ ಜಮಖಂಡಿ ಜಿಲ್ಲೆಗಾಗಿ ಸಂಜೆ 4ಕ್ಕೆ ಸಂಕಲ್ಪ ಸಭೆ ಕರೆಯಲಾಗಿದೆ.ಸಭೆಯಲ್ಲಿ ಸಾರ್ವಜನಿಕರು, ಹೋರಾಟಗಾರರು, ಸ್ವಾಮೀಜಿಗಳು, ನೂತನ ಜಿಲ್ಲೆಗಾಗಿ ಹೋರಾಟದ ರೂಪುರೇಷೆ ನಿರ್ಧರಿಸಲಿದ್ದಾರೆ.ಅಂದಿನ ಸಭೆಯಲ್ಲಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ..ಸಭೆಗೆ ಎಲ್ಲಾ ರಾಜಕೀಯ ಮುಖಂಡರು, ಸಂಘ-ಸಂಸ್ಥೆಯವರು, ಸಾರ್ವಜನಿಕರು ಭಾಗಿಯಾಗಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights