‘ಕ್ಷೇತ್ರಕ್ಕೆ ಅಗತ್ಯ ಅನುದಾನ ಕೊಟ್ಟಿದ್ದರೆ ಸಮ್ಮಿಶ್ರ ಸರ್ಕಾರ ಪತನ ಆಗುತ್ತಿರಲಿಲ್ಲ’ ಗೌಡರಿಗೆ ಗುಮ್ಮಿದ ಸಿದ್ದು

ದೇವೇಗೌಡರು ಹಿಂದೂ ಪತ್ರಿಕೆಗೆ ಕೊಟ್ಟ ಸಂದರ್ಶನ ಬೇರೆಲ್ಲ ಮಾಧ್ಯಮದಲ್ಲೂ ಬಂದಿದೆ. ಪ್ರತಿಕ್ರಿಯಿಸಬಾರದು ಅಂತಿದ್ದೆ. ಗಂಭೀರ ಸ್ವರೂಪದ ಆರೋಪಗಳನ್ನು ನನ್ನ ಮೇಲೆ ಮಾಡಿದ್ದಾರೆ. ನಾನು ಮೌನವಾಗಿದ್ದರೆ ಬೇರೆ ಬೇರೆ ಅರ್ಥ ಬರಬಹುದು ಅಂತ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಲು ಬಯಸುತ್ತೇನೆ.

ದೇಶದಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರದಲ್ಲಿ. ಅಧಿಕಾರಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷಗಳನ್ನು ಹತ್ತಿಕ್ಕುವ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಜಾತ್ಯತೀತ ಶಕ್ತಿ ಒಂದಾಗಿ ಕೋಮುವಾದಿ ಶಕ್ತಿ ಮಟ್ಟ ಹಾಕಬೇಕೆಂದು ಬಯಸಿದವನು ನಾನು.

ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆ ಸಿಬಿಐ, ಇಡಿ, ಚುನಾವಣಾ ಆಯೋಗ ಹೀಗೆ ಎಲ್ಲವನ್ನೂ ದುರುಪಯೋಗ ಮಾಡಿಕೊಂಡು ಸರ್ವಾಧಿಕಾರಿ ರೀತಿ ಪ್ರದರ್ಶನ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹಾಗೂ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟ ಪಕ್ಷ ಎಲ್ಲವೂ ಇದನ್ನು ವಿರೋಧಿಸಬೇಕು.

ಇಂಥ ಸಂದರ್ಭದಲ್ಲಿ ದೇವೇಗೌಡರು ಗುರುತರ ಆರೋಪ ಹೊರಿಸಿದ್ದಾರೆ. ಅವೆಲ್ಲವೂ ಆಧಾರರಹಿತ, ರಾಜಕೀಯ ದುರುದ್ದೇಶದಿಂದ ಮಾಡಿದ ಸುಳ್ಳು ಆರೋಪಗಳು. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ, ಸಿಎಂ ಸ್ಥಾನದಲ್ಲಿ ಕುಮಾರಸ್ವಾಮಿಯನ್ನು ಕಾಣಲು ಸಿದ್ದರಾಮಯ್ಯನಿಗೆ ಇಷ್ಟ ಇರಲಿಲ್ಲ ಎಂದಿದ್ದಾರೆ. ನನಗೆ ಹಾಗೆ ಅನಿಸಿರಲಿಲ್ಲ. ಅವರಿಗೆ ಹಾಗೆ ಅನಿಸಿತ್ತೇನೋ.

ನನಗೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ 80 ಸ್ಥಾನ ಗೆದ್ದಿದ್ದರೂ ಜೆಡಿಎಸ್ ಗೆ ಸಿಎಂ ಸ್ಥಾನ, ಸರ್ಕಾರ ರಚನೆ ಅಧಿಕಾರ ಅಂತ ಹೈಕಮಾಂಡ್ ಹೇಳಿದಾಗ ಮರು ಮಾತನಾಡದೆ ಒಪ್ಪಿಕೊಂಡೆ. 14 ತಿಂಗಳು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಅವರ ಅಧಿಕಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ.

ಸಮ್ಮಿಶ್ರ ಸರ್ಕಾರಕ್ಕೆ ಪತನಕ್ಕೆ ನಾನು ಕಾರಣ ಅಲ್ಲ. ಕುಮಾರಸ್ವಾಮಿ, ರೇವಣ್ಣ, ದೇವೇಗೌಡ ಕಾರಣ ಅಂತ ಎಲ್ಲ ಶಾಸಕರು ಹೇಳುತ್ತಿದ್ದಾರೆ. ಎಲ್ಲ ಶಾಸಕರನ್ನು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಕ್ಕೆ ಅಗತ್ಯ ಅನುದಾನ ಕೊಟ್ಟಿದ್ದರೆ ಸಮ್ಮಿಶ್ರ ಸರ್ಕಾರ ಪತನ ಆಗುತ್ತಿರಲಿಲ್ಲ. ಸಚಿವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದ್ದು ಸರ್ಕಾರ ಪತನಕ್ಕೆ ಕಾರಣ.

ನಾನು 5 ವರ್ಷ ಸಿಎಂ ಇದ್ದಾಗ ಯಾವ ಶಾಸಕರೂ ಅಸಮಾಧಾನ ಏಕೆ ಆಗಿರಲಿಲ್ಲ. ಇವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಆರೋಪ ಹೊರಿಸಿದ್ದಾರೆ. ಸಿಎಲ್ ಪಿ ನಾಯಕನಾದ ನನ್ನ ನೇತೃತ್ವದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷನಾಗಿ ಮಾಡಿದ್ರು. ಅಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಒಪ್ಪುತ್ತಿದ್ದ ಕುಮಾರಸ್ವಾಮಿ ಅವುಗಳನ್ನು ಜಾರಿ ಮಾಡಲಿಲ್ಲ. ಆದರೂ ಈ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿರಲಿಲ್ಲ. 5 ವರ್ಷ ಸಹಕರಿಸಬೇಕೆಂದು ಚಕಾರ ಎತ್ತದೇ ಇದ್ದೆವು.

ಇವರ ಆಡಳಿತ ವೈಖರಿ, ನಡವಳಿಕೆಯಿಂದ ಸರ್ಕಾರ ಪತನ ಆಯಿತು. ಸರ್ಕಾರ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದೆ. ಆದರೂ ಈ ಆರೋಪವನ್ನು ಯಾರನ್ನು ಮೆಚ್ಚಿಸಲು ಹೋರಿಸಿದ್ದರೋ ಗೊತ್ತಿಲ್ಲ. ಯಡಿಯೂರಪ್ಪರನ್ನು ಸಿಎಂ ಮಾಡಿ, ನಾನು ವಿರೋಧ ಪಕ್ಷದ ನಾಯಕನಾಗಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ ಎಂದೂ ಆರೋಪಿಸಿದ್ದಾರೆ. ದೇಶದ ರಾಜಕಾರಣದಲ್ಲಿ ಇಂಥ ಪ್ರಯತ್ನ ಮಾಡಿದ್ದನ್ನು ನಾನಂತೂ ನೋಡಿಲ್ಲ. ದೇವೇಗೌಡರು ಅದೆಲ್ಲಿ ನೋಡಿಕೊಂಡು ಬಂದಿದ್ದಾರೋ ಗೊತ್ತಿಲ್ಲ.

ಸಮ್ಮಿಶ್ರ ಸರ್ಕಾರ ಬೀಳಿಸುವ ನೀಚ ರಾಜಕಾರಣ ಮಾಡಿಲ್ಲ. ಅದೇನಿದ್ದರೂ ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟು ಗುಣ. ದೇವೇಗೌಡರು ಬೇರೆ ಸರ್ಕಾರ ಬಿಲಿಸುವುದರಲ್ಲಿ ನಿಪುಣರು. ಧರ್ಮಸಿಂಗ್ ಅವರಿಗೆ ಬೆಂಬಲ ಕೊಟ್ಟು ಬೀಳಿಸಿದ್ದು ಯಾರು ? ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗಿ ಆ ಸರ್ಕಾರ ಬೀಳಿಸಿದ್ದು ಯಾರು ?

ಇವತ್ತೆನಾದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಅದು ದೇವೇಗೌಡ ಮತ್ತು ಮಕ್ಕಳಿಂದ. ಧರ್ಮ ಸಿಂಗ್ ಸರ್ಕಾರಕ್ಕೆ ಬೆಂಬಲ ಹಿಂಪಡೆದು ರಾತ್ರೋ ರಾತ್ರಿ ಬಿಜೆಪಿ ಜೊತೆ ಹೋದವರು ಯಾರು ? ಬಿಜೆಪಿ ಜೊತೆ ಸರ್ಕಾರ ಸಾಧ್ಯವೇ ಇಲ್ಲ. ಹಾಗೇನಾದರೂ ಆದರೆ ಅದು ನನ್ನ ಹೆಣದ ಮೇಲೆ ಅಂದಿದ್ದರು.

20 – 20 ಒಪ್ಪಂದ ಮಾಡಿಕೊಂಡು ವಚನ ಭ್ರಷ್ಟ ಆದರು. ಅದರಿಂದಲೇ ಬಿಜೆಪಿ ಇಲ್ಲಿ ಬೆಳೆದದ್ದು. ಇದಕ್ಕೆಲ್ಲ ಅವರೇ ಕಾರಣ. ಯಾರಾದರೂ ಸಿಎಂ ಆಗಕ್ಕೆ ಸರ್ಕಾರ ಕೆಡವುದಿದೆ. ವಿರೋಧ ಪಕ್ಷದ ನಾಯಕನಾಗಲು ಸರ್ಕಾರ ಬಿಲಿಸುವುದು ಎಲ್ಲಾದರೂ ಇದೆಯೇ ?

ಸೇಡಿನ ರಾಜಕಾರಣದ ಆಕ್ರೋಶ ನನ್ನ ಮೇಲೆ ಎಷ್ಟಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಯಾವ ಪಕ್ಷ ಅವರನ್ನು ಬೆಂಬಲಿಸಿತ್ತೋ ಆ ಪಕ್ಷವನ್ನೇ ಬೀಳಿಸುತ್ತಾರೆ. ನಾನು ಜೆಡಿಎಸ್ ಅಲ್ಲೇ ಇದ್ದವನು. ಇವರ ಸಂಚು, ಕುತಂತ್ರ ನನಗೆ ಗೊತ್ತಾಗುವುದಿಲ್ಲವೇ ? ಪ್ರಧಾನಿ ಮಾಡಿದ ಕಾಂಗ್ರೆಸ್, ಸೀತಾರಾಮ್ ಕೇಸರಿ ವಿಚಾರದಲ್ಲಿ ದೇವೇಗೌಡರು ಹೇಗೆ ನಡೆದುಕೊಂಡರು ? ಜಾಣ ಕುರುಡರಂತೆ ಅವರಿರಬಹುದು, ಆದರೆ, ಜನರಿಲ್ಲ.

ನಾನು ಜೆಡಿಎಸ್ ನಲ್ಲಿದ್ದವನು. ದೇವೇಗೌಡ ಮಾಡುವ ಹುನ್ನಾರ, ಸಂಚು ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.

ಲೋಕಸಭೆ ಚುನಾವಣೆ ವೇಳೆ ಮೈತ್ರಿ ಬೇಡ. ಫ್ರೆಂಡ್ಲಿ ಫೈಟ್ ಇರಲಿ ಎಂದಿದ್ದೆವು. ಹಳೆ ಮೈಸೂರು ಭಾಗದಲ್ಲಿ ಪಂಚಾಯ್ತಿ ಮಟ್ಟದ ಚುನಾವಣೆಯಿಂದ ಎಲ್ಲ ಚುನಾವಣೆ ಸಂದರ್ಭಕ್ಕೂ ಕಾಂಗ್ರೆಸ್ – ಜೆಡಿಎಸ್ ಫೈಟ್ ಕೊಟ್ಟಿದ್ದೆ ಹೆಚ್ಚು. ಹೀಗಾಗಿ ಫ್ರೆಂಡ್ಲಿ ಫೈಟ್ ಇರಲಿ ಎಂದಿದ್ದೇವು.

ಮಂಡ್ಯ, ತುಮಕೂರು ಕ್ಷೇತ್ರದಲ್ಲಿ ಸೋಲಿಗೆ ನಾವೇ ಕಾರಣ ಎಂದರು. ಮೈಸೂರು, ಬೆಂಗಳೂರು ಉತ್ತರ ಸೇರಿದಂತೆ ಹಲವೆಡೆ ನಮ್ಮ ಸೋಲಿಗೆ ನೀವು ಕಾರಣ ಅಲ್ಲವೋ ? ಹಾಸನದಲ್ಲಿ ಅವರ ಮೊಮ್ಮಗ ಗೆದ್ದಿದ್ದಾರೆ. ನಮ್ಮ ಪಕ್ಷ ಕೆಲಸ ಮಾಡಿಲ್ಲವೇ ? ಹೇಗೆ ಗೆದ್ದರು ? ಒಟ್ಟಿಗೆ ಪ್ರಚಾರ ಮಾಡಿದ್ದೇವೆ. ಹಿಂದೆ – ಮುಂದೆ ರಾಜಕೀಯ ಮಾಡುವ ಅಭ್ಯಾಸ ನನಗಿಲ್ಲ. ನೇರ ರಾಜಕಾರಣ ಮಾಡುತ್ತೇನೆ. ತಾತ, ಮೊಮ್ಮಕ್ಕಳು ಎಲ್ಲ ಕುಟುಂಬ ನಿಂತಿದ್ದರಿಂದ ಸೋಲು. ನನ್ನ ಮೇಲೆ ಸುಮ್ಮನೆ ಗುಬೇ ಕೂರಿಸುವುದು.

ಲಿಂಗಾಯತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಹೀಗೆ ನನ್ನನ್ನು ಬೀಂಬಿಸಿದ್ದೆ ಹೆಚ್ಚು. 5 ವರ್ಷದ ನನ್ನ ಕಾರ್ಯಕ್ರಮ ಎಲ್ಲ ಜಾತಿ, ಧರ್ಮಕ್ಕೂ ವಿಸ್ತರಿಸಿದೆ. ನನಗೆ ಸರ್ಟಿಫಿಕೇಟ್ ಕೊಡುವುದು ಜನರೇ ಹೊರತು ದೇವೇಗೌಡ ಅಲ್ಲ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ, 59 ಸ್ಥಾನ ಇದ್ದ ಜೆಡಿಎಸ್ 29 ಕ್ಕೆ ಇಳಿದಿದದ್ದು ಏಕೆ ?

ದೇವೇಗೌಡರು ಯಾರನ್ನು ಬೆಳೆಸುವುದಿಲ್ಲ. ಸ್ವಜಾತಿಯವರನ್ನು ಬೆಳೆಸುವುದಿಲ್ಲ. ಕುಟುಂಬ ಮಾತ್ರ ಬೆಳೆಸಿಕೊಳ್ಳುತ್ತಾರೆ. ಬೈರೇಗೌಡ, ಜೀವರಾಜ್ ಆಳ್ವ, ಗೋವಿಂದೇಗೌಡ ಇವರನ್ನೆಲ್ಲ ತುಳಿದವರು ಯಾರು ? ಹೊಸಕೋಟೆಯ ಬಿ. ಎನ್. ಬಚ್ಚೇಗೌಡರನ್ನು ಕೇಳಿ, ಇನ್ನೂ ಜಾಸ್ತಿ ಹೇಳುತ್ತಾರೆ. ನಾನು ರಾಜಕೀಯವಾಗಿ ದೇವೇಗೌಡರನ್ನು ವಿರೋಧಿಸಿದರೆ ಅದಕ್ಕೆ ಜಾತಿ ಬಣ್ಣ ಕಟ್ಟುತ್ತಾರೆ. ಒಕ್ಕಲಿಗರ ವಿರೋಧಿ ಎಂದು ಬಿಂಬಿಸಿ, ಕಣ್ಣೀರು ಹಾಕುತ್ತಾರೆ. ಇವೆಲ್ಲ ದೇವೇಗೌಡರ ಹಳೆ ಗಿಮಿಕ್ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights