ಹಿರಿಯ ರಾಜಕಾರಣಿ, ಸಾಮಾಜಿಕ ಚಿಂತಕ ಮತ್ತು ಹೋರಾಟಗಾರರಾದ ಎ.ಕೆ.ಸುಬ್ಬಯ್ಯನವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ.

ಕಳೆದ 2 ವರ್ಷದಿಂದ ಗಂಟಲು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರ ಚಿಕಿತ್ಸೆಗಳನ್ನು ನೀಡಲಾಗಿತ್ತು. ಆದರೂ, ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದ ಅವರು ಎಂದಿನಂತೆ ಪ್ರಖರ ಭಾಷಣಗಳನ್ನು ಮಾಡುತ್ತಲೂ ಇದ್ದರು.

ಈ ಮಧ್ಯೆ ಕಳೆದ 1 ವರ್ಷದಿಂದ ಕಿಡ್ನಿ ತೊಂದರೆಯನ್ನು ಅನುಭವಿಸುತ್ತಿದ್ದು ಡಯಾಲಿಸಿಸ್ ನಿರಂತರವಾಗಿ ನಡೆಯುತ್ತಲಿತ್ತು. ಅವರು ತೀರಾ ಈಚೆಗೆ ಕೋಮಾಗೆ ಜಾರುವವರೆಗೂ ಸಾಮಾಜಿಕ ಕಳಕಳಿ, ಸಮಕಾಲೀನ ವಿದ್ಯಮಾನಗಳ ಕುರಿತು ಕಾಳಜಿಯಲ್ಲಿ ಎಳ್ಳಷ್ಟೂ ಬದಲಾವಣೆ ಬಂದಿಲ್ಲ. ಆಸ್ಪತ್ರೆ ಸೇರುವ ಮುಂಚೆಯೂ ಹೋರಾಟಗಾರ ಮಿತ್ರರಿಗೆ ಫೋನ್ ಮಾಡಿ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ್ದರು.

ಆದರೆ ಈ ಸಾರಿ ಆಸ್ಪತ್ರೆಗೆ ಸೇರಿರುವಾಗ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಕೆನಡಾ ದೇಶದಲ್ಲಿರುವ ಅವರ ಮಕ್ಕಳು ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಹಿರಿಯ ಪುತ್ರ ಕಾರ್ಯಪ್ಪ ಮತ್ತು ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಇನ್ನೊಬ್ಬ ಪುತ್ರ ಪೊನ್ನಣ್ಣ ಆಸ್ಪತ್ರೆಯಲ್ಲಿ ಜೊತೆಗಿದ್ದಾರೆ