ಉಪಮುಖ್ಯಮಂತ್ರಿ ಹುದ್ದೆ ಕೈತಪ್ಪುವ ಆತಂಕದಲ್ಲಿ ಲಕ್ಷ್ಮಣ್ ಸವದಿ : ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ..?

ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬ ತೀರ್ಪು ಬಂದಾಗಿನಿಂದ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಡಿಸೆಂಬರ್‌ 05ರಂದು ನಡೆಯುವ ಉಪಚುನಾವಣೆಗೆ ಟಿಕೆಟ್ ಹಂಚಿಕೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 17 ಅನರ್ಹ ಶಾಸಕರೂ ಸಹ ತುರುಸಿನಿಂದ ಬಿಜೆಪಿ ಸೇರಿ ಟಿಕೆಟ್ ಗಿಟ್ಟಿಸಲು ಕಾತರರಾಗಿದ್ದಾರೆ. ಆದರೆ ಅನರ್ಹ ಶಾಸಕರಾದ ಮಹೇಶ್ ಕುಮಟಳ್ಳಿ ಮತ್ತು ಆರ್‌ ಶಂಕರ್‌ ಚಿಂತಾಕ್ರಾಂತರಾಗಿದ್ದಾರೆ. ಅವರೊಡನೆ ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಕೆ.ಎಸ್‌ ಈಶ್ವರಪ್ಪ ಕೂಡ ಸ್ವಲ್ಪ ಡಲ್ ಆಗಿದ್ದಾರೆ.

ಕಾರಣ ನಿಮಗೆಲ್ಲಾ ಗೊತ್ತಿದೆ. ಚುನಾವಣೆಯಲ್ಲಿ ಸೋತರೂ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ್ ಸವದಿ ಇನ್ನು ಮೂರು ತಿಂಗಳಲ್ಲಿ ಶಾಸಕರಾಗಿ ಆಯ್ಕೆಯಾಗಬೇಕಿದೆ. ಇಲ್ಲದಿದ್ದಲ್ಲಿ ಅವರ ಉಪಮುಖ್ಯಮಂತ್ರಿ ಹುದ್ದೆ ಕೈತಪ್ಪಲಿದೆ. ಅವರು ವಿಧಾನಸಭೆಗೆ ಆಯ್ಕೆಯಾಗಬೇಕಾದರೆ ತಮ್ಮ ಸ್ವಕ್ಷೇತ್ರ ಅಥಣಿಯಿಂದ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಅಲ್ಲಿ ಅವರಿಗೆ ಟಿಕೆಟ್ ಸಿಗುತ್ತೋ ಅಥವಾ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿ ಅನರ್ಹನಾಗಿರುವ ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗುತ್ತೋ ಅಂತ ಇಬ್ಬರಲ್ಲಿಯೂ ಚಿಂತೆ ಜೋರಾಗಿದೆ.

ನಿನ್ನೆ ಕ್ಷೇತ್ರಗಳ ಉಸ್ತುವಾರಿ ಘೋಷಿಸುವ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಅರವಿಂದ ಲಿಂಬಾವಳಿಯವರು ಅಥಣಿ ಕ್ಷೇತ್ರಕ್ಕೆ ಕೆ.ಎಸ್ ಈಶ್ವರಪ್ಪರವನ್ನು ಪ್ರಧಾನ ಉಸ್ತುವಾರಿಯಾಗಿಯೂ, ಲಕ್ಷ್ಮಣ್ ಸವದಿಯವರನ್ನು ಸಹ ಉಸ್ತುವಾರಿಯನ್ನಾಗಿಯೂ ಘೋಷಿಸಿದ್ದಾರೆ. ಅವರಿಗೆ ಉಸ್ತುವಾರಿ ವಹಿಸುತ್ತಾರೆಂದರೆ ಟಿಕೆಟ್ ಇಲ್ಲ ಎಂತಲೇ ಅರ್ಥ. ಆದರೆ ಡಿಸಿಎಂ ಪಟ್ಟ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದಾದ ಲಕ್ಷ್ಮಣ್‌ ಸವದಿಯನ್ನು ಎದುರು ಹಾಕಿಕೊಳ್ಳುವುದು ಬೇಡ ಎಂಬ ಅಭಿಪ್ರಾಯವೂ ಬಿಜೆಪಿಯಲ್ಲಿದೆ. ಹಾಗಾಗಿ ಸವದಿಯನ್ನೇ ಅಭ್ಯರ್ಥಿಯನ್ನಾಗಿ ಮಾಡಿ ಮಹೇಶ್ ಕುಮಟಳ್ಳಿಗೆ ಬೇರೆ ಯಾವುದಾದರೂ ಆಯಾಕಟ್ಟಿನ ಜಾಗ ನೀಡುವ ಆಲೋಚನೆಯೂ ಇದೆ ಎನ್ನಲಾಗುತ್ತಿದೆ.

ಇನ್ನು ಆರ್‌ ಶಂಕರ್‌ ರಾಣಿಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಿಂದ ಶಾಸಕರಾಗಿದ್ದರು. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಅವರಿಗೆ ಮಂತ್ರಿ ಸ್ಥಾನವನ್ನು ಕೊಡಲಾಗಿತ್ತು. ಆಗ ಅವರೊಂದು ಎಡವಟ್ಟು ಮಾಡಿದರು. ಅದೇನೆಂದರೆ ಕೆಪಿಜೆಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡುವುದಾಗಿ ಪತ್ರ ಬರೆದುಕೊಟ್ಟರು. ಆನಂತರ ಮನಸ್ಸು ಬದಲಿಸಿದ ಅವರು ಹೆಚ್ಚಿನ ಆಶೆಯಿಂದ ಬಿಜೆಪಿಗೆ ಹಾರಿದರು. ವಿಪ್ ಉಲ್ಲಂಘನೆಯ ಆಧಾರದಲ್ಲಿ ಸ್ಪೀಕರ್‌ ಅವರನ್ನು ಸಹ ಅನರ್ಹಗೊಳಿಸಿದರು.

ಈಗ ಅವರು ಬಿಜೆಪಿಯಿಂದ ಅಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಆದರೆ ಅದಕ್ಕೆ ಕೆ.ಎಸ್ ಈಶ್ವರಪ್ಪ ಅಡ್ಡಗಾಲು ಹಾಕುತ್ತಿದ್ದಾರೆ. ಅವರ ಮಗ ಹಾಲಿ ಶಿವಮೊಗ್ಗ ಜಿ.ಪಂ ಸದಸ್ಯನಾಗಿದ್ದು ಅವರನ್ನು ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ರಾಣಿಬೆನ್ನೂರಿನಲ್ಲಿ ಕುರುಬ ಸಮುದಾಯದ ಅತಿ ಹೆಚ್ಚು ಮತಗಳಿವೆ ಹಾಗಾಗಿ ತನ್ನ ಮಗನಿಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಆರ್‌ ಶಂಕರ್‌ ಸ್ಥಿತಿ ಡೋಲಾಯಮಾನವಾಗಿದೆ.

ಒಂದು ವೇಳೆ ಎಲ್ಲಾ ಅನರ್ಹರಿಗೂ ಟಿಕೆಟ್ ಸಿಕ್ಕರೂ ಕೂಡ ಎಲ್ಲಾ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಅವರನ್ನು ತಟ್ಟುತ್ತದೆ. ಕೆಲವರೂ ಪ್ರತ್ಯಕ್ಷವಾಗಿ ಬಂಡಾಯವೆದ್ದರೆ ಹಲವರು ಪರೋಕ್ಷವಾಗಿ ಒಳೇಟು ನೀಡಲಿದ್ದಾರೆ. ಹಾಗಾಗಿ ಅನರ್ಹರ ಗೆಲುವು ಅಷ್ಟು ಸುಲಭವಲ್ಲ.

ಆದರೆ ಇದರಿಂದ ಬಿಜೆಪಿಗೇನೂ ತೊಂದರೆಯಿಲ್ಲ. ಏಕೆಂದರೆ ಅವರಿಗೆ ಬೆಂಬಲ ನೀಡಲು ಇನ್ನು ಮೂರುವರೆ ವರ್ಷ ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿರುತ್ತಾರೆಂದೂ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಘೋಷಿಸಿಯಾಗಿದೆ. ಹಾಗಾಗಿ ಸರ್ಕಾರ ಸುಭದ್ರವಾಗಿರುತ್ತದೆ. ಆದರೆ ಇಲ್ಲಿ ಬಲಿಪಶುಗಳು ಮಾತ್ರ ಅನರ್ಹ ಶಾಸಕರಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights