‍Fake news check : ಸ್ವಿಸ್‌ ಬ್ಯಾಂಕ್‌ನ ಪಟ್ಟಿ ಸಿಕ್ತು ಎಂಬ ಅಪ್ಪಟ ಸುಳ್ಳು..

ಸುಳ್ಳು ಸುದ್ದಿಗಳನ್ನು ವೈರಲ್ ಮಾಡುವುದರಲ್ಲಿ ಚಡ್ಡಿ ಪೈಲ್ವಾನರು ನಿಸ್ಸೀಮರು. ಇಂತಹ ಫೇಕ್ ನ್ಯೂಸ್‌ಗಳನ್ನು ಹಬ್ಬಿಸಿಯೇ 2014ರಲ್ಲಿ ಅಧಿಕಾರದ ಗದ್ದುಗೆಯನ್ನು ಚೋರ್ ಚೌಕಿದಾರರು ಆಕ್ರಮಿಸಿಕೊಂಡರು. ಇವರ ಹುಸಿ ಆಶ್ವಾಸನೆಗಳಲ್ಲಿ ಪ್ರಮುಖವಾದುದು “ಸ್ವಿಸ್ ಬ್ಯಾಂಕ್ ನಲ್ಲಿ ಭಾರತದ ಲೂಟಿಕೋರರು ಇಟ್ಟಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಜಮೆ ಮಾಡುತ್ತೇವೆಂಬ” ದಾಳ ಜನರ ಮೇಲೆ ಹೆಚ್ಚು ಪರಿಣಾಮ ಬೀರಿತ್ತು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬುರುಡೆ ಆಶ್ವಾಸನೆ ಮತ್ತು ಖಾತೆಗೆ ಹಣ ಹಾಕಲು ಎಲ್ಲರೂ ಬ್ಯಾಂಕ್ ಖಾತೆ ಹೊಂದಿರಬೇಕು, ಅದಕ್ಕಾಗಿ ಜನಧನ್ ಅಕೌಂಟ್ ಮಾಡಿಸಬೇಕೆಂಬುದನ್ನು ನಂಬಿದ ಜನರು ಅಕೌಂಟ್ ಕೂಡ ಮಾಡಿಸಿದ್ದೂ ಆಯಿತು. ಆದರೆ ಖಾತೆಗೆ 15 ಲಕ್ಷ ಜಮೆಮಾಡುವುದಿರಲಿ, ಮಿನಿಮಮ್ ಬ್ಯಾಲೆನ್ಸ್ ರೂಲ್ಸ್ ತಂದು ಜನ ಅಷ್ಟೋ ಇಷ್ಟೊ ಕೂಡಿಟ್ಟಿದ್ದ  ಹಣವನ್ನೂ ಅಕೌಂಟ್ ಗೆ ಹಾಕುವಂತೆ ಮಾಡಿದರು. ಮತಹಾಕಿದ ತಪ್ಪಿಗೆ ಉಚಿತವಾಗಿ ಬಂದ ಅಕೌಂಟ್ ಗೆ ತಾವೇ ದಂಡ ಕಟ್ಟುವಂತಹ ದುಸ್ಥಿತಿಗೆ ಜನರನ್ನು ತಂದು ಫೇಕ್ ಸರದಾರರು ಜನರನ್ನು ಯಾಮಾರಿಸಿದರು.

ಈಗ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಚಡ್ಡಿ ಸರದಾರರು ತಮ್ಮ ಫೇಕ್ ನ್ಯೂಸ್ ಕಾರ್ಖಾನೆಯಿಂದ ಮತ್ತೊಂದು ಫೇಕ್ ನ್ಯೂಸನ್ನು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹಬ್ಬಿಸುತ್ತಿದೆ. ಅದೇನೆಂದರೆ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಹೊಂದಿರುವ ಭಾರತದ 24 ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರನ್ನು ವಿಕಿಲೀಕ್ಸ್ ಪ್ರಕಟಿಸಿದೆ ಎಂಬುದು. ಮೋದಿ ಮಹಾಶಯ ಹೇಳಿದಂತೆ ಕಪ್ಪುಹಣ ಕೂಳರ ಪಟ್ಟಿಯನ್ನು ತಂದರು. ಇದು ಟ್ರೇಲರ್ ಇನ್ನೂ ಪಿಕ್ಚರ್ ಬಾಕಿ ಇದೆ ಎಂದು ಚಡ್ಡಿ ಪೈಲ್ವಾನರು ಹರ್ಷೋದ್ಘಾರದಿಂದ ಹಬ್ಬಿಸುತ್ತಿದ್ದಾರೆ. ಸ್ವಿಸ್‌ ಬ್ಯಾಂಕ್‌ನ ಕಪ್ಪು ಕೂಳರ ಕೊರಳ ಪಟ್ಟಿ ಹಿಡಿದ ಮೋದಿ ಎಂದು ಮಾಧ್ಯಮಗಳು ಸುದ್ದಿ ಮಾಡಿ ಬಕೆಟ್ ಹಿಡಿಯುವಲ್ಲಿ ನಾ ಮುಂದು ತಾ ಮುಂದು ಪೈಪೋಟಿ ನಡೆಸಿದವು.

ಆದರೆ ಸತ್ಯ ಏನಂದ್ರೆ ವಿಕಿಲೀಕ್ಸ್ ಈ ಬಗ್ಗೆ ಯಾವುದೇ ವರದಿಯನ್ನು ಮಾಡಿಲ್ಲ. ಫೇಕ್ ಸರದಾರರು ಹರಿಬಿಟ್ಟಿದ್ದ ಈ ಸುದ್ದಿಯ ಬಗ್ಗೆ ಬೂಮ್ ಲೈವ್ ಸಂಸ್ಥೆಯು ಫ್ಯಾಕ್ಟ್ ಚೆಕ್ ಮಾಡಿ ವರದಿಯನ್ನು ಪ್ರಕಟಿಸಿದೆ. ವಿಕಿಲೀಕ್ಸ್ ಕಪ್ಪು ಹಣ ಹೊಂದಿರುವವರ ಪಟ್ಟಿಯ ಬಿಡುಗಡೆ ಮಾಡಿರುವ ಬಗ್ಗೆ ಎಲ್ಲಿಯೂ ವರದಿ ಮಾಡಿಲ್ಲ. ಅಲ್ಲದೆ ವಿಕಿಲೀಕ್ಸ್‌ ಅಧಿಕೃತ ಟ್ವಿಟರ್ ಖಾತೆಯಲ್ಲಾಗಲೀ, ವೆಬ್ ಸೈಟ್ ನಲ್ಲಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬೂಮ್ ಲೈಮ್ ದೃಢಪಡಿಸಿದೆ.

ಅಂದಹಾಗೆ ಚುನಾವಣೆಗಳನ್ನು ಗಿಮಿಕ್ ಮಾಡುತ್ತಲೇ ಎದುರಿಸುತ್ತಿರುವ ಚಡ್ಡಿ ಪೈಲ್ವಾನರ ಇಂತಹ ವರಸೆ ಇದೇ ಮೊದಲೇನೂ ಅಲ್ಲ. 2011ರಲ್ಲೇ ಇಂತದ್ದೇ 24 ಜನರ ಹೆಸರಿರುವ ಪಟ್ಟಿ ಎಲ್ಲಾ ಕಡೆ ಹರಿದಾಡಿತ್ತು. ನಂತರ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರವೂ ಮೋದಿ ಮೊದಲ ಹೆಜ್ಜೆ ಎಂದೂ ಫೇಕ್ ಸರದಾರರು ಇಂತದ್ದೇ ಸುದ್ದಿಯನ್ನು ಹಬ್ಬಿಸಿದ್ದರು. ತಮಾಷೆಯೆಂದರೆ ಈ ಚಡ್ಡಿ ಸರದಾರರಿಗೆ ಕೌಂಟರ್ ಕೊಟ್ಟು 2017-18ರಲ್ಲಿಯೂ ಇಂಥ ಫೇಕ್ ನ್ಯೂಸ್ ಹರಿದಾಡಿತ್ತು. ಆ ಪಟ್ಟಿಯಲ್ಲಿ ನಾನೊಬ್ಬ ಚೌಕಿದಾರ, ನಾನೂ ತಿನ್ನಲ್ಲ – ತಿನ್ನೋರಿಗೂ ಬಿಡಲ್ಲ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದ ಮೋದಿಯವರ ಹೆಸರನ್ನೂ ಸೇರಿಸಿ ವೈರಲ್ ಮಾಡಲಾಗಿತ್ತು.

2011ರಲ್ಲಿ ಮೊದಲ ಬಾರಿಗೆ ಹರಿದು ಬಂದ ಸುದ್ದಿ ಫೇಕ್ ಎಂದು ವಿಕಿಲೀಕ್ಸ್ ಸ್ಪಷ್ಟಪಡಿಸಿತ್ತು. ಮುಂದೆಯೂ ಇಂಥದ್ದೇ ಫೇಕ್ ನ್ಯೂಸ್ ಹರಿದಾಡಲಾರಂಭಿಸಿದಾಗ ವಿಕಿಲೀಕ್ಸ್ ತಲೆ ಕೆಡಿಸಿಕೊಳ್ಳಲಿಲ್ಲ. ಒಟ್ಟಿನಲ್ಲಿ ಚುನಾವಣೆಗಳು ಎದುರಾದಾಗಲೆಲ್ಲಾ ಈ ದೇಶಕ್ಕೆ ಕಪ್ಪು ಹಣ ಕೂಳರ ಪಟ್ಟಿಗಳು ಬಿಡುಗಡೆಯಾಗುತ್ತವೆ. ದಸರಾ ಸಂದರ್ಭದಲ್ಲಿ ಭಯೋತ್ಪಾದರು ಮೈಸೂರು, ಬೆಂಗಳೂರಿನ ಮೇಲೆ ಅಟ್ಯಾಕ್ ಮಾಡುವ ಫೇಕ್ ಸಂದರ್ಭಗಳೂ, ಫೇಕ್ ಸುದ್ದಿಗಳು ಹೆಗ್ಗಿಲ್ಲದೆ ಹರಿಯುತ್ತವೆ. ಇಂತಹ ಫೇಕ್ ಸುದ್ದಿಗಳನ್ನು ನೋಡಿ ನಿಜವಾಗಿಯೂ ಅಟ್ಯಾಕ್ ಆದರೂ ಜನರು ತಲೆ ಕೆಡಿಸಿಕೊಳ್ಳದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ.

ಇದೆಲ್ಲದರ ಮಧ್ಯೆ, ಸಾಮಾನ್ಯ ಜ್ಞಾನವೂ, ವಿಶ್ಲೇಷಣೆಯೂ ಇಲ್ಲದ ನ್ಯೂಸ್ ಚಾನಲ್ ಗಳು ಅದು ಫೇಕ್ ಅಥವಾ ಫ್ಯಾಕ್ಟ್ ಆಗಿದೆಯೇ ಎಂದೂ ನೋಡದೆ ನಾಮುಂದು ತಾಮುಂದು ಎಂಬಂತೆ ಫೇಕ್ ಸುದ್ದಿಯನ್ನೇ ಬಿತ್ತರಿಸುತ್ತಿರುವುದು ವಿಪರ್ಯಾಸ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.