ಸಾಲಭಾದೆ ಅನ್ನದಾತರ ಕುಟುಂಬಕ್ಕೆ ಉ.ಪ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ – ಪ್ರಿಯಾಂಕಾ ಗಾಂಧಿ ಆರೋಪ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ರಾಜ್ಯದಲ್ಲಿ ರೈತರನ್ನು ಕಡೆಗಣಿಸಿದ್ದು, ಜಾಹೀರಾತುಗಳಲ್ಲಿ ಮಾತ್ರ ರೈತರನ್ನು ನೆನಪು ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ. ಅನ್ನದಾತರನ್ನು ಕಡೆಗಣಿಸುತ್ತಿದ್ದು, ಜಾಹೀರಾತುಗಳಲ್ಲಿ ಮಾತ್ರ ನೆನಪು ಮಾಡಿಕೊಳ್ಳುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.
ಮಹೋಬಾ ಮತ್ತು ಹಮೀರ್ ಪುರ್ ನಲ್ಲಿ ಇಬ್ಬರು ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅನ್ನದಾತರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಭಾರೀ ಮಳೆಯಿಂದ ನೆರೆ ಬಂದು, ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿ ಕಂಗಾಲಾಗಿರುವ ರೈತರಿಗೆ ಉತ್ತರ ಪ್ರದೇಶ ಸರ್ಕಾರ ಪರಿಹಾರ ನೀಡಿಲ್ಲ. ಸಾಲಮನ್ನಾ ಹೆಸರಿನಲ್ಲಿ ಯೋಗಿ ಅದಿತ್ಯನಾಥ್ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಮಾಧ್ಯಮಗಳಿಗೆ ಜಾಹೀರಾತು ನೀಡಿ, ಅದರಲ್ಲಿ ರೈತರ ಫೋಟೋ ಹಾಕುವ ಮೂಲಕ ರೈತರ ಗುಣಗಾನ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.