ಶಾ, ನಿರ್ಮಲಾ ಬಂದ್ರು ಹೋದ್ರು, ಪರಿಹಾರದ ಹಣ ಮಾತ್ರ ಬರಲಿಲ್ಲ : ರಾಜ್ಯಕ್ಕೆ ಸ್ಪಂದಿಸದ ಕೇಂದ್ರ ಸರಕಾರ

ದಶಕಗಳಲ್ಲಿ ಕಾಣದ ಭಾರೀ ಪ್ರವಾಹದಿಂದ ತತ್ತರಿಸಿಹೋಗಿರುವ ರಾಜ್ಯದ ನೆರವಿಗೆ ಕೇಂದ್ರ ಸರಕಾರ ಕೂಡಲೇ ಧಾವಿಸುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ಪ್ರವಾಹ ಪರಿಸ್ಥಿತಿಯಿಂದ ಅರ್ಧ ರಾಜ್ಯ ಬಾಧಿತವಾಗಿದ್ದರೂ ಕೇಂದ್ರ ಸರಕಾರ ಪರಿಹಾರದ ಸೊಲ್ಲೆತ್ತದಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಸುಮಾರು 40 ಸಾವಿರ ಕೋಟಿ ರೂ ನಷ್ಟವಾಗಿದೆ. ರಾಜ್ಯದ ಬೆನ್ನೆಲುಬು ಮುರಿದಂತಾಗಿದೆ. ಈ ಕೂಡಲೇ ಕನಿಷ್ಟ 3 ಆವಿರ ಕೋಟಿ ರೂಗಳ ನೆರವನ್ನಾದರೂ ಕೊಡಿ ಎಂದು ಸಿಎಂ ಯಡಿಯೂರಪ್ಪ ಪದೇಪದೆ ಮನವಿ ಮಾಡಿದರೂ ಈ ಕುರಿತು ಕೇಂದ್ರ ಸರಕಾರ ಯಾವುದೇ ಭರವಸೆ ನೀಡಿಲ್ಲ.

ಖುದ್ದು ದುಡ್ಡು ಮಂತ್ರಿ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿಯ ಸ್ಟ್ರಾಂಗ್ ಮ್ಯಾನ್, ಗೃಹ ಸಚಿವ ಅಮಿತ್ ಶಾ ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ಹೋದರಾದರೂ ಪರಿಹಾರ ಮೊತ್ತದ ಬಗ್ಗೆ ಚಕಾರವೆತ್ತಿಲ್ಲ.

ರಾಜ್ಯದ 16 ಜಿಲ್ಲೆಗಳ 80 ತಾಲೂಕುಗಳು ನೀರಿನಲ್ಲಿ ಮುಳುಗಿವೆ. ಅಪಾರ ಪ್ರಮಾಣದಲ್ಲಿ ಪರಿಹಾರ ಕಾಮಗಾರಿ ನಡೆಯಬೇಕಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯದ ನೆರವಿಗೆ ಧಾವಿಸಬೇಕಾದ್ದು ಧರ್ಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಮಾತನ್ನು ಮಾಜಿ ಸಿಎಂ ಕುಮಾರಸ್ವಾಮಿ ಸಹ ಅನುಮೋದಿಸಿದ್ದಾರೆ. ರಾಜ್ಯಕ್ಕೆ ಬಂದು ಸಂದರ್ಭದಲ್ಲಿ ಗೃಹ ಸಚಿವರು ಕೇಂದ್ರದ ನಿಲುವು ಪ್ರಕಟ ಮಾಡಬೇಕಿತ್ತು. ಸಿಎಂ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ಅಥವಾ ಭರವಸೆ ನೀಡದೇ ಗೃಹ ಸಚಿವರು ಹಿಂತಿರುಗಿರುವುದಕ್ಕೆ ಎಚ್ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣಾ ಪೂರ್ವದಲ್ಲಿ ಒಡಿಶಾ ಇದೇ ರೀತಿ ನೀರಿನಲ್ಲಿ ಮುಳುಗಿದ್ದಾಗ ವಿಮಾನ ನಿಲ್ದಾಣದಲ್ಲಿಯೇ ೫೦೦೦ ಕೋಟಿ ರೂ ಪರಿಹಾರ ಪ್ಯಾಕೇಜನ್ನು ಖುದ್ದು ಪ್ರಧಾನಿ ಮೋದಿ ಅವರೇ ಘೋಷಿಸಿದ್ದರು. ರಾಜ್ಯದ ವಿಚಾರದಲ್ಲಿ ಇಂತಹ ಘೋಷಣೆಗಳು ಏಕಿಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.