ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿ ಕಡೆಗಣಿಸಿದ ಸರ್ಕಾರದ ವಿರುದ್ಧ ಅನ್ನದಾತರ ಪ್ರತಿಭಟನೆ

ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದ ರಾಜ್ಯ ಸರ್ಕಾರ ತಾನು ಕೊಟ್ಟ ಮಾತನ್ನು ತಪ್ಪಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಇಂದು ನಗರದಲ್ಲಿ ಮತ್ತೆ ಪ್ರತಿಭಟನೆಗೆ ಇಳಿದಿವೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ ರೈತರು ಮೌರ್ಯ ಸರ್ಕಲ್​ನಲ್ಲಿ ಅಹೋರಾತ್ರಿ ಧರಣಿ ಕುಳಿತಿದ್ದಾರೆ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರೈತರು ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದವರೆಗೂ ಪಾದಯಾತ್ರೆ ಮಾಡಲಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ರೈತರ ಪ್ರತಿಭಟನೆಗೆ ಬೆಂಬಲವಾಗಿ ನಿಂತಿವೆ.ಕಳೆದ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ರಾಜ್ಯದ ವಿವಿಧೆಡೆಯಿಂದ ರೈತರು ನಗರದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟ ಬಳಿಕ ಪ್ರತಿಭಟನೆ ನಿಲ್ಲಿಸಿ ರೈತರು ವಾಪಸ್ಸಾಗಿದ್ದರು. ಆಗ ಕೊಟ್ಟ ಭರವಸೆ ಯಾವುದೂ ಈಡೇರುವ ಲಕ್ಷಣ ತೋರದ್ದರಿಂದ ರೈತರು ಮತ್ತೆ ಪ್ರತಿಭಟನೆಗೆ ಅಡಿ ಇಟ್ಟಿದ್ದಾರೆ.

ರೈತರ ಬೇಡಿಕೆಗಳೇನು?
1) ನಿರಾಶ್ರಿತರಿಗೆ ಮನೆ ಕಟ್ಟಿಕೊಡಬೇಕು.
2) ಮುಳುಗಡೆ ಆದ ಪ್ರದೇಶಗಳನ್ನು ಬೇರೆಡೆ ಸ್ಥಳಾಂತರ ಮಾಡಿಕೊಡಬೇಕು.

3) ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ಕಟ್ಟುವಂತೆ ಕಿರುಕುಳ ಕೊಡುತ್ತಿದ್ದಾರೆ. ಅದನ್ನ ನಿಲ್ಲಿಸಬೇಕು.
4) ಒಂದು ಕಡೆ ನೆರೆ, ಮತ್ತೊಂದು ಕಡೆ ಬರ. ಎರಡಕ್ಕೂ ಪರಿಹಾರ ಕೊಡಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.