ರಾಜ್ಯಕ್ಕೆ ಪರಿಹಾರ ವಿಳಂಬ : 25 ಬಿಜೆಪಿ ಸಂಸದರಿಗಿಲ್ಲ ವಿರೋಧ ಪಕ್ಷಗಳಿಂದ ಒತ್ತಡ : ನೆರೆ- ಬರಕ್ಕೆ ಬೇಕು 1 ಲಕ್ಷ ಕೋಟಿ ರೂ.

ಕರ್ನಾಟಕಕ್ಕೆ ನಿಜಕ್ಕೂ ದೊಡ್ಡ ಅನ್ಯಾಯವಾಗುತ್ತಿದೆ. ಈ ಅನ್ಯಾಯವು ನರೇಂದ್ರ ಮೋದಿ ಸರ್ಕಾರದಿಂದ ಮಾತ್ರ ಆಗುತ್ತಿದೆ ಎಂಬುದು ನಿಜವಲ್ಲ. ಕರ್ನಾಟಕದ ಗ್ರಾಮೀಣ ಭಾಗದ ನಿರ್ದಿಷ್ಟ ಪರಿಸ್ಥಿತಿಗೆ ತಕ್ಕಂತಹ ಪರಿಹಾರ/ಯೋಜನೆ ರೂಪಿಸಲು ಕಾಂಗ್ರೆಸ್ ಸಹ ವಿಫಲವಾಗಿದೆ. ಆದರೆ ಮೋದಿ ಸರ್ಕಾರದಿಂದ ಈ ಅನ್ಯಾಯ ಇನ್ನೂ ಹೆಚ್ಚಾಗಿದೆ. ಇದರ ಆಳ-ಅಗಲಗಳನ್ನು ಅರ್ಥ ಮಾಡಿಕೊಂಡು ನಮ್ಮ ಹಕ್ಕೊತ್ತಾಯ, ಘೋಷಣೆ ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವ ಕೆಲಸವನ್ನು ವಿರೋಧ ಪಕ್ಷಗಳೂ ಮಾಡಲಿಲ್ಲ. 25 ಬಿಜೆಪಿ ಸಂಸದರನ್ನು ಕೇಂದ್ರಕ್ಕೆ ಕಳಿಸಿರುವ ಕರ್ನಾಟಕಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದರು ಎಂಬ ‘ರಾಜಕೀಯ ಆಪಾದನೆ’ಯನ್ನು ಮಾತ್ರ ವಿರೋಧ ಪಕ್ಷಗಳು ಮಾಡಿದವು. ಅಂತಿಮವಾಗಿ ಪುಡಿಗಾಸಿನ ಪರಿಹಾರ ಸಿಕ್ಕ ಮೇಲೆ ಒಂದು ಹೇಳಿಕೆಯನ್ನು ಬಿಸಾಡಿ ಸುಮ್ಮನೇ ಕುಂತವು.

ವಿವಿಧ ರಾಜ್ಯಗಳ ಪ್ರಾಕೃತಿಕ ವಿಕೋಪಗಳಿಗೆ ಕೂಡಲೇ ಸ್ಪಂದಿಸಿ ಸಾಂತ್ವನದ ಮಾತುಗಳನ್ನು ಆಡಿದ್ದರಲ್ಲಿ ಮತ್ತು ಆಯಾ ಮುಖ್ಯಮಂತ್ರಿಗಳಿಗೆ ಲಭ್ಯವಾಗುವುದರಲ್ಲಿ ಪ್ರಧಾನಿ ಮೋದಿಯವರಿಗಿದ್ದಂತಹ ಉಮೇದು ಕರ್ನಾಟಕದ ವಿಚಾರದಲ್ಲಿ ಇರಲಿಲ್ಲ ಎಂಬುದು ವಾಸ್ತವ. ಯಡಿಯೂರಪ್ಪನವರು ಕೋರಿದರೂ ಭೇಟಿಗೆ ಸಮಯವನ್ನೂ ಕೊಡದ ರೀತಿಯ ಉಪೇಕ್ಷೆಯನ್ನು ಪ್ರಧಾನಿ ತೋರಿದರು. ಇವೆಲ್ಲವೂ ಖಂಡನಾರ್ಹ. ಆದರೆ, ಅದಕ್ಕಿಂತ ಖಂಡನಾರ್ಹ ಸಂಗತಿಯೆಂದರೆ, ಕರ್ನಾಟಕದ ಅದರಲ್ಲೂ ಗ್ರಾಮೀಣ ಕರ್ನಾಟಕದ ದುಃಸ್ಥಿತಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವುದರಲ್ಲಿ ಆಗಿರುವ ವೈಫಲ್ಯ. ಈ ಲೇಖನವು ಅದರ ಕುರಿತು ಗಮನ ಸೆಳೆಯಲು ಬಯಸಿದೆ.

(ಇದೇ ಸಂಚಿಕೆಯಲ್ಲಿ ಎನ್‍ಡಿಆರ್ ಫ್ ಎಂದರೆ ಏನು ಮತ್ತು ರಾಜ್ಯಕ್ಕೆ ಬಂದ ಹಾಗೂ ಬರಬೇಕಾದ ಕೇಂದ್ರದ ಅನುದಾನದ ಕುರಿತು ಎರಡು ಪ್ರತ್ಯೇಕ ಬರಹಗಳಿವೆ. ಓದುಗರು ಅವನ್ನೂ ಗಮನಿಸಬೇಕಾಗಿ ಮನವಿ)

ಈ ಬಾರಿ ಕರ್ನಾಟಕಕ್ಕೆ ಆದ ನಷ್ಟ ಎಷ್ಟು..?

ಮುಂಗಾರು ಶುರುವಾಗಬೇಕಿದ್ದಾಗ ಮಳೆ ಕೊರತೆಯಿದ್ದ ಈ ವರ್ಷದಲ್ಲಿ ನಂತರ ಆಗಸ್ಟ್ ತಿಂಗಳಲ್ಲಿ ಭೋರೆಂದು ಮಳೆ ಸುರಿಯಿತು. ಮಲೆನಾಡು ಮತ್ತು ಕೊಡಗು ಅಂತಹ ಮಳೆಯ ಕಾರಣಕ್ಕೆ ತೊಂದರೆಗೀಡಾದರೆ, ಮುಂಬೈ ಕರ್ನಾಟಕವು ಹೆಚ್ಚು ಘಾಸಿಗೊಳಗಾಗಿದ್ದು, ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಬಿಟ್ಟ ಭಾರೀ ಪ್ರಮಾಣದ ನೀರಿನಿಂದ. ಒಟ್ಟಿನಲ್ಲಿ ಈ ಅವಧಿಯಲ್ಲಿ ದೇಶದ 16 ರಾಜ್ಯಗಳಲ್ಲಿ ಪ್ರವಾಹ ಒಂದಲ್ಲಾ ಒಂದು ಪ್ರಮಾಣಕ್ಕೆ ಹಾನಿ ಮಾಡಿತ್ತು. ಒಂದು ಹಂತದಲ್ಲಿ ಕರ್ನಾಟಕದ 22 ಜಿಲ್ಲೆಗಳ 120 ತಾಲೂಕುಗಳ 8 ಲಕ್ಷ ಮನೆಗಳ ಕುಸಿತವಾಗಿದ್ದು, 20 ಲಕ್ಷ ಎಕರೆ ಬೆಳೆ ನಷ್ಟವಾಗಿದೆ. ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಎಂಬ ವರದಿಗಳಿದ್ದವು.

ಆಗಿರುವ ನಷ್ಟದ ಪ್ರಮಾಣದ ಕುರಿತು 38,000 ಕೋಟಿಯಿಂದ ಒಂದು ಲಕ್ಷ ಕೋಟಿಗಳವರೆಗೆ ಹೇಳಲಾಗುತ್ತಿದೆ. 38,000 ಕೋಟಿ ರೂ. ಎಂಬುದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ ಅಧಿಕೃತ ಅಂಕಿ-ಅಂಶವಾದರೆ, ಇದು 1 ಲಕ್ಷ ಕೋಟಿ ರೂ.ನಷ್ಟು ಎಂದು ಹೇಳಲು ಕಾರಣಗಳಿವೆ. ಅವುಗಳನ್ನು ನಂತರ ಮುಂದಿಡಲಾಗಿದೆ.

ನೆರೆಯಿಂದಾಗುವ ನಷ್ಟ ಎಂದರೆ ಏನೇನು?

ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಸೆಪ್ಟೆಂಬರ್ ನಲ್ಲಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಸೂಚನೆಯ ಪ್ರಕಾರ ಬೆಳೆ ಹಾನಿ, ಮನೆಗಳಿಗೆ ಹಾನಿ, ಸರ್ಕಾರಿ ಶಾಲೆ, ರಸ್ತೆ, ಸೇತುವೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಕಟ್ಟಡಗಳು ಇವೆಲ್ಲಕ್ಕೆ ಆದ ನಷ್ಟದ ಕುರಿತು ಮೂರು ಹಂತದ ವರದಿ ಮಾಡಬೇಕಿತ್ತು. ಈ ಕುರಿತು ಮೊದಲ ಹಂತದ ಸಮೀಕ್ಷೆ ಆಗುವ ಮುಂಚೆಯೇ ರಾಯಚೂರು ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದ್ದರು. ಎನ್‍ಡಿಆರ್ ಫ್ ನಿಯಮದ ಪ್ರಕಾರ ರಾಯಚೂರಿನಲ್ಲಿ 39 ಕೋಟಿ ರೂ.ನಷ್ಟು ಹಾನಿಯಾಗಿದೆ ಮತ್ತು ಅದರಲ್ಲಿ 18.50 ಕೋಟಿ ರೂ. ಬೆಳೆ ಹಾನಿ (ರಾಯಚೂರು ಡಿಸಿ 3.10.2019). ಅದೇ ದಿನ ಯಾದಗಿರಿ ಜಿಲ್ಲಾಧಿಕಾರಿಯವರು ಹೇಳಿದ್ದು, ‘ಮನೆ, ಬೆಳೆ, ರಸ್ತೆ, ವಿದ್ಯುತ್ ಇತ್ಯಾದಿ 190 ಕೋಟಿ ರೂ. ನಷ್ಟವಾಗಿದ್ದು, ಎನ್‍ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಮಾರ್ಗಸೂಚಿ ಅನ್ವಯ 26.16 ಕೋಟಿ ರೂ. ನಷ್ಟವಾಗಿದೆ.’

ಆಗುವ ನಷ್ಟದಲ್ಲಿ ಪರಿಹಾರ ಎಷ್ಟು ಸಿಗುತ್ತದೆ?

ಅಂದರೆ ಎನ್‍ಡಿಆರ್ ಎಫ್ ಎಂಬುದು ಪ್ರವಾಹವಷ್ಟೇ ಅಲ್ಲದೇ, ಬರ ನಿರ್ವಹಣೆಯಲ್ಲೂ ಪಾತ್ರ ವಹಿಸುತ್ತದೆ. ನಷ್ಟ ಲೆಕ್ಕ ಹಾಕುವುದರಲ್ಲೇ ಅವೈಜ್ಞಾನಿಕ ಮಾರ್ಗಸೂಚಿಯನ್ನು ಅದು ಮುಂದಿಡುತ್ತದೆ. ಪರಿಹಾರ ನೀಡುವುದು ರಾಜ್ಯವೊಂದಕ್ಕೆ ಆಗಿರುವ ಸಮಗ್ರ ನಷ್ಟಕ್ಕಲ್ಲ. ತಕ್ಷಣದಲ್ಲಿ ಪರಿಹಾರ ಸಿಗುವುದು (ತಕ್ಷಣ ಎಂದರೆ 3ರಿಂದ 6 ತಿಂಗಳು) ಮನೆ ಕುಸಿತ ಮತ್ತು ಬೆಳೆಹಾನಿಗೆ ಮಾತ್ರ. ಮನೆ ಕುಸಿತಕ್ಕೆ ಎನ್‍ಡಿಆರ್ ಎಫ್‍ನಿಂದ ಸಿಗುವ ಗರಿಷ್ಠ ಪರಿಹಾರ 95,000 ರೂ. ಮಾತ್ರ. ಬೆಳೆ ಹಾನಿಗೆ ಪರಿಹಾರ ಸಿಗುವುದರ ಕುರಿತು, ಈ ಅಧಿಕೃತ ಹೇಳಿಕೆಯನ್ನು ನೀವು ನೋಡಬೇಕು.

ಆಗಸ್ಟ್ 13, 2014ರಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ನೀಡಿದ ಉತ್ತರವಿದು. ‘ರಾಜ್ಯ ಅಥವಾ ಕೇಂದ್ರ ನೈಸರ್ಗಿಕ ಪ್ರಕೋಪ ನಿಧಿಗಳಿಂದ ಬೆಳೆ ನಷ್ಟ ಪರಿಹಾರ ನೀಡುವ ಯಾವುದೇ ವ್ಯವಸ್ಥೆಯಿಲ್ಲ. ಅದೇನಿದ್ದರೂ, ನಾವು ನೀಡುವುದು ಒಂದು ರೀತಿಯ ನೆರವು ಅಷ್ಟೇ. (ಹಾಗಾಗಿಯೇ ಇದನ್ನು ಇನ್‍ಪುಟ್ ಸಬ್ಸಿಡಿ ಅಥವಾ ಒಳಸುರಿ ಸಬ್ಸಿಡಿ ಎನ್ನಲಾಗುತ್ತದೆ)’

ಜುಲೈ 31, 2015ರಂದು ಕೃಷಿ ಖಾತೆ ರಾಜ್ಯ ಸಚಿವ ಕುಂದರಿಯಾ ನೀಡಿದ ಉತ್ತರವಿದು. ‘ರಾಜ್ಯ ಸರ್ಕಾರವು ತನ್ನ ವಶದಲ್ಲಿರುವ ರಾಜ್ಯ ನಿಧಿಯಿಂದ ಬರ ಪರಿಹಾರ ಕ್ರಮಗಳನ್ನು ಏನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಬಹುದು. ಅದಕ್ಕಿಂತಲೂ ಹೆಚ್ಚಿನ ನೆರವು ಬೇಕಿದ್ದರೆ, ಅವರು ನಮಗೆ ಮನವಿ ಮಾಡಿಕೊಳ್ಳಬೇಕು. ಮನವಿ ಬಂದ ನಂತರ, ಕೇಂದ್ರ ಕೃಷಿ ಮತ್ತು ಸಹಕಾರ ಸಚಿವಾಲಯವು ಒಂದು ತಜ್ಞರ ತಂಡವನ್ನು ರಾಜ್ಯಗಳಿಗೆ ಕಳಿಸಿ, ಯಾವ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ ಮತ್ತು ಅದಕ್ಕೆ ಎಷ್ಟು ಪರಿಹಾರ ನೀಡಬೇಕೆಂಬುರ ಬಗ್ಗೆ ಒಂದು ಅಂದಾಜು ತಯಾರಿಸಲು ಕಳಿಸುತ್ತೇವೆ. ಅದು ನೀಡಿದ ವರದಿಯನ್ನು ರಾಷ್ಟ್ಟೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯ ಮುಂದಿಡಲಾಗುತ್ತದೆ. ಅದು ಈಗಾಗಲೇ ರಾಜ್ಯ ಮತ್ತು ಕೇಂದ್ರ ನಿಧಿಗಳೆರಡರಿಂದಲೂ (ಗಮನಿಸಿ ಎರಡೂ ನಿಧಿಗಳಿಂದ ಎಷ್ಟು ಕೊಡಬಹುದೆಂಬುದನ್ನು ಕೇಂದ್ರವೇ ನಿಯಮ ಮಾಡಿಟ್ಟಿದೆ) ಎಷ್ಟು ಕೊಡಬೇಕೆಂಬ ನಿಯಮಗಳ ಆಧಾರದ ಮೇಲೆ ತನ್ನ ಶಿಫಾರಸ್ಸನ್ನು ಕೇಂದ್ರ ನೆರವನ್ನು ಮಂಜೂರು ಮಾಡುವ ಉನ್ನತ ಮಟ್ಟದ ಸಮಿತಿಯ ಮುಂದಿಡುತ್ತದೆ. (ಈ ಎಲ್ಲಾ ಸಮಿತಿಗಳು ಇರುವುದು ರಾಜ್ಯ ಸರ್ಕಾರ ಮುಂದಿಟ್ಟ ಬೆಳೆ ನಷ್ಟದ ಅಂದಾಜನ್ನು ಮತ್ತಷ್ಟು, ಮಗದಷ್ಟು ಇಳಿಸೀ, ಇಳಿಸೀ ಶೇಕಡಾವಾರು ನಷ್ಟವನ್ನು ಬಹಳ ಕಡಿಮೆ ಮಾಡಲಾಗುತ್ತದೆ. ಉದಾಹರಣೆಗೆ 2014-15ನೇ ಸಾಲಿನಲ್ಲಿ ಕರ್ನಾಟಕವು ಒಟ್ಟು 779.20 ಕೋಟಿಗಳಷ್ಟು ನೆರವನ್ನು ಕೇಂದ್ರದಿಂದ ಬಯಸಿದ್ದರೆ, ಅಂತಿಮವಾಗಿ ಮಂಜೂರಾಗಿದ್ದು 200.85 ಕೋಟಿ ರೂ.ಗಳು ಮಾತ್ರ).

ರಾಜ್ಯ ಮತ್ತು ಕೇಂದ್ರ ನಿಧಿಗಳಿಂದ ನೀಡಬಹುದಾದ ಪರಿಹಾರದ ಪ್ರಮಾಣವು ಈಗ ಕೆಳಕಂಡಂತಿದೆ. ಒಣಪ್ರದೇಶದ ರೈತರಿಗೆ ಹೆಕ್ಟೇರ್ (ಸುಮಾರು ಎರಡೂವರೆ ಎಕರೆ) ಒಂದಕ್ಕೆ 6,800 ರೂ.ಗಳು, ನೀರಾವರಿ ಪ್ರದೇಶದಲ್ಲಿ ಹೆಕ್ಟೇರ್ ಗೆ 13,500 ರೂ.ಗಳು ಮತ್ತು ವಾರ್ಷಿಕ ಬೆಳೆಗಳಾದರೆ ಹೆಕ್ಟೇರ್ ಗೆ 18,000 ರೂ.ಗಳು. ಬೆಳೆ ನಷ್ಟ ಶೇ. 33ಕ್ಕಿಂತ ಹೆಚ್ಚಿದ್ದರೆ ಇಷ್ಟನ್ನು ಕೊಡಲಾಗುತ್ತದೆ.’ ಅಂದರೆ, ಭತ್ತಕ್ಕೆ ಎಕರೆಗೆ 5,400 ರೂ. ಇಷ್ಟು ಪರಿಹಾರ ಸಹ ಯಾರಿಗೂ ಸಿಗುವುದಿಲ್ಲ. ಏಕೆಂದರೆ, ರಾಜ್ಯ ಸರ್ಕಾರವು ಶೇ.100ರಷ್ಟು ನಷ್ಟ ಎಂದು ಹೇಳಿದರೂ, ಅದನ್ನು ವಿವಿಧ ಸಮಿತಿಗಳು ಇಳಿಸುತ್ತಾ ಬಂದು, ಎಕರೆಗೆ 1,000 ರೂ.ಗಳಿಂದ ಹೆಚ್ಚೆಂದರೆ 2,500 ರೂ.ಗಳು ಸಿಗುತ್ತವೆ. ಆದರೆ, ಭತ್ತದ ನಾಟಿಗೇ ಎಕರೆಗೆ ಕನಿಷ್ಠ 15,000 ರೂ.ಗಳು ಖರ್ಚಾಗುತ್ತದೆ. ತೀರಾ ಇತ್ತೀಚೆಗಿನ ಉದಾಹರಣೆ ಕೊಡಬೇಕೆಂದರೆ ಯಾದಗಿರಿ ಜಿಲ್ಲೆಯಲ್ಲಿ 2018-19ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಉಂಟಾದ 29,098 ಹೆಕ್ಟೇರ್ ಬೆಳೆಹಾನಿಗೆ 25 ಕೋಟಿ ರೂ.

ಕರ್ನಾಟಕಕ್ಕೆ ಹೆಚ್ಚಿನ ಪರಿಹಾರ ಕೇಳುವುದು ತಪ್ಪೇ?

ಈ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಯಾಗಿದೆ. ಕರ್ನಾಟಕದಂತಹ ರಾಜ್ಯವು ಕೇಂದ್ರಕ್ಕೆ ಇಷ್ಟೆಲ್ಲಾ ತೆರಿಗೆ ಹಣ ನೀಡಿಯೂ ಕೇಂದ್ರದ ಮುಂದೆ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮಗಳ ಪ್ರಕಾರ ಇಷ್ಟೇ ಕೇಳೋಕಾಗೋದು, ಅಷ್ಟನ್ನು ಕೇಳಿದ್ದೇವೆ. ಸ್ವಲ್ಪ ಹೆಚ್ಚು ಕಡಿಮೆ ಕೊಟ್ಟಿದ್ದಾರೆ ಎನ್ನುವ ರೀತಿಯಲ್ಲಿ ಆಳುವ ಸರ್ಕಾರಗಳ ಪಕ್ಷಗಳು ಹೇಳುತ್ತವೆ. ಹಾಗಾದರೆ, ಕಂದಾಯ ಸಚಿವ ಆರ್.ಅಶೋಕ್ ಅವರು ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ‘ನಾವು 38 ಸಾವಿರ ಕೋಟಿ ಕೇಳಿದ್ದೇವೆ. ಮಾರ್ಗಸೂಚಿ ಹೊರತುಪಡಿಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ.’ ಎಂದೇಕೆ ಹೇಳಿದರು?

ಕರ್ನಾಟಕವು ಒಟ್ಟಾರೆ ಅರ್ಥದಲ್ಲಿ ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾದರೂ, ಇಲ್ಲಿನ ಗ್ರಾಮೀಣ ಭಾಗವು ಅತ್ಯಂತ ದುಃಸ್ಥಿತಿಯಲ್ಲಿದೆ. ಈ ದುಃಸ್ಥಿತಿಯ ಪ್ರಮಾಣದ ಅರಿವು ಯಾರಿಗೂ ಇದ್ದಂತಿಲ್ಲ. ಇದು ಸತತ ಬರದ ಕಾರಣಕ್ಕೆ ಉಂಟಾಗಿರುವ ಅಕ್ಯುಮ್ಯುಲೇಟೆಡ್ ನಷ್ಟ. ಏಕೆಂಬುದನ್ನು ಕೆಳಗೆ ನೋಡಿ.

ಕಳೆದ 18 ವರ್ಷಗಳಲ್ಲಿ 13 ವರ್ಷ ಈ ರಾಜ್ಯದ ಅರ್ಧದಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. 9 ವರ್ಷಗಳ ಕಾಲ 100ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದವು. ವರ್ಷ ಮತ್ತು ಬರಪೀಡಿತ ತಾಲೂಕುಗಳ ಸಂಖ್ಯೆ ಹೀಗಿವೆ.

2001 –33, 2002-159, 2003-162, 2004–80, 2006–129, 2008–84, 2009– 86, 2011 -123, 2012–157, 2013- 125, 2014– 35, 2015–136, 2016- 139, 2017 – 107, 2018 – 156.

ಇದೇ ಅವಧಿಯಲ್ಲಿ ಮೂರು ಸಾರಿ ನೆರೆ (ಅದರಲ್ಲಿ ಒಮ್ಮೆ ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚು, ಒಮ್ಮೆ ಕೊಡಗಿನಲ್ಲಿ, ಈ ಸಾರಿ ಮುಂಬೈ ಕರ್ನಾಟಕ-ಮಲೆನಾಡು ಮತ್ತು ಕೊಡಗಿನಲ್ಲಿ) ಯಿಂದ ಕರ್ನಾಟಕದ ಗ್ರಾಮೀಣ ಭಾಗ ತೀವ್ರ ಸಂಕಷ್ಟಕ್ಕೆ ಗುರಿಯಾಯಿತು. ಇವೆಲ್ಲಾ ಕಾರಣಗಳಿಂದ ಕೆ.ಎಸ್.ಪುಟ್ಟಣ್ಣಯ್ಯನವರು ಶಾಸಕರಾಗಿದ್ದಾಗ ಕರ್ನಾಟಕಕ್ಕೊಂದು ವಿಶೇಷ ಪ್ಯಾಕೇಜ್ ಬೇಕೆಂದು ಆಗ್ರಹಿಸಿ ಖಾಸಗಿ ನಿರ್ಣಯವನ್ನೂ ಮಂಡಿಸಿದ್ದರು.

ಈ ವರ್ಷ ರಾಜ್ಯದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಅತಿವೃಷ್ಟಿ ಆಗುತ್ತಿದ್ದ ಸಂದರ್ಭದಲ್ಲೇ ದಕ್ಷಿಣ ಕರ್ನಾಟಕದ 740 ಹಳ್ಳಿಗಳಿಗೆ ಕುಡಿಯುವ ನೀರೂ ಇಲ್ಲದೇ, ಸ್ಥಳೀಯವಾಗಿ ಬೋರ್‍ವೆಲ್‍ನಲ್ಲೂ ನೀರು ಇಲ್ಲದೇ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿತ್ತು!! ಇದು ಕರ್ನಾಟಕದಂತಹ ಮಳೆ ನೆರಳಿನ ಪ್ರದೇಶ ಎದುರಿಸುತ್ತಿರುವ ಸತತ ಸಮಸ್ಯೆಯ ಒಂದು ಅಂದಾಜನ್ನು ಮುಂದಿಡುತ್ತದೆ.

ಕರ್ನಾಟಕಕ್ಕೆ ಬೇಕು 1 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್

ಕೆರೆಗಳ ಹೂಳೆತ್ತುವುದು, ಅರಣ್ಯೀಕರಣ, ಅಂತರ್ಜಲ ವೃದ್ಧಿಯೂ ಸೇರಿದಂತೆ ಸಮಗ್ರ ನೀರಾವರಿ ರೂಪಿಸಲು 50,000 ಕೋಟಿ ರೂ.ಗಳ ಪ್ಯಾಕೇಜ್ ಅಲ್ಲದೇ, ಕರ್ನಾಟಕದ ಗ್ರಾಮೀಣ ಭಾಗಕ್ಕೆ ಒಂದು ವಿಶೇಷ ಪ್ಯಾಕೇಜ್ ಅಗತ್ಯವಿದೆ. ಇದೇ ಗ್ರಾಮೀಣ ಭಾಗದ ಜಲಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವನ್ನು ಹಿಂಡಿಯೇ ಸರ್ಕಾರಗಳಿಗೆ ಕೋಟಿಗಟ್ಟಲೆ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಬೆಳೆದಿದೆ. ಕರ್ನಾಟಕವು ತಾನು ನೀಡುತ್ತಿರುವ ತೆರಿಗೆಯ ಪಾಲಿನಲ್ಲಿ ಶೇ.50ರಷ್ಟನ್ನೂ ಕೇಂದ್ರದಿಂದ ಪಡೆದುಕೊಳ್ಳುತ್ತಿಲ್ಲ. ಇವೆಲ್ಲದರ ಹಿನ್ನೆಲೆಯಲ್ಲಿ 1 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬೇಕಿದೆ. ಇವೆಲ್ಲವೂ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಗುಳುಂ ಮಾಡುವುದಕ್ಕಲ್ಲ. ನಷ್ಟಕ್ಕೊಳಗಾದವರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡುವುದಲ್ಲದೇ ಮುಂದಿನ ನೈಸರ್ಗಿಕ ಪ್ರಕೋಪಗಳನ್ನೂ ತಡೆದುಕೊಳ್ಳುವ ರೀತಿಯಲ್ಲಿ ಇಲ್ಲಿನ ನಿಸರ್ಗ, ಅಂರ್ತಜಲ ಹಾಗೂ ಗ್ರಾಮೀಣ ಬದುಕಿನ ಪುನರ್ ನಿರ್ಮಾಣಕ್ಕೆ.

ಇದಕ್ಕೆ ಬೇಕಾದ ಸಂಪನ್ಮೂಲವನ್ನು ಕರ್ನಾಟಕ ಸರ್ಕಾರವು ತಾನೇ ರೂಢಿಸಿಕೊಳ್ಳುವ ಶಕ್ತಿ ಹೊಂದಿಲ್ಲ. ಜಿಎಸ್‍ಟಿಯ ನಂತರ ಕೇಂದ್ರವು ತೆರಿಗೆ ನೀತಿಯ ಮೇಲೆ ಮತ್ತಷ್ಟು ಹಿಡಿತ ಹೊಂದಿದೆ. ರಾಜ್ಯ ಸರ್ಕಾರದ ಬಳಿ ಹಣವಿಲ್ಲದೇ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಹಣ ತೆಗೆಯಲು ಹೊರಟರು. ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ ಪ್ರವಾಹ ಪರಿಹಾರ/ಕಾಮಗಾರಿ ಮಾಡಬೇಕಾಗುತ್ತದೆಂದು ಸ್ವತಃ ಸಿಎಂ ಹೇಳಿದರು. ಹೀಗಾಗಿ ರಾಜಕೀಯ ಒಲವು-ನಿಲುವುಗಳಾಚೆ ಒಕ್ಕೊರಲಿನಿಂದ ಕೇಂದ್ರವನ್ನು ಒತ್ತಾಯಿಸುವುದೊಂದೇ ಪರಿಹಾರ. ಅಕ್ಟೋಬರ್ 10 ಮತ್ತು 14ರಂದು ಬೃಹತ್ ಸಮಾವೇಶಗಳನ್ನು ಹಮ್ಮಿಕೊಂಡಿರುವ ರೈತ ಸಂಘಟನೆಗಳು ಮತ್ತು ನೀರಸ ಪ್ರತಿಭಟನೆಗಳನ್ನು ಮಾಡಿ ಮುಗಿಸಿರುವ ವಿರೋಧ ಪಕ್ಷಗಳು, ಟ್ವಿಟ್ಟರ್ ನಲ್ಲಿಯೇ ವಿರೋಧದ ಶಾಸ್ತ್ರ ಮುಗಿಸಿರುವ ನಾಯಕರುಗಳು ಇದನ್ನು ಗಮನಿಸಬೇಕು.

ಕರ್ನಾಟಕದ ಪೇಲವ ಪ್ರತಿರೋಧ

ಕರ್ನಾಟಕದ ಅಧಿಕೃತ ವಿರೋಧ ಪಕ್ಷಗಳು ಅರೆಬರೆ ವಿರೋಧವನ್ನು ಮಾಡಿ ಮುಗಿಸಿದವು. ನಂತರ ಅವುಗಳ ಸದ್ದೇ ಇಲ್ಲ. ಬಿಜೆಪಿಯ ಗುಂಪಿನಿಂದ ಮೂರ್ನಾಲ್ಕು ರೀತಿಯ ವಿರೋಧದ ದನಿಗಳು ಎದ್ದವು. ಅಕ್ಟೋಬರ್ 3ರಂದು ಉತ್ತರ ಕರ್ನಾಟಕ ಉಳಿಸಿ ಹೆಸರಿನಲ್ಲಿ ಬಿಜೆಪಿ ಪರ ಇದ್ದ ವ್ಯಕ್ತಿಗಳೂ ಪ್ರತಿಭಟನೆ ಮಾಡಿದರು. ಕೇಂದ್ರ ಸರ್ಕಾರಕ್ಕೆ ಪೇಜಾವರರೂ ಪತ್ರ ಬರೆದರು. ಮೋದಿ ಬ್ರಿಗೇಡ್ ಹೆಸರಿನಲ್ಲಿ ಸುಳ್ಳು ಪ್ರಚಾರದಲ್ಲಿ ನಿರತವಾಗಿರುವ ಸೂಲಿಬೆಲೆ ಹೇಳಿಕೆ ನೀಡಿದರು. ಸದಾಕಾಲ ಸರ್ವಶಕ್ತ ಸಂಪನ್ನ ಮೋದಿಯವರ ಪರವಾಗಿ ಕಾರ್ಯಕ್ರಮ ರೂಪಿಸುವ ಟಿವಿ ಆಂಕರ್ ಗಳೂ ಕೂಗಾಡಿದರು. ಬಿಜೆಪಿಯ ಮತ್ತೊಬ್ಬ ಕೂಗುಮಾರಿ ಬಸವನಗೌಡ ಪಾಟೀಲ್ ಯತ್ನಾಳ್ ದನಿಯೆತ್ತಿದ್ದು ತನಗೆ ಸಿಗಬೇಕಾದ ಸ್ಥಾನಮಾನಕ್ಕಿರಬಹುದಾದರೂ, ನೆರೆ ಪರಿಹಾರದ ಬಗ್ಗೆಯೂ ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕಕ್ಕೆ ನೆರೆ ಪರಿಹಾರ ಆಗ್ರಹಿಸಿ, ಒಂದಷ್ಟು ಯುವ ಜನರು ತಮ್ಮ ವಿರೋಧವನ್ನೂ ದಾಖಲಿಸಿದರು. ಆದರೆ, ನಿರಂತರ ಬರ-ನೆರೆಗಳಿಂದ ತತ್ತರಿಸಿರುವ ಕರ್ನಾಟಕ ಮಾಡಬೇಕಾದದ್ದು ಇಷ್ಟೇನೇ ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.