ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಕೆಜಿಎಫ್ 2 ಚಿತ್ತೀಕರಣಕ್ಕೆ ಹೈಕೋರ್ಟ್ ಅನುಮತಿ

ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರತಂಡಕ್ಕೆ ನಿರಾಳ ಭಾವ ನೀಡಿದೆ ಹೈಕೋರ್ಟ್ ಆದೇಶ.

ಕೆಜಿಎಫ್‌ 2 ಚಿತ್ರವನ್ನು ಕೋಲಾರದ ಕೆಜಿಎಫ್‌ ನಲ್ಲಿ ಚಿತ್ರೀಕರಿಸದಂತೆ ಅರ್ಜಿಯೊಂದು ದಾಖಲಾಗಿತ್ತು. ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯವು ಚಿತ್ರೀಕರಣಕ್ಕೆ ತಡೆ ನೀಡಿತ್ತು. ಇದು ಚಿತ್ರತಂಡಕ್ಕೆ ಭಾರಿ ಹಿನ್ನಡೆ ಆಗಿತ್ತು.

ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಿರ್ಮಾಪಕರಾದ ವಿಜಯ್ ಕಿರಗಂದೂರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಚಿತ್ರೀಕರಣದ ವೇಳೆ ಸ್ಥಳದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡಲ್ಲ, 25 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುತ್ತೇವೆ ಎಂದು ನ್ಯಾಯಪೀಠಕ್ಕೆ ನೀಡಿದ್ದ ವಾಗ್ದಾನ ಹೇಳಿಕೆ ದಾಖಲಿಸಿಕೊಂಡ ಬಳಿಕ ಚಿತ್ರೀಕರಣಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.  ಕೆಜಿಎಫ್ ನಗರದ ಸೈನೈಡ್ ದಿಬ್ಬದ ಪ್ರದೇಶದಲ್ಲಿ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಮಾಡಲಾಗಿದ್ದು ಚಿತ್ರದಲ್ಲಿ ಕೆಜಿಎಫ್ ಅನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಕೆಜಿಎಫ್‌ನ ಸಂರಕ್ಷಿತ ಸೈನೇಡ್ ದಿಬ್ಬದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಕೆಜಿಎಫ್‌ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಎನ್ ಶ್ರೀನಿವಾಸ್ ಎಂಬುವರು ನ್ಯಾಯಾಲಯ ಮೋರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ ಕೆಜಿಎಫ್ ಜೆಎಂಎಫ್‌ಸಿ ನ್ಯಾಯಾಲಯ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಚಿತ್ರೀಕರಣ ಕೆಜಿಎಫ್‌ನಲ್ಲಿ ಭರದಿಂದ ಸಾಗುತ್ತಿತ್ತು. ಇದಕ್ಕಾಗಿ ಕೆಜಿಎಫ್‌ನ ಸೈನೇಡ್ ಗುಡ್ಡಗಳಲ್ಲಿ ಭರ್ಜರಿ ಸೆಟ್ ಹಾಕಿ ಚಿತ್ರೀಕರಿಸಲಾಗುತ್ತಿತ್ತು.

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ಅಚ್ಯುತ ಕುಮಾರ್, ಅನಂತ್ ನಾಗ್, ನಾಸರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ, ಮಾಳವಿಕಾ ಅವಿನಾಶ್ ಹಾಗೂ ರಾಮಚಂದ್ರ ರಾಜು ಪಾತ್ರವರ್ಗದಲ್ಲಿದ್ದು ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.