ಮೋದಿ ವಿದೇಶ ಪ್ರವಾಸ ದಿನ : ಕಾಂಗ್ರೆಸ್ ಟೀಕೆಗೆ ಬಿಜೆಪಿ ಪ್ರಮುಖ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಡಿದ್ದ ಟೀಕೆಗೆ ಬಿಜೆಪಿ ಪ್ರಮುಖ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. ಕಾಂಗ್ರೆಸ್ ಮಾಡಿರುವ ಟೀಕೆಯನ್ನು ಖಂಡಿಸಿರುವ ಅಮಿತ್ ಶಾ, ಮೋದಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅತಿಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ವಿದೇಶ ಪ್ರವಾಸ ಹಾಗೂ ಮನ್ನಣೆ ಕಂಡು ಕಾಂಗ್ರೆಸ್ ಹೊಟ್ಟೆಕಿಚ್ಚು ಪಡುತ್ತಿದೆ. ಮೋದಿ ಹೋದ ದೇಶಗಳಲ್ಲಿನ ಜನತೆ ಅವರನ್ನು ಕಾಣಲು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಮೋದಿಯನ್ನು ಕಂಡು ಹರ್ಷಿತರಾಗಿ, ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ. ಮೋದಿಯವರಿಗೆ ವಿದೇಶದಲ್ಲಿ ಸಿಗುತ್ತಿರುವ ಖ್ಯಾತಿ ಕಂಡು ಕಾಂಗ್ರೆಸ್ ಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಟೀಕೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಮೇರಿಕದ ಹ್ಯೂಸ್ಟನ್ ನಲ್ಲಿ ನಡೆದ ’ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಭಾಷಣ ಕೇಳಲು ನೆರೆದಿದ್ದ ಜನಸಾಗರ ಮೋದಿಗೆ ಎಷ್ಟು ಅಭಿಮಾನಿಗಳಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್, ಸೆಪ್ಟಂಬರ್ 27ರಂದು ವಿಶ್ವ ಪ್ರವಾಸ ದಿನದ ಅಂಗವಾಗಿ ಮೋದಿ ವಿದೇಶ ಪ್ರವಾಸದ ಫೋಟೋ ಹಾಗೂ ವಿಮಾನ ನಿಲ್ದಾಣದಲ್ಲಿ ಇಳಿಯುವ ಮತ್ತು ಕೈ ಬೀಸುವ ಫೋಟೋಗಳ ಕೊಲಾಜ್ ಮಾಡಿ, ಹ್ಯಾಪಿ ಟೂರಿಸಂ ಡೇ ಎಂದು ಕ್ಯಾಪ್ಶನ್ ಬರೆದು ಟ್ರೋಲ್‌ ಮಾಡಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಅಮಿತ್‌ ಶಾ ಮೇಲಿನ ಹೇಳಿಕೆ ನೀಡಿದ್ದಾರೆ.

ಇನ್ನು ಮೋದಿ ಮೇ 2014ರಿಂದ ಇಲ್ಲಿಯವರೆಗೆ 56 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಹಾಗೇ ನೋಡಿದರೆ ಮನಮೋಹನ್ ಸಿಂಗ್, ಮೋದಿ ಅವರಿಗಿಂತ ಹೆಚ್ಚು ವರ್ಷಗಳವರೆಗೆ (10 ವರ್ಷ) ಆಡಳಿತದಲ್ಲಿದ್ದರು. ಆದರೆ ಮೋದಿ ಅವರು ಕಡಿಮೆ ಅವಧಿಯಲ್ಲಿ (5.5 ವರ್ಷ) ಹೆಚ್ಚು ಪ್ರವಾಸ ಮಾಡಿರುವುದು ಮೇಲ್ನೋಟಕ್ಕೆ ಕಾಣುವ ವಿಷಯವಾಗಿದೆ.

ವಿದೇಶಿ ಪ್ರವಾಸದ ಖರ್ಚಿನಲ್ಲಿಯೂ ಸಹ ಮೋದಿಯವರು ಮನಮೋಹನ್‌ ಸಿಂಗ್‌ರವರಿಗಿಂತ ಹೆಚ್ಚು ಖರ್ಚು ಮಾಡಿದ್ದರೆಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಹಾಗಾಗಿ ಅಮಿತ್‌ ಶಾ ರವರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.