ಮತ್ತೊಬ್ಬ ಕಾಂಗ್ರೆಸ್ ಮಾಜಿ ಸಚಿವರ ವಿರುದ್ಧ ಇಡಿಗೆ ದೂರು : ಬೇನಾಮಿ ಆಸ್ತಿ ಆರೋಪ

ಮತ್ತೊಬ್ಬ ಕಾಂಗ್ರೆಸ್ ಮಾಜಿ ಸಚಿವರ ವಿರುದ್ಧ ಇಡಿಗೆ ದೂರು. ‘ಕೈ’ನಾಯಕರು ಹಾಗೂ ಅವರ ಮಕ್ಕಳ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿರುವ ಆರೋಪದಡಿ ಇಡಿಗೆ ದೂರು ನೀಡಲಾಗಿದೆ.

ಹೌದು… ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ದೂರು ನೀಡಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಅಕ್ರಮವಾಗಿ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ, ಆಸ್ತಿ ವಿವರ ಘೋಷಣಾ ಪತ್ರದಲ್ಲಿ ಈ ಕುರಿತು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರವಿ ಕೃಷ್ಣಾರೆಡ್ಡಿ, ಪ್ರಮುಖ ರಾಜಕೀಯ ನಾಯಕರು ತಮ್ಮ ಶಕ್ತಿ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಈಗ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಮೇಲೆ ಸಹ ಈ ಬಗ್ಗೆ ನಾವು ಇಡಿಗೆ ದೂರು ನೀಡಿದ್ದೆವು. ಎರಡು ವರ್ಷದ ಹಿಂದೆಯೇ ದೂರು ನೀಡಿದ್ದೆವು ಆದರೆ, ನಿಧಾನವಾಗಿ ತನಿಖೆ ನಡೆಸಿ ಇಡಿ ಕ್ರಮ ಕೈಗೊಂಡಿದೆ. ಇಂದೂ ಸಹ ಅನೇಕ ಮಂತ್ರಿಗಳ ಮಕ್ಕಳ ಹೆಸರಲ್ಲಿ ನೂರಾರು ಕೋಟಿ ರೂ. ಆಸ್ತಿ ಇದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ಮಕ್ಕಳ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ ಎಂದು ತಿಳಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.