ಮತ್ತೆ ಅನರ್ಹ ಶಾಸಕರಿಗೆ ನಿರಾಸೆ : ಸುಪ್ರೀಂ ಕೋರ್ಟ್ ತೀರ್ಪು ವಿಳಂಬಕ್ಕೆ ಟೆನ್ಶನ್.. ಟೆನ್ಶನ್..

ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವುದು ವಿಳಂಬವಾಗುತ್ತಲೇ ಇದೆ. ಇಂದು ತೀರ್ಪು ಬಂದೇ ಬರುತ್ತೆ ಎಂದು ನಂಬಿಕೊಂಡಿದ್ದ ಅನರ್ಹ ಶಾಸಕರಿಗೆ ನಿರಾಸೆಯಾಗಿದೆ. ಇವತ್ತು ತೀರ್ಪು ಬರುತ್ತಿಲ್ಲ. ನಾಳೆ ತೀರ್ಪು ಪ್ರಕಟವಾಗುತ್ತದೋ ಇಲ್ಲವೋ ಖಾತ್ರಿ ಇಲ್ಲ. ನಾಳೆ ತೀರ್ಪು ಪ್ರಕಟವಾಗುವುದಿದ್ದರೆ ಇವತ್ತು ಸಂಜೆಯೊಳಗೆ ಲಿಸ್ಟ್ ಸಿದ್ಧವಾಗುತ್ತದೆ. ಸಂಜೆಯ ಬೆಳವಣಿಗೆ ನೋಡಿಕೊಂಡು ಅನರ್ಹ ಶಾಸಕರು ನಾಳೆ ಮುಂದಿನ ಹೆಜ್ಜೆ ಇಡಲಿದ್ದಾರೆ.

ಡಿಸೆಂಬರ್ 5ರಂದು ಉಪಚುನಾವಣೆ ನಿಗದಿಯಾಗಿದೆ. ನ. 11ರಿಂದ ನೀತಿ ಸಂಹಿತೆ ಜಾರಿ ಬರುತ್ತದೆ. ಉಪಚುನಾವಣೆ ಸಮೀಪಿಸುತ್ತಿದೆ. ನೀತಿ ಸಂಹಿತೆಗೆ ನಾಲ್ಕೇ ದಿನ ಬಾಕಿ ಉಳಿದಿದೆ. ಒಂದು ವೇಳೆ ನ. 11ರೊಳಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗದಿದ್ದರೆ ಅನರ್ಹ ಶಾಸಕರಿಗೆ ತ್ರಿಶಂಕು ಸ್ವರ್ಗವೇ ಗತಿ. ಇದು ಈ ಶಾಸಕರಿಗೆ ಚಿಂತೆಯ ವಿಷಯವಾಗಿದೆ.

ಒಂದು ವೇಳೆ ನಾಳೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇಲ್ಲದೇ ಇದ್ದರೆ ಉಪಚುನಾವಣೆಯನ್ನೇ ಮುಂದೂಡುವಂತೆ ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಅನರ್ಹತೆಯ ಪ್ರಕರಣದಲ್ಲಿ ತೀರ್ಪು ಪ್ರಕಟವಾಗುವವರೆಗೂ ಉಪಚುನಾವಣೆಯನ್ನು ಮುಂದೂಡಿ ಎಂದು ಮನವಿ ಮಾಡಲಿದ್ದಾರೆ. ಆ ಅರ್ಜಿ ನಾಳೆಯೇ ಹಾಕಬೇಕು. ಒಂದು ವೇಳೆ, ನಾಳೆ ಅರ್ಜಿ ಹಾಕದಿದ್ದರೆ ಶನಿವಾರ ಮತ್ತು ಭಾನುವಾರ ಕೋರ್ಟ್ ರಜೆ ಇರುತ್ತದೆ. ಸೋಮವಾರ ನೀತಿ ಸಂಹಿತೆ ಅಸ್ತಿತ್ವಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಉಪಚುನಾವಣೆ ಮುಂದೂಡುವಂತೆ ಸುಪ್ರೀಂ ಕೋರ್ಟ್​​ನಲ್ಲಿ ನಾಳೆಯೇ ಆರ್ಜಿ ಹಾಕಿ, ಅದು ತುರ್ತಾಗಿ ವಿಚಾರಣೆಯಾಗಿ ನಾಳೆಯೇ ತೀರ್ಪು ಬರಬೇಕು. ಇಲ್ಲದಿದ್ದರೆ ಸಂಕಷ್ಟವೇ. ಇವತ್ತು ಸಂಜೆಯೊಳಗೆ ಅನರ್ಹ ಶಾಸಕರ ಮುಂದಿನ ಹೆಜ್ಜೆ ಏನು ಎಂಬುದು ಸ್ಪಷ್ಟವಾಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.