ಭಾರಿ ಮಳೆ : ಮಂಗಳೂರು, ಧಾರವಾಡ ಶಾಲಾ ಕಾಲೇಜುಗಳಿಗೆ ರಜೆ

ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) (ಆ.೦೬)ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ :-

ಭಾರೀ ಮಳೆಯಾಗುತ್ತಿರುವ ಕಾರಣ ಮಂಗಳವಾರ ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ನೀಡಿ ಸಹಾಯಕ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.
ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಒಂದು ದಿನದ ರಜೆ ನೀಡಲಾಗಿದೆ. ಪದವಿ ಮತ್ತು ನಂತರದ ತರಗತಿಗಳು ಎಂದಿನಂತೆ ನಡೆಯಲಿವೆ ಎಂದು ಪುತ್ತೂರು ಸಹಾಯಕ ಆಯುಕ್ತರಾದ ಎಚ್. ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.‌

ಧಾರವಾಡ ಜಿಲ್ಲೆ  ಇಂದು ಮತ್ತು ನಾಳೆ ಶಾಲೆ ಕಾಲೇಜುಗಳಿಗೆ ರಜೆ : –

ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯೊಂದಿಗೆ ಇಂದು ಆಗಸ್ಟ್ 06 ಹಾಗೂ ನಾಳೆ ಆಗಸ್ಟ್ 07 ರಂದು ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಈ ಎರಡು ರಜಾ ದಿನಗಳನ್ನು ಮುಂಬರುವ ರವಿವಾರ ದಿನಗಳಂದು ಕರ್ತವ್ಯ ನಿರ್ವಹಿಸಿ ಅವಧಿಗಳನ್ನು ಸರಿದೂಗಿಸಿಕೊಳ್ಳಲು ಅವರು ಸೂಚಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.