ಭರ್ಜರಿಯಾಗಿ ತೆರೆ ಕಂಡ ಮಕ್ಕಳ ‘ಗಿರ್ಮಿಟ್’​ ಚಿತ್ರಕ್ಕೆ ಗುಡ್ ರೆಸ್ಪಾನ್ಸ್…

ಪ್ರಯೋಗಾತ್ಮಕ ಚಿತ್ರಗಳಲ್ಲಿ ಅಷ್ಟಾಗಿ ಮನರಂಜನೆಯನ್ನು ಅಪೇಕ್ಷಿಸಲಾಗುವುದಿಲ್ಲ. ಆದರೆ ಮಕ್ಕಳನ್ನಿಟ್ಟುಕೊಂಡು ತೆಗೆದ ಕಮರ್ಷಿಯಲ್​ ಚಿತ್ರವೊಂದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.  ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ತಂಡದ ಪ್ರಯತ್ನದ ಫಲವಾದ ಗಿರ್ಮಿಟ್​ ಚಿತ್ರ ಒಂದು ಅಪ್ಪಟ ಮನರಂಜನೆಯ ಚತ್ರವಾಗಿದೆ. ಇದರಲ್ಲಿ ಮಕ್ಕಳು ದೊಡ್ಡವರ ಪಾತ್ರಗಳ ಮೂಲಕ ಕಮಾಲ್​ ಮಾಡಿದ್ದಾರೆ. ಕಮರ್ಷಿಯಲ್​ ಸೂತ್ರದಡಿ ತಯಾರಾದ ಈ ಚಿತ್ರದಲ್ಲಿ ಮಕ್ಕಳೇ ಎಲ್ಲ ಪಾತ್ರಗಳಾಗಿದ್ದಾರೆ.

ಒಬ್ಬ ಸ್ಟಾರ್​ ನಟನ ಅಭಿಮಾನಿಗಳು ಬಯಸುವ ಎಲ್ಲ ರೀತಿಯ ಮನರಂಜನೆಯ ಅಂಶಗಳು ಇದರಲ್ಲಿವೆ. ಮಕ್ಕಳೇ ಇಲ್ಲಿ ನಾಯಕ, ನಾಯಕಿ, ಅಪ್ಪ, ಅಮ್ಮ, ಸ್ನೇಹಿತ ಹಾಗೂ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡವರಂತೆ ಮೀಸೆ, ಸೀರೆಯನ್ನುಟ್ಟುಕೊಂಡ ಮಕ್ಕಳ ಪಾತ್ರಗಳು ಯಾವುದೂ ಅಸಹಜ ಎನ್ನಿಸುವಂತೆ ಮೂಡಿಬಂದಿಲ್ಲ. ಎಲ್ಲರೂ ನೈಜವಾಗಿ ನಟಿಸಿದ್ದಾರೆ.

ಚಿತ್ರವು ಒಂದು ಸಾಮಾನ್ಯ ಕಥೆಯನ್ನು ಹೊಂದಿದೆ. ನಾಯಕ ರಾಜನಿಗೆ (ಆಶ್ಲೇಷ್​ ರಾಜ್​) ಮದುವೆಗೆ ಹುಡುಗಿ ಹುಡುಕುತ್ತಿರುತ್ತಾರೆ. ಇನ್ನೊಂದು ಕಡೆ ನಾಯಕಿ ರಶ್ಮಿ (ಶ್ಲಾಘಾ ಸಾಲಿಗ್ರಾಮಾ) ಅವರ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಬೇಕೆಂಬ ಹುಡುಕಾಟ ನಡೆಯುತ್ತಿರುತ್ತದೆ. ತನ್ನನ್ನು ಇಷ್ಟಪಡುವ ನಾಯಕನಿಗೆ ನಾಯಕಿ ತನ್ನ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿಸಬೇಕು ಎಂದು ಷರತ್ತು ವಿಧಿಸುತ್ತಾಳೆ. ನಂತರದಲ್ಲಿ ನಾಯಕ ನಡೆಸುವ ಪ್ರಯತ್ನಗಳು, ನಾಯಕಿಯ ಅಕ್ಕಂದಿರ ಮದುವೆ ಮಾಡಿಸಿ ತನ್ನ ಮದುವೆ ಹೇಗೆ ಮಾಡಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕಥೆ.

ಚಿತ್ರ ಒಂದು ಸಂಪೂರ್ಣ ಮಾಸ್​ ಎಂಟರ್​ ಟೇನ್ಮೆಂಟ್​ ಸಿನಿಮಾವಾಗಿದೆ. ಚಿತ್ರದಲ್ಲಿ ಎಲ್ಲ ರೀತಿಯ ಅಂಶಗಳೂ ಇವೆ. ಕುಂದಾಪುರ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಪಕೃತಿ ಸೌಂದರ್ಯವನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಮಕ್ಕಳ ಸಂಭಾಷಣೆ. ಚಿತ್ರದಲ್ಲಿ ಬಳಕೆಯಾಗಿರುವ ಕುಂದಾಪುರ ಕನ್ನಡ, ಉತ್ತರ ಕರ್ನಾಟಕದ ಭಾಷೆ ಹಿತ ನೀಡುತ್ತದೆ. ಭಾಷೆಯಲ್ಲಿ ಬಳಕೆಯಾಗಿರುವ ಹಾಸ್ಯ ಮಾತುಗಳು ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಪ್ರಾದೇಶಿಕ ಭಾಷೆಯು ಪರಿಣಾಮಕಾರಿಯಾಗಿ ಬಳಕೆಯಾಗಿದೆ. (ಸಂಭಾಷಣೆ ಪ್ರಮೋದ್​ ಮರವಂತೆ) ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಸೇರಿದಂತೆ ಹಿರಿಯ ಕಲಾವಿದರು ಮಕ್ಕಳಿಗೆ ಡಬ್​ ಮಾಡಿರುವುದು ವಿಶೇಷವಾಗಿದೆ. ದೊಡ್ಡವರ ದನಿಗೆ ತಕ್ಕಂತೆ ಮಕ್ಕಳು ನಟಿಸಿದ್ದಾರೆ. ಯಾವ ಮಾತುಗಳೂ ಅತಿರೇಕ ಎನಿಸುವುದಿಲ್ಲ.

ರವಿ ಬಸ್ರೂರು ನೀಡಿರುವ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳೂ ಕೇಳಲು ಇಂಪಾಗಿವೆ. ನಟ ಪುನೀತ್​ ರಾಜ್​ ಕುಮಾರ್​ ಚಿತ್ರಕ್ಕೆ ಒಂದು ಗೀತೆಯನ್ನೂ ಹಾಡಿದ್ದು ಕೇಳುವಂತಿದೆ. ಮಕ್ಕಳ ಮೂಲಕ ಸೃಷ್ಟಿಯಾಗಿರುವ ಪಾತ್ರಗಳು ಎಲ್ಲೂ ಬಾಲಿಶ ಎನಿಸದ ರೀತಿಯಲ್ಲಿ ಬಸ್ರೂರು ಚಿತ್ರ ತಯಾರಿಸಿದ್ದಾರೆ.

ಚಿತ್ರದಲ್ಲಿ ಭಾವನೆಗಳ ಏರಿಳಿತವೂ ಇದೆ. ನಾಯಕಿಯ ತಂದೆ ಹೆಣ್ಣು ಮಕ್ಕಳ ಮದುವೆ ಮಾಡುವ ಕಷ್ಟದ ಬಗ್ಗೆ ಮಾತನಾಡುವ ರೀತಿ ಒಂದು ಕ್ಷಣ ಕಣ್ಣಂಚಲ್ಲಿ ನೀರು ತರಿಸುತ್ತದೆ. ಪೋಷಕರ ಪಾತ್ರಗಳಲ್ಲಿ ಮಕ್ಕಳೂ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಸುಮಾರು 280 ಮಕ್ಕಳನ್ನು ಹಾಕಿಕೊಂಡು ಚಿತ್ರ ತಯಾರಿಸಿರುವ ಬಸ್ರೂರು ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಕನ್ನಡಕ್ಕೆ ಇಂತಹ ಚಿತ್ರಗಳು ಹೆಚ್ಚು ಬರಬೇಕು.

ಎನ್​ ಎಸ್​ ರಾಜ್​ ಕುಮಾರ್​ ಹಾಕಿರುವ ಬಂಡವಾಳಕ್ಕೆ ಮೋಸವಿಲ್ಲ. ದುಡ್ಡು ಕೊಟ್ಟು ಬರುವ ಪ್ರೇಕ್ಷಕನಿಗೂ ಅಪ್ಪಟ ಮನರಂಜನೆಯ ರಸದೂಟವನ್ನೇ ಉಣಿಸಿ ಗಿರ್​ ಮಿಟ್​ ಉಣಿಸುತ್ತದೆ.  ಸ್ಟಾರ್​ ನಟರು ಸಿದ್ಧ ಸೂತ್ರಗಳಿಗೇ ಅಂಟಿಕೊಂಡಿರುವ ಈ ಹೊತ್ತಿನಲ್ಲಿ ಬಸ್ರೂರು ಮತ್ತು ತಂಡದ ಈ ಪ್ರಯೋಗಾತ್ಮಕ ಮಕ್ಕಳ ಕಮರ್ಷಿಯಲ್​ ಚಿತ್ರ ಯಶಸ್ವಿಯಾಗಿದೆ. ಚಿತ್ರ ಮತ್ತೊಮ್ಮೆ ನೋಡಬೇಕು ಎನಿಸುವಂತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.