ಬಾಲ್ಯದ ಫೋಟೋಕ್ಕೆ ಅಸಭ್ಯ ಪದಗಳ ಬಳಕೆ – ಕಿರಿಕ್ ಹುಡುಗಿ ಗರಂ

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮ್ಮ ಬಾಲ್ಯದ ಫೋಟೋಗೆ ಅಸಭ್ಯ ಪದಗಳನ್ನು ಬಳಸಿದವರ ವಿರುದ್ಧ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ನೆಟ್ಟಿಗರು ರಶ್ಮಿಕಾ ಅವರ ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗಾಗಿ ರಶ್ಮಿಕಾ ಟ್ರೋಲ್ ಮಾಡಿದವರಿಗೆ ಖಡಕ್ಕಾಗಿಯೇ ಉತ್ತರಿಸಿದ್ದಾರೆ.ರಶ್ಮಿಕಾ ಅವರ ಬಾಲ್ಯದ ಫೋಟೋ ಮೇಲೆ ಟ್ರೋಲಾಯ ನಮಃ ಎಂಬ ಲೋಗೋ ಇದೆ. ಅಲ್ಲದೆ ಆ ಫೋಟೋವನ್ನು ಟ್ರೋಲ್ ಮಾಡಿ, ಅಸಭ್ಯ ಪದವನ್ನು ಬಳಕೆ ಮಾಡಿದ್ದಾರೆ. ಕಿಡಿಗೇಡಿಗಳ ಈ ರೀತಿಯ ವರ್ತನೆಯಿಂದ ರಶ್ಮಿಕಾ ಮಂದಣ್ಣ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಶ್ಮಿಕಾ, ಅನೇಕರು ಇಂತಹ ಕೆಟ್ಟ ಕಾಮೆಂಟ್‌ಗಳನ್ನು ನಿರ್ಲಕ್ಷಿಸಿ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಕೂಡ ಇಷ್ಟು ದಿನ ಅದನ್ನೇ ಮಾಡುತ್ತಾ ಬಂದಿದ್ದೇನೆ. ಆದರೆ ಕಲಾವಿದರಿಗೆ ಹೀಗೆ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ ಎಂದು ನನಗೆ ತಿಳಿಯುತ್ತಿಲ್ಲ. ನಮ್ಮನ್ನು ಸುಲಭವಾಗಿ ಟಾರ್ಗೆಟ್ ಮಾಡಬಹುದು ಎಂದು ಟ್ರೋಲ್ ಮಾಡುತ್ತೀರಾ. ಈ ರೀತಿ ಯಾವ ಕಲಾವಿದರಿಗೂ ಮಾಡಬಾರದು. ಒಬ್ಬ ಕಲಾವಿದೆಯಾಗುವುದು ಅಷ್ಟು ಸುಲಭ ಅಲ್ಲ ಎಂದು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ ನಮ್ಮ ಕೆಲಸದ ಬಗ್ಗೆ ಏನಾದರೂ ಹೇಳಬೇಕು ಎನ್ನಿಸಿದರೆ ಹೇಳಿ. ಏಕೆಂದರೆ ನಿಮಗೆ ಹೇಳಲು ಹಕ್ಕಿದೆ. ಆದರೆ ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಪ್ರತಿ ವೃತ್ತಿಗೂ ಒಂದು ಗೌರವ ಇದೆ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.