ಪ್ರೊಟೀನ್ಸ್ ತಿನ್ನಿ, ಆಯಸ್ಸನ್ನು ವೃದ್ಧಿಗೊಳಿಸಿ – ಹಸಿರು ಸೊಪ್ಪು, ತರಕಾರಿ, ನಟ್ಸ್‌ನಲ್ಲಿ ಮಹತ್ವಗಳು

ನಮಗೆ ದೊರೆಯುವ ಎಲ್ಲ ತರಕಾರಿಗಳಲ್ಲಿ ಹಸಿರುಸೊಪ್ಪು ತರಕಾರಿಗಳು ಆರೋಗ್ಯರೀತ್ಯಾ ವಿಶೇಷವಾದವುಗಳು. ಇವುಗಳಲ್ಲಿ ಅಚ್ಚರಿಪಡಿಸುವ ಮಹತ್ವಗಳಿದ್ದು, ಇವು ಅತೀ ಪ್ರಾಮುಖ್ಯವೂ, ಅತ್ಯಮೂಲ್ಯವೂ ಆಗಿವೆ.
ಪಿಷ್ಠ (ಕಾಬೋಹೈಡ್ರೇಟ್ಸ್) ಪ್ರೊಟೀನ್ಸ್, ಕೊಬ್ಬು(ಫ್ಯಾಟ್) ಇವುಗಳು ಆಹಾರದಲ್ಲಿ ನಮಗೆ ಸಿಗುವ ಶಕ್ತಿಯ ಮೂಲಗಳಾಗಿವೆ.

ಆಲೂಗಡ್ಡೆ, ಸಿಹಿಕುಂಬಳ ಇತ್ಯಾದಿ ಹೆಚ್ಚು ಸ್ಟಾರ್ಚ ಹೊಂದಿದ ತರಕಾರಿಗಳನ್ನು ಬಿಟ್ಟರೆ ಉಳಿದೆಲ್ಲಾ ತರಕಾರಿಗಳು ಪ್ರೊಟೀನ್ಸ್ ಅನ್ನು ತಮ್ಮ ಶಕ್ತಿಗಾಗಿ ಅವಲಂಬಿಸಿವೆ. ಅಂದರೆ ಹಸಿರುಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಸಸ್ಯಮೂಲ ಪ್ರೊಟೀನ್ಸ್ ಹೇರಳವಾಗಿ ಶರೀರಕ್ಕೆ ಅವಶ್ಯಕವಿರುವ ಹಾಗು ಆಯಸ್ಸನ್ನು ವೃದ್ಧಿಗೊಳಿಸುವ ಹಲವಾರು ವಿಧದ ಕಿಣ್ವಗಳು, ಜೀವಸತ್ವಗಳು, ನಾರಿನಾಂಶ ಇತ್ಯಾದಿಗಳು ದೊರೆಯುತ್ತವೆ.

ಪ್ರಾಣಿ ಪ್ರಪಂಚದಲ್ಲಿನ ಹಲವಾರು ಪ್ರಾಣಿಗಳು ಮುಖ್ಯವಾಗಿ ಅವಲಂಬಿಸಿರುವುದು ಈ ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಹಾಗೂ ಈ ಪ್ರಾಣಿಗಳು ತಮ್ಮ ಶರೀರದ ಎಲ್ಲಾ ಅವಶ್ಯಕತೆಗಳಿಗೆ ಸೊಪ್ಪಿನಲ್ಲಿ ಸಿಗುವ ಪೊ›ಟೀನ್​ಗಳನ್ನೇ ಅವಲಂಬಿಸಿವೆ. ಇದೇ ಕಾರಣದಿಂದಾಗಿಯೇ ಇಂತಹ ಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ಆರೋಗ್ಯಯುತವಾಗಿ ಇರುವುದಾಗಿದೆ.

ನಾವು ಮನುಷ್ಯರೂ ಸಹ ಈ ಪ್ರಾಣಿ ಪ್ರಭೇದಕ್ಕೆ ಸೇರಿದವರಾಗಿದ್ದೇವೆ ಹಾಗೂ ಶರೀರಕ್ಕೆ ಅಗತ್ಯವಿರುವಷ್ಟರ ಮಟ್ಟಿಗೆ ಸಸ್ಯಾವಲಂಬನೆಯನ್ನು ಮಾಡದೇ ಇರುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಕುಂಠಿತಗೊಂಡಿದೆ ಹಾಗೂ ಇದರಿಂದಾಗಿ ಬರುವ ಅಲರ್ಜಿ, ಇನ್​ಫೆಕ್ಷನ್, ಆಟೋಇಮ್ಯೂನ್ ಹಾಗೂ ಕ್ಯಾನ್ಸರ್​ನಂತಹ ಕಾಯಿಲೆಗಳಿಗೆ ಬಲಿಯಾಗುತ್ತಿದ್ದೇವೆ.

ಹಸಿರುಸೊಪ್ಪು, ತರಕಾರಿಗಳು ಧೀರ್ಘಾಯಸ್ಸಿಗೆ ಬೇಕಾಗಿರುವ ಅವಶ್ಯಕ ಪೋಷಕಾಂಶಗಳು ಹಾಗೂ ಕಡಿಮೆ ಶಕ್ತಿಯ ತುಲನೆಯನ್ನು ಹೊಂದಿರುವುದರಿಂದ ಇವುಗಳು ಆರೋಗ್ಯವನ್ನು ಒದಗಿಸುವ ಹಾಗೂ ಇಂತಹ ಆಹಾರ ಪದಾರ್ಥಗಳಲ್ಲಿ ಗುಪ್ತವಾಗಿ ಅಡಗಿರುವ ಅಂಶಗಳಾಗಿವೆ.

ಇದಷ್ಟೇ ಅಲ್ಲದೇ ಹಸಿ ತರಕಾರಿಗಳ ಆಹಾರವು ಜೀರ್ಣಾಂಗವ್ಯೂಹದಲ್ಲಿ ಫಾಸ್ಟ್ ಟ್ರಾನ್ಸಿಟ್ ಟೈಮ್ ಅನ್ನು ಹೊಂದಿರುತ್ತದೆ. (ಅಂದರೆ ಆಹಾರ ಪದಾರ್ಥಗಳು ಬೇಗನೆ ದೊಡ್ಡ ಕರುಳಿಗೆ ಬಂದು ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಹೀರಲ್ಪಡುತ್ತದೆ). ಇದರಿಂದಾಗಿ ಬೇಯಿಸಿದ ಆಹಾರಕ್ಕಿಂತಲೂ ಹಸಿ ಆಹಾರ ಸೇವನೆಯಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು.

ತರಕಾರಿ, ಹಣ್ಣುಗಳ ಸಲಾಡ್​ನ್ನು ಮಧ್ಯಾಹ್ನ ಊಟದ ಮೊದಲು ಹಾಗೂ ರಾತ್ರಿ ಊಟದ ಮೊದಲು ಸೇವಿಸುವುದನ್ನು ರೂಢಿಸಿಕೊಳ್ಳುವುದು ಒಳಿತು. ಇದರಿಂದಾಗಿ ನಿಮ್ಮ ಊಟದ ಸಂದರ್ಭದಲ್ಲಿ ಸೇವಿಸುವ ಆಹಾರದ ಪ್ರಮಾಣ ಬಹಳ ಕಡಿಮೆಯಾಗುತ್ತದೆ.

ಮೋನೋ ಆನ್​ಸ್ಯಾಚುರೇಟೆಡ್ ಕೊಬ್ಬಿನಾಂಶವಿರುವ ಅವಕಾಡೋ(ಬೆಣ್ಣೆ ಹಣ್ಣು) ಅಥವಾ ಬೀಜಗಳು, ಹಣ್ಣುಗಳನ್ನು ನಮ್ಮ ಸಲಾಡ್​ನ ಜೊತೆ ಸೇರಿಸಿಕೊಂಡಾಗ ತರಕಾರಿಗಳಲ್ಲಿರುವ ಕ್ಯಾನ್ಸರ್​ನ ವಿರುದ್ಧ ಹೋರಾಡುವ ಶಕ್ತಿಯನ್ನು ಶರೀರ ಹೀರಿಕೊಳ್ಳಲು ಸಹಕರಿಸುತ್ತದೆ.

ಸೌತೆಕಾಯಿ, ಟೊಮ್ಯಾಟೋ, ನವಿಲುಕೋಸು, ದಾಳಿಂಬೆ ಸೇರಿಸಿ ಸಲಾಡ್ ಮಾಡಿಕೊಳ್ಳಬಹುದು ಅಥವಾ ಬೀನ್ಸ್, ಕ್ಯಾಬೇಜ್, ಟೊಮ್ಯಾಟೋ ಅಥವಾ ಕ್ಯಾರೇಟ್, ಸೌತೆಕಾಯಿ, ಈರುಳ್ಳಿ, ನವಿಲುಕೋಸು ಅಥವಾ ಸೇಬು, ದ್ರಾಕ್ಷಿ, ಚಿಕ್ಕು, ನೆನೆಸಿದ ಶೇಂಗಾ, ಮೊಳಕೆ ಬಂದ ಹಸಿರುಕಾಳು, ಕ್ಯಾರೆಟ್, ಸೌತೆಕಾಯಿ, ನಿಂಬೆರಸ ಇತ್ಯಾದಿ ತರಕಾರಿ, ಹಣ್ಣು ಹಾಗು ದ್ವಿದಳಧಾನ್ಯಗಳು, ಬೀಜಗಳ ಸಲಾಡ್ ತಯಾರಿಸಿಕೊಳ್ಳಬಹುದು. ಇವುಗಳು ಪೌಷ್ಠಿಕಾಂಶ ಹಾಗೂ ರುಚಿಯಾಗಿರುತ್ತವೆ ಹಾಗೆಯೇ ಇದರಿಂದ ದೊರೆಯುವ ಶಕ್ತಿಯ ಪ್ರಮಾಣ ಅತಿ ಕಡಿಮೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.