ಪ್ರತಿಭಟನಾ ನಿರತ ಇಬ್ಬರು ವಕೀಲರು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಆತ್ಮಹತ್ಯೆಗೆ ಯತ್ನ..!

ಪ್ರತಿಭಟನಾ ನಿರತ ಇಬ್ಬರು ವಕೀಲರು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆ ಜರುಗಿದೆ. ಆ ಮೂಲಕ ಪೊಲೀಸರ ಪ್ರತಿಭಟನೆಗೆ ವಕೀಲರು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ.

ಟಿಸ್ ಹಜಾರಿ ನ್ಯಾಯಾಲಯದ ಹೊರಗೆ ದೆಹಲಿ ಪೊಲೀಸರು-ವಕೀಲರೊಂದಿಗೆ ಬುಧವಾರ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ದೆಹಲಿ ನ್ಯಾಯಾಲಯಗಳಲ್ಲಿನ ವಕೀಲರು ಕೆಲಸವನ್ನು ತ್ಯಜಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಪ್ರತಿಭಟನೆಯ ಭಾಗವಾಗಿ ಒಬ್ಬ ವಕೀಲನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅವನ ಸಹೋದ್ಯೋಗಿಗಳು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಬ್ಬ ವಕೀಲರು ರೋಹಿಣಿ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಕಟ್ಟಡವೊಂದನ್ನು ಹತ್ತಿ ಅದರಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನ್ಯಾಯಾಧೀಶರೊಡನೆ ಮಾತನಾಡಿದ ನಂತರ ವಕೀಲರು ಕಟ್ಟಡದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದುಬಂದಿದೆ.

“ನಮ್ಮ ಹೋರಾಟವು ನಮ್ಮ ಮೇಲೆ ಗುಂಡು ಹಾರಿಸಿದ ಮತ್ತು ನಮ್ಮನ್ನು ಲಾಠಿಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಮಾತ್ರ. ಅವರನ್ನು ಬಂಧಿಸುವವರೆಗೂ ನಾವು ಪ್ರತಿಭಟಿಸುತ್ತೇವೆ ” ಎಂದು ರೋಹಿಣಿ ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವಕೀಲರೊಬ್ಬರು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಮಂಗಳವಾರ ಸಾವಿರಾರು ಪೊಲೀಸ್ ಸಿಬ್ಬಂದಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ದೆಹಲಿ ಪೊಲೀಸ್ ಮುಖ್ಯಸ್ಥ ಅಮುಲ್ಯ ಪಟ್ನಾಯಕ್ ಸೇರಿದಂತೆ ಉನ್ನತ ಪೊಲೀಸರು ನೀಡಿದ ಭರವಸೆಯ ನಂತರ ಪೊಲೀಸರು ಮಂಗಳವಾರ ರಾತ್ರಿ ತಮ್ಮ 11 ಗಂಟೆಗಳ ಪ್ರತಿಭಟನೆಯನ್ನು ಕೊನೆಗೊಳಿಸಿದರು.

ಶನಿವಾರದ ಹಿಂಸಾಚಾರದಲ್ಲಿ ಸುಮಾರು 20 ಪೊಲೀಸರು ಮತ್ತು ಅನೇಕ ವಕೀಲರು ಗಾಯಗೊಂಡಿದ್ದಾರೆ. ಮರುದಿನ, ದೆಹಲಿ ಹೈಕೋರ್ಟ್ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮತ್ತು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.