ಪ್ರಕೃತಿ ವಿಕೋಪ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡ ಕೊಡಗು ಜಿಲ್ಲಾಡಳಿತ…

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆದ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಜಿಲ್ಲಾಡಳಿತವು ಪ್ರಕೃವಿ ವಿಕೋಪವನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಪರಿಹಾರ ಕೇಂದ್ರಗಳ ನಿರ್ವಹಣೆಗೆ ಬೇಕಾಗುವ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳನ್ನೂ ಸಹ ಖರೀದಿಸಿ ದಾಸ್ತಾನಿಟ್ಟುಕೊಳ್ಳಲಾಗಿತ್ತು.

ಅಲ್ಲದೆ, ನೆರೆ ಜಿಲ್ಲೆಗಳಾದ ಉಡುಪಿ ಮತ್ತು ಮೈಸೂರು ಜಿಲ್ಲೆಗಳಿಂದಲೂ ಸಹ ದಿನಬಳಕೆಯ ವಸ್ತುಗಳನ್ನು ಖರೀದಿಸಿ ಈ ಜಿಲ್ಲೆಗೆ ಕಳುಹಿಸಿದ್ದು, ಪ್ರಸ್ತುತ ಪರಿಹಾರ ಕೇಂದ್ರ ನಡೆಸಲು ಬೇಕಾಗುವಷ್ಟು ದಿನಬಳಕೆಯ ಸಾಮಾಗ್ರಿಗಳು ಜಿಲ್ಲಾಡಳಿತದ ಬಳಿ ದಾಸ್ತಾನಿರುತ್ತದೆ.

ಈ ವರ್ಷ ಕೊಡಗು ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜನರು ಸಂಕಷ್ಟದಲ್ಲಿರುವುದರಿಂದ ಹಾಗೂ ಈಗಾಗಲೇ ಜಿಲ್ಲಾಡಳಿತದ ಬಳಿ ಜಿಲ್ಲೆಯ ಪರಿಹಾರ ಕೇಂದ್ರಗಳನ್ನು ಸುಗಮವಾಗಿ ನಡೆಸುವಷ್ಟು ದಿನಬಳಕೆಯ ಸಾಮಾಗ್ರಿಗಳು ದಾಸ್ತಾನಿರುವುದರಿಂದ ಜಿಲ್ಲಾಡಳಿತವು ಜಿಲ್ಲೆಯಲ್ಲಿ ತೆರೆಯಲಾದ ಸಂಗ್ರಹಣಾ ಕೇಂದ್ರಗಳನ್ನು ಮುಚ್ಚಿರುತ್ತದೆ.

ಆದಾಗ್ಯೂ ಜಿಲ್ಲೆಯ ದಾನಿಗಳು, ಸಂಘ ಸಂಸ್ಥೆಗಳು ಜಿಲ್ಲೆಯ ಸಂತ್ರಸ್ಥರಿಗೆ ನೆರವು ನೀಡಲು ಬಯಸಿದಲ್ಲಿ, ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರುಗಳನ್ನು ಸಂಪರ್ಕಿಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲು ಕೋರಿದೆ. ದಾನಿಗಳು ಅಥವಾ ಸಂಘ ಸಂಸ್ಥೆಗಳು ಸಾಮಾಗ್ರಿಗಳನ್ನು ನೇರವಾಗಿ ಸಂತ್ರಸ್ಥರಿಗೆ ವಿತರಿಸುವಾಗ ಕೆಲವು ಪರಿಹಾರ ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ನೇರವಾಗಿ ಸಂತ್ರಸ್ಥರಿಗೆ ವಿತರಿಸಲು ಅವಕಾಶ ಇರುವುದಿಲ್ಲ. ಆದರೆ ದಾನಿಗಳು ನೀಡಿದ ವಸ್ತುಗಳನ್ನು ಅವರ ಸಮ್ಮುಖದಲ್ಲಿಯೇ ಸಂತ್ರಸ್ಥರಿಗೆ ವಿತರಿಸಲು ವ್ಯವಸ್ಥೆ ಮಾಡಲಾಗುವುದು. ದಯವಿಟ್ಟು ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕೋರಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.