ಪೆಹ್ಲು ಖಾನ್ ತೀರ್ಪು ಕುರಿತು ಪ್ರಿಯಾಂಕ ಗಾಂಧಿ ಟ್ವೀಟ್: ದಾಖಲಾಯ್ರು ಕ್ರಿಮಿನಲ್ ಕೇಸು …

ಪೆಹ್ಲು ಖಾನ್ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ವಿರುದ್ಧ ಮುಜಫರ್ ಪುರ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗಳು ನ್ಯಾಯಾಂಗ ನಿಂದನೆ ಮತ್ತು ಕೋಮು ದ್ವೇಷವನ್ನು ಹರಡಲು ಪ್ರಯತ್ನಿಸಿವೆ ಎಂದು ಆರೋಪಿಸಿ ಕೇಸು ದಾಖಲಾಗಿದ್ದು ಆಗಸ್ಟ್ 26 ರಂದು ವಿಚಾರಣೆ ನಡೆಯಲಿದೆ.

ಪೆಹ್ಲು ಖಾನ್ ಗೆ ಗುಂಪು ಥಳಿತ ಮತ್ತು ಸಾವಿನ ಪ್ರಕರಣದಲ್ಲಿ ರಾಜಸ್ಥಾನ ನ್ಯಾಯಾಲಯದ ತೀರ್ಪಿನ ಕುರಿತು ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಶುಕ್ರವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗಳು ನ್ಯಾಯಾಂಗ ನಿಂದನೆ ಮತ್ತು ಕೋಮು ದ್ವೇಷವನ್ನು ಹರಡಲು ಪ್ರಯತ್ನಿಸಿದೆ ಎನ್ನಲಾಗಿದೆ.

ಪೆಹ್ಲೂ ಖಾನ್ ಸಾವಿನ ಪ್ರಕರಣದ ಆರು ಆರೋಪಿಗಳನ್ನು ರಾಜಸ್ಥಾನ ಕೋರ್ಟ್ ಖುಲಾಸೆಗೊಳಿಸಿದ್ದರಿಂದ ಪ್ರಿಯಾಂಕ ಗಾಂಧಿ ಆ ತೀರ್ಪನ್ನು ಆಘಾತಕಾರಿ ಎಂದು ಕರೆದಿದ್ದರು. ಗುಂಪು ಹತ್ಯೆ ವಿರುದ್ಧ ಕಾನೂನು ಜಾರಿಗೆ ತಂದಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನು ಶ್ಲಾಘಿಸಿದ್ದರು. “ಪೆಹ್ಲು ಖಾನ್ ಪ್ರಕರಣದಲ್ಲಿ ನ್ಯಾಯ ಒದಗಿಸಲು ಇದರಿಂದ ಸಾಧ್ಯವಾಗುತ್ತದೆ ನಾನು ಭಾವಿಸುತ್ತೇನೆ. ನಮ್ಮ ದೇಶದಲ್ಲಿ ಅಮಾನವೀಯತೆಗೆ ಯಾವುದೇ ಸ್ಥಾನವಿರಬಾರದು ಮತ್ತು ಗುಂಪು ಥಳಿಸಿ ಕೊಲೆ ಮಾಡುವುದು ಘೋರ ಅಪರಾಧವಾಗಿದೆ.” ಎಂದು ಅವರು ಟ್ವೀಟ್ ಮಾಡಿದ್ದರು.

ಪ್ರಿಯಾಂಕಾ ಗಾಂಧಿ ವಿರುದ್ಧ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಅವರ ನ್ಯಾಯಾಲಯದಲ್ಲಿ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಅವರು 153, 504, 506 [ಕ್ರಿಮಿನಲ್ ಬೆದರಿಕೆ] ಅಡಿಯಲ್ಲಿ ದಾಖಲಿಸಿದ್ದಾರೆ.

ಪೆಹ್ಲು ಖಾನ್ ಆಸ್ಪತ್ರೆಯಲ್ಲಿದ್ದಾಗ

ರಾಜಸ್ಥಾನ ನ್ಯಾಯಾಲಯವು ಪೆಹ್ಲೂ ಖಾನ್ ಹತ್ಯೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬುಧವಾರ ಖುಲಾಸೆಗೊಳಿಸಿತ್ತು. ಅಪರಾಧದ ಸಮಯದಲ್ಲಿ ಅಪ್ರಾಪ್ತ ವಯಸ್ಕರಾಗಿದ್ದ ಇತರ ಮೂವರು ಆರೋಪಿಗಳನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.

ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರ ಹೇಳಿದೆ. ಅಲ್ಲದೇ ಗುಂಪು ಹತ್ಯೆ ವಿರುದ್ಧದ ಕಾನೂನನ್ನು ಸಹ ಅದು ಈಗಾಗಲೇ ಜಾರಿಗೊಳಿಸಿದೆ.

2017ರ ಏಪ್ರಿಲ್ 1 ರಂದು ಜೈಪುರ-ದೆಹಲಿ ಹೆದ್ದಾರಿಯಲ್ಲಿ ಗೋವು ಸಾಗಿಸುತ್ತಿದ್ದರು ಎಂಬು ಆರೋಪದಿಂದ ಸ್ವಘೋಷಿತ ಗೋರಕ್ಷಕರಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಪೆಹ್ಲು ಖಾನ್ ನಿಧನವಾಗಿದ್ದರು. ಮೂಲತಃ ಪಶು ಸಂಗೋಪನೆ ಮಾಡುತ್ತಿದ್ದ ಪೆಹ್ಲು ಖಾನ್ ಮತ್ತು ಅವರ ಮಗ ಇರ್ಶಾದ್ ಖಾನ್ ಜೈಪುರದ ದನಗಳ ಸಂತೆಯಿಂದ ಸಾಕಾಣಿಕೆಗೆಂದು ದಾಖಲೆಗಳ ಸಮೇತ 2017ರ ಏಪ್ರಿಲ್ 1 ರಂದು ಎರಡು ಹಸುಗಳನ್ನು ಕೊಂಡು ತರುತ್ತಿದ್ದಾಗ ಘಟನೆ ಜರುಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.