ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಗೃಹ ಸಚಿವರು : 16 ಸಾವಿರ ಪೊಲೀಸ್,1 ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ

ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್ ಹಾಗೂ ಒಂದು ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ ಆಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ನಗರದಲ್ಲಿ ನಡೆದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಸಚಿವರು, ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಇದನ್ನು ಭೇದಿಸುವುದು ಸವಾಲಿನ ಕೆಲಸ. ಪೊಲೀಸರು ಪ್ರಾಮಾಣಿಕರಾಗಿರಬೇಕು ಎಂದು ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆ ಸದಸ್ಯರು ರಾಜ್ಯಕ್ಕೆ ನುಸುಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕರಾವಳಿ, ಬೆಂಗಳೂರು, ಮೈಸೂರಿನಲ್ಲಿ ಅವರ ಚಟುವಟಿಕೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಮ್ಮು-ಕಾಶ್ಮೀರ ಹಾಗೂ ಬಾಂಗ್ಲಾದೇಶದ ಗಡಿ ಮೂಲಕ ಉಗ್ರರು ದೇಶವನ್ನು ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದವರು ಹೆಚ್ಚಾಗಿ ರಾಜ್ಯಕ್ಕೆ ಪ್ರವೇಶ ಮಾಡಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ನೀರು ಒದಗಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಪ್ರಚಾರದ ವೇಳೆ ಅಲ್ಲಿ ನೆರೆದಿದ್ದ ಜನರ ಕೋರಿಕೆಗೆ ಸ್ಪಂದಿಸಿ ಸಿಎಂ ಆ ರೀತಿ ಹೇಳಿದ್ದಾರೆ. ಅಲ್ಲಿನ ಜನರು ಕುಡಿಯಲು ನೀರು ಕೇಳುತ್ತಿದ್ದಾರೆ. ಕೊಡು ಕೊಳ್ಳುವಿಕೆ ಆಧಾರದ ಮೇಲೆ ಮಹಾರಾಷ್ಟ್ರ ನೀರು ಕೇಳಿದೆ. ನೀರು ಬಿಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.