ನಾಳೆ ಬೆಳಿಗ್ಗೆ ಸಚಿವ ಸಂಪುಟ ವಿಸ್ತರಣೆ : ಸಂಜೆಗೆ ಸಚಿವರ ಪಟ್ಟಿ ರವಾನಿಸಲಿರುವ ಬಿಜೆಪಿ ಹೈಕಮಾಂಡ್….

ಮುಖ್ಯಮಂತ್ರಿ ಯಡಿಯೂರಪ್ಪನವರು ನಾಳೆ ಬೆಳಿಗ್ಗೆ ತಮ್ಮ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಿದ್ದು, ನೂತನ ಸಚಿವರ ಪಟ್ಟಿಯನ್ನು ಇಂದು ಸಂಜೆಯೊಳಗಾಗಿ ಅಂತಿಮಗೊಳಿಸಲಿರುವ ಬಿಜೆಪಿ ಹೈಕಮಾಂಡ್ ಅದನ್ನು ರವಾನಿಸಲಿದೆ.

ಸಂಪುಟ ವಿಸ್ತರಣೆಯಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮವೆನ್ನಲಾಗಿದ್ದು, ಇದರ ಮಧ್ಯೆ ಸಚಿವ ಸ್ಥಾನಾಕಾಂಕ್ಷಿ ಬಿಜೆಪಿ ಶಾಸಕರುಗಳು ಯಡಿಯೂರಪ್ಪನವರ ನಿವಾಸಕ್ಕೆ ಎಡತಾಕುತ್ತಿದ್ದಾರೆ.

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್‌ ಸರ್ಕಾರ ಪತನಗೊಳ್ಳಲು ಕಾರಣಕರ್ತರಾಗಿದ್ದ ಅನರ್ಹ ಶಾಸಕರುಗಳೂ ಕೂಡಾ ಒಬ್ಬೊಬ್ಬರಾಗಿ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ.

ಅನರ್ಹತೆಯ ಕಾರಣಕ್ಕೆ ಈಗ ಅತಂತ್ರರಾಗಿರುವ ಇವರುಗಳು, ಯಡಿಯೂರಪ್ಪನವರ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲದಂತಾಗಿದ್ದು, ಅನರ್ಹತೆಯನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆ ತೀರ್ಪಿನ ಮೇಲೆಯೇ ಇವರುಗಳ ಭವಿಷ್ಯ ನಿಂತಿರುವ ಕಾರಣ ತಮ್ಮ ಮುಂದಿನ ರಾಜಕೀಯ ಭವಿಷ್ಯ ಏನಾಗಲಿದೆಯೋ ಎಂಬ ಆತಂಕವೂ ಕಾಡತೊಡಗಿದೆ. ಭಾನುವಾರದಂದು ಅನರ್ಹ ಶಾಸಕರುಗಳಾದ ಪ್ರತಾಪ್‌ ಗೌಡ ಪಾಟೀಲ್‌, ಹೆಚ್.‌ ವಿಶ್ವನಾಥ್‌, ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇಂದು ಮತ್ತೊಬ್ಬ ಅನರ್ಹ ಶಾಸಕ ಮುನಿರತ್ನ ಭೇಟಿ ನೀಡಿದ್ದಾರೆ. ಇನ್ನೂ ಹಲವು ಅನರ್ಹ ಶಾಸಕರುಗಳು ಯಡಿಯೂರಪ್ಪನವರ ಭೇಟಿಗೆ ಆಗಮಿಸುತ್ತಿದ್ದಾರೆಂದು ಹೇಳಲಾಗಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.