ದರ್ಶನಭಾಗ್ಯ ಕರುಣಿಸಿದ ಹಾಸನಾಂಬೆ : ದೇವಿಯನ್ನು ಕಂಡು ಪುನೀತರಾದ ಭಕ್ತ ಸಾಗರ

ನಿನ್ನೆಯಿಂದ ದರ್ಶನಭಾಗ್ಯ ಕರುಣಿಸಿರುವ ಹಾಸನದ ಅಧಿದೇವತೆ ಹಾಸನಾಂಬೆಯ ಮೊದಲ ದಿನದ ಸಾರ್ವಜನಿಕ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವಿಯನ್ನು ಎದುರುಗೊಂಡ ಭಕ್ತರು ಪುನೀತರಾದರು.

ಇನ್ನೊಂದೆಡೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬ, ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಗುರೂಜಿ, ಮಾಜಿ ಸಿಎಂ ಧರ್ಮಸಿಂಗ್ ಪತ್ನಿ ಸೇರಿದಂತೆ ಹಲವು ಗಣ್ಯರು ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಹಾಸನಾಂಬೆಯ ಸಾರ್ವಜನಿಕ ದರ್ಶನದ ಮೊದಲ ದಿನವೇ ಜಿಲ್ಲೆ ಹಾಗೂ ನಾಡಿನ ವಿವಿಧೆಡೆಗಳಿಂದ ಭಕ್ತರ ದಂಡೇ ಹರಿದು ಬರುತ್ತಿದೆ. ಕಳೆದ ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಸಾಲು ಗಟ್ಟಿದ್ದ ಭಕ್ತರು, ದೇವಿಯ ದರ್ಶನ ಪಡೆದು ಭಾವ ಪರವಶರಾದರು. ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಮೊದಲ ದಿನ ಗರ್ಭಗುಡಿ ಬಾಗಿಲು ತೆರೆದ ನಂತರ ಒಳ ಆವರಣ ಸ್ವಚ್ಛ ಮಾಡಿ ದೇವಿಗೆ ಆಭರಣ ಧಾರಣೆ ಮಾಡಿದ ಬಳಿಕ ಇಂದು ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿ, ಪುತ್ರ ಹಾಗೂ ಸಂಸದ ಪ್ರಜ್ವಲ್, ಡಾ.ಸೂರಜ್ ವಿಶೇಷ ಪೂಜೆ ಸಲ್ಲಿಸಿದರು. ದರ್ಶನ ನಂತರ ಮಾತನಾಡಿದ ರೇವಣ್ಣ, ಮುಂದೆ ನಮ್ಮ ಸರ್ಕಾರ ಬರಲೆಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನೆರೆಯಿಂದ ನಲುಗಿರುವ ಸಂತ್ರಸ್ತರಿಗೆ ಆದಷ್ಟು ಬೇಗ ಒಳ್ಳೇ ದಿನಗಳು ಬರಲಿ ಎಂದು ಬೇಡಿಕೊಂಡಿದ್ದೇನೆ ಎಂದರು. ಪ್ರಜ್ವಲ್ ಸಹ, ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಹಾಸನಾಂಬೆಯಲ್ಲಿ ಬೇಡಿಕೊಂಡಿದ್ದೇವೆ ಎಂದರು.

ಇದೇ ರೀತಿ ಮಾಜಿ ಸಿಎಂ ಧರ್ಮಸಿಂಗ್ ಪತ್ನಿ, ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮ ಸಹ ಇಂದು ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಸಪ್ತಮಾತೃಕೆಯಾಗಿರುವ ಈ ತಾಣ ಅತ್ಯಂತ ಪುಣ್ಯ ತಾಣವಾಗಿದೆ. ಹೀಗಾಗಿ ಎಲ್ಲರೂ ಆಗಮಿಸಿ ದೇವಿಯ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು. ನವೆಂಬರ್ 4 ರಿಂದ ಸಾಂಕ್ರಾಂತಿಯವರೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಂಟಕ ಎದುರಾಗಲಿದ್ದು, ಅಪಮೃತ್ಯವಾಗಲಿದೆ ಎಂದು ಭವಿಷ್ಯ ನುಡಿದ್ರು. ಅಷ್ಟೇ ಅಲ್ಲದೇ ನೆರೆಹಾವಳಿ ಹೆಚ್ಚಾಗಲಿದ್ದು, ರಾಜ್ಯದಲ್ಲಿ ಹಳಬರು ಯಾರೂ ಸಿಎಂ ಆಗೊಲ್ಲಾ ಹೊಸಬರು ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ್ರು.

ನಾಳೆ ಮತ್ತು ಭಾನುವಾರ ವೀಕೆಂಡ್ ದಿನಗಳಾಗಿರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಕ್ಟೋಬರ್ 28 ರ ವರೆಗೂ ಸಾರ್ವಜನಿಕ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.