ಚಂದ್ರಯಾನ-3 ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ಧತೆ

ಭಾರತದ ಚಂದ್ರಯಾನ-2, ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ಸುರಕ್ಷಿತ ಲ್ಯಾಂಡಿಂಗ್‌ ಮಾಡುವಲ್ಲಿ ವಿಫಲವಾಯಿತು. ಆದರೂ ಭಾರತೀಯ ವಿಜ್ಞಾನಿಗಳು ಕೈ ಚೆಲ್ಲಿ ಕುಳಿತಿಲ್ಲ. ಈಗ ಚಂದ್ರಯಾನ-3ರ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿದೆ. ಮುಂದಿನ ವರ್ಷ ಅಂದರೆ 2020ರ ನವೆಂಬರ್‌ ವೇಳೆಗೆ ಚಂದ್ರಯಾನ-3 ಉಡ್ಡಯನಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-3 ಯೋಜನೆ ಆರಂಭಿಸಲು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಲು ಉನ್ನತ ಮಟ್ಟದ ಸಮಿತಿಯನ್ನು ತಿರುವನಂತಪುರ ಕೇಂದ್ರದ ನಿರ್ದೇಶಕ ಎಸ್‌.ಎ‌ಸ್‌.ಸೋಮನಾಥ್‌ ಅವರ ಉಪಸ್ಥಿತಿಯಲ್ಲಿ ರಚಿಸಲಾಗಿದೆ. ತಿರುವನಂಪುರದ ವಿಕ್ರಂ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದಲ್ಲೇ ಚಂದ್ರಯಾನ-3ರ ಎಲ್ಲ ಕಾರ್ಯ ಚಟುವಟಿಕೆಗಳು ನಡೆಯಲಿವೆ.

ಚಂದ್ರಯಾನ-3 ಉಡ್ಡಯನ ಯೋಜನೆಯ ಎಲ್ಲಾ ಜವಾಬ್ದಾರಿಯ ಹೊಣೆ ವಿಕ್ರಂ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರ ಹೊರಲಿದೆ. ಉಡ್ಡಯನಕ್ಕೆ ಬೇಕಾದ ರಾಕೆಟ್‌ ಹಾಗೂ ಎಲ್ಲಾ ವಾಹನಗಳನ್ನು ವಿಕ್ರಂ ಬಾಹ್ಯಾಕಾಶ ಕೇಂದ್ರದಲ್ಲೇ ಸಿದ್ಧಗೊಳಿಸಲಾಗುವುದು ಎಂದು ಇಸ್ರೋ ಮಾಹಿತಿ ನೀಡಿದೆ.

ಮುಂದಿನ ವರ್ಷಾಂತ್ಯದೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಬೇಕಾದ ಎಲ್ಲಾ ಮಾಹಿತಿ, ಸಲಹೆ ಮತ್ತು ಸಹಕಾರವನ್ನು ನೀಡಲಾಗುವುದು ಎಂದು ಸಮಿತಿ ಹೇಳಿದೆ. ಚಂದ್ರಯಾನ- 2 ಯೋಜನೆಯಲ್ಲಿ ರೋವರ್‌, ಲ್ಯಾಂಡರ್‌ ಮತ್ತು ಲ್ಯಾಂಡಿಂಗ್ನಲ್ಲಿದ್ದ ನ್ಯೂನ್ಯತೆಯ ಸವಾಲುಗಳನ್ನು ಸರಿಪಡಿಸಿಕೊಂಡು, ಯಾವುದೇ ಪ್ರಮಾದವಾಗದಂತೆ, ಯಶಸ್ವಿ ಚಂದ್ರಯಾನ- 3 ಉಡ್ಡಯನ ಮಿಷನ್‌ನ್ನು ರೂಪಿಸಲಾಗುವುದು ಎಂದು ಹೇಳಿದರು.

ಇನ್ನು ಚಂದ್ರಯಾನ-2 ಸಾಫ್ಟ್‌ ಲ್ಯಾಂಡಿಂಗ್‌ ವೇಳೆ ವಿಕ್ರಂ ತನ್ನ ದಿಕ್ಕು ಬದಲಾಯಿಸಿ, ಜೋರಾಗಿ ಅಪ್ಪಳಿಸಿತ್ತು. ಹೀಗಾಗಿ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ.

ಬಾಹ್ಯಾಕಾಶ ಏಜೆನ್ಸಿ ನಿರ್ದೇಶಕ ವಿ. ನಾರಾಯಣನ್, ನೇತೃತ್ವದಲ್ಲಿ ತಜ್ಞರ ತಂಡವನ್ನು ರಚಿಸಲಾಗಿದ್ದು, ವಿಕ್ರಂ ಸಾಫ್ಟ್‌ ಲ್ಯಾಂಡಿಂಗ್‌ ಆಗದಿರುವುದು ಯಾಕೆ..? ಕೊನೆಯ ಕ್ಷಣದಲ್ಲಾದ ಬದಲಾವಣೆಗಳೇನು..?, ಅಲ್ಲಿಯ ವಾತಾವರಣ ಹೇಗಿದೆ ಎಂಬ ಬಗ್ಗೆಯೂ ಅಧ್ಯಯನ ನಡೆಸಿ, ವರದಿ ನೀಡಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.