ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನ ಅಪಘಾತ : 29ಕ್ಕೂ ಹೆಚ್ಚು ಮಂದಿ ಸಾವು

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 29ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತ ನಡೆದಿದೆ.

ಬ್ಯುಸಿ ಬೀ ಎಂಬ ಸ್ಥಳೀಯ ಸಂಸ್ಥೆಗೆ ಸೇರಿದ ವಿಮಾನ ಬೆನಿ ನಗರಕ್ಕೆ ಹೊರಟಿತ್ತು. ಟೇಕಾಫ್ ಆಗುವ ವೇಳೆ ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವರು ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಕೊನೆಯುಸಿರು ಎಳೆದಿದ್ದಾರೆ. ಸಾಕಷ್ಟು ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ನಾರ್ತ್ ಕಿವು ಸರ್ಕಾರ ತಿಳಿಸಿದೆ.

ಈ ವಿಮಾನ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ವಿಮಾನ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಯುರೋಪಿಯನ್ ಒಕ್ಕೂಟದಲ್ಲಿ ಈ ವಿಮಾನಗಳ ಕಾರ್ಯ ನಿರ್ವಹಣೆಯನ್ನು ನಿಷೇಧಿಸಲಾಗಿದೆ. ಟೇಕಾಪ್ ಆದ ಬಳಿಕ ಏರ್‌ಪೋರ್ಟ್‌ ಬಳಿ ಇದ್ದ ವಸತಿ ಪ್ರದೇಶಕ್ಕೆ ವಿಮಾನ ಬಂದು ಅಪ್ಪಳಿಸಿದೆ. 2 ಮನೆಗಳ ಮೇಲೆ ವಿಮಾನ ಬಿದ್ದ ಪರಿಣಾಮ ಮನೆಗಳು ನೆಲಸಮವಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಘಟನಾ ಸ್ಥಳದಲ್ಲಿ ಒಟ್ಟಾರೆ 29 ಮೃತದೇಹಗಳು ಪತ್ತೆಯಾಗಿವೆ. ತಾಂತ್ರಿಕ ಸಮಸ್ಯೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.