ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಕಾಲುವೆಯ ನೀರು ನುಗ್ಗಿ ಅವಾಂತರ….

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದ್ದರಿಂದ ಕಾಲುವೆಯ ನೀರು ಊರಿನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದೆ. ಹೀಗಾಗಿ ನಿನ್ನೆಯಿಂದ ಕಾಲುವೆ ಗೇಟ್ ರಿಪೇರಿ ಕಾರ್ಯವನ್ನು ಜಲಾಶಯದ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ನೀರಿನ ರಭಸದ ಹಿನ್ನಲೆಯಲ್ಲಿ ರಿಪೇರಿಗೆ ಅಡ್ಡಿಯಾಗುತ್ತಿದೆ. ಪರಿಣಾಮ ಕಾಲುವೆಯ ಗೇಟ್ ಇನ್ನೂ ರಿಪೇರಿ ಆಗಿಲ್ಲ.

ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಕಾಲುವೆ ಮೂಲಕ ಅಪಾರ ಪ್ರಮಾಣದ ನೀರು ಹೊರ ಬರುತ್ತಿದ್ದು, ಪಂಪಾವನ ಜಲಾವೃತಗೊಂಡಿದೆ. ಅಲ್ಲದೆ ಮುನಿರಾಬಾದ್ ನ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಡಾರ್ಮೆಟರಿ, ರೈಲ್ವೆ ಕ್ವಾಟ್ರಾಸ್, ಉಸ್ಮಾನ್ ಶೇಖ್ ಕ್ಯಾಂಪ್ ಸೇರಿದಂತೆ ಅನೇಕ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ.

ಕೊಪ್ಪಳ ತಾಲೂಕಿನ ಮಟ್ಟಿ ಮುದ್ಲಾಪುರ ಗ್ರಾಮದ ಬಳಿಯ ನೂರಾರು ಎಕರೆ ಜಮೀನು ಕೂಡ ನೀರಿನಲ್ಲಿ ಮುಳುಗಿದೆ. ಹೀಗಾಗಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಹಾನಿಗೀಡಾಗಿದೆ. ಸುಮಾರು 300ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.