‘ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಸಿಎಂ’ : ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಬಿಜೆಪಿ ಶಾಸಕ

ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ವೈಮನಸ್ಸು, ಮನಸ್ತಾಪ ಶುರುವಾಗಿದೆ. ಒಬ್ಬೊಬ್ಬರಾಗಿ ಸಿಎಂ ವಿರುದ್ಧ ಹರಿಹಾಯುತ್ತಿದ್ದಾರೆ.

ಯಡಿಯೂರಪ್ಪನವರ ಮುಖ್ಯಮಂತ್ರಿಗಳಾಗಿ ತಿಂಗಳಾಗುತ್ತಾ ಬಂದಿದ್ದು, ಅವರು ಪ್ರಮಾಣವಚನ ಸ್ವೀಕರಿಸಿದ 25 ದಿನಗಳ ಬಳಿಕ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದರು. ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಶಾಸಕರುಗಳ ಅಸಮಾಧಾನ ಭುಗಿಲೆದ್ದಿದ್ದು, ಬಹಿರಂಗವಾಗಿಯೇ ತಮ್ಮ ಆಕ್ರೋಶ ಹೊರ ಹಾಕಿದ್ದರು.

ಈ ಪೈಕಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡಾ ಒಬ್ಬರಾಗಿದ್ದು, ತಮಗೆ ಈ ಹಿಂದೆ ನೀಡಿದ್ದ ಭರವಸೆಯನ್ನು ಯಡಿಯೂರಪ್ಪನವರು ಈಡೇರಿಸಲಿಲ್ಲ ಎಂದು ಹೇಳಿದ್ದರು. ಅಲ್ಲದೆ ತಾವು ಬಿಜೆಪಿಗೆ ಬರಬಾರದಾಗಿತ್ತು ಎಂಬ ಮಾತುಗಳನ್ನಾಡಿದ್ದರು.

ಇದೀಗ ಗೂಳಿಹಟ್ಟಿ ಶೇಖರ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವ ಕುರಿತು ತಾರತಮ್ಯವಾಗಿತ್ತು. ಇದೀಗ ನಮ್ಮ ಪಕ್ಷದ ಸರ್ಕಾರದಲ್ಲೂ ಈ ತಾರತಮ್ಯ ಮುಂದುವರೆದಿದೆ ಎಂದಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರದ ವರ್ಗಾವಣೆ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರು ಮೂಗು ತೂರಿಸುತ್ತಿದ್ದಾರೆಂದು ಸ್ವಪಕ್ಷೀಯರ ವಿರುದ್ಧವೇ ಆರೋಪ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.