ಕಾಶ್ಮೀರ 2 ಭಾಗವಾಗಿ ವಿಭಜನೆ: 370ನೇ ಕಲಂ ತೆಗೆದು ಹಾಕಿದ ಕೇಂದ್ರ ಸರ್ಕಾರ…

ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕಲಾಗಿದೆ ಎಂದು ಗೃಹ ಸಚಿವ ಅಮಿತ್ ಷಾ ಇಂದು ರಾಜ್ಯಸಭೆಯಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಪ್ರಾಂತವು ಭಾರತದ ಜೊತೆ ವಿಲೀನವಾಗಲು ಮಾಡಿಕೊಂಡಿದ್ದ ಒಪ್ಪಂದದ ಅನ್ವಯ ಸಂವಿಧಾನದಲ್ಲಿ 370ನೇ ವಿಧಿಯನ್ನು ಸೇರಿಸಲಾಗಿತ್ತು. ಅದರ ಪ್ರಕಾರ ಜಮ್ಮು & ಕಾಶ್ಮೀರಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನು ಆ ರಾಜ್ಯದ ವಿಧಾನಸಭೆಯ ಒಪ್ಪಿಗೆಯಿಲ್ಲದಂತೆ ಮಾಡುವ ಹಾಗಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರವು ಆ ವಿಧಿಯನ್ನೇ ತೆಗೆದುಹಾಕಿದ್ದೇವೆ ಎಂದು ಘೋಷಿಸಿರುವುದು ಸಂವಿಧಾನಬದ್ಧವಾ ಎಂಬ ಪ್ರಶ್ನೆ ಏಳುತ್ತದೆ.

ಕಳೆದ ಒಂದು ವಾರದಿಂದ ಸುಮಾರು 45 ಸಾವಿರಕ್ಕೂ ಹೆಚ್ಚು ಸೇನಾಪಡೆಗಳನ್ನು ಕಾಶ್ಮೀರದಲ್ಲಿ ನಿಯೋಜಿಸಿದ್ದು ಮತ್ತು ನಿನ್ನೆ ಅಲ್ಲಿನ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹಬಂಧನಕ್ಕೆ ಒಳಪಡಿಸಿದ್ದು ಹಲವು ವದಂತಿಗಳಿಗೆ ಕಾರಣವಾಗಿತ್ತು. ಕಾಶ್ಮೀರದಲ್ಲಿ ಏನೋ ಮಹತ್ವದ್ದು ನಡೆಯಲಿದೆ ಎಂಬುದು ಎಲ್ಲರಿಗೂ ಖಚಿತವಾಗಿತ್ತು. ಆದರೆ ಏನು ಎಂಬುದು ಎಲ್ಲರಿಗೂ ಪ್ರಶ್ನೆಯಾಗಿತ್ತು.

ಜಮ್ಮು ಮತ್ತು ಕಾಶ್ಮೀರವನ್ನು ತ್ರಿವಿಭಜನೆ ಮಾಡಿ, ಸಂವಿಧಾನದ ಕಲಂಗಳು ಅಪ್ರಸ್ತುತವಾಗುವಂತೆ ಮಾಡಲಾಗುತ್ತದೆ ಎಂಬ ವದಂತಿಯೂ ಇತ್ತು. ಇದೀಗ ಜಮ್ಮು & ಕಾಶ್ಮೀರವನ್ನು ವಿಭಜನೆ ಮಾಡಿ, ಜಮ್ಮು & ಕಾಶ್ಮೀರವನ್ನು ವಿಧಾನಸಭೆಯಿರುವ ಕೇಂದ್ರಾಡಳಿತ ಪ್ರದೇಶವನ್ನಾಗಿಯೂ, ಲಡಖ್ ವಿಧಾನಸಭೆಯಿರದ ಕೇಂದ್ರಾಡಳಿತ ಪ್ರದೇಶವನ್ನಾಗಿಯೂ ಮಾಡಲಾಗಿದೆ.

ಕಲಂ 370 ಅನ್ನು ರಾಷ್ಟ್ರಪತಿಗಳ ಆದೇಶದಿಂದ ತೆಗೆದುಹಾಕಲಾಗಿದೆಯೇ ಹೊರತು, ಸಂಸತ್ತಿನಲ್ಲಿ ಮೂರನೇ ಎರಡು ಬಹುಮತದಿಂದ ಅಲ್ಲ. ಹೀಗಾಗಿ ಒಂದು ವೇಳೆ ಸಂವಿಧಾನದ ಈ ಕಲಂ ಅನ್ನು ತೆಗೆದುಹಾಕುವುದಿದ್ದರೂ, ಅದನ್ನು ಸಂಸತ್ತಿನಲ್ಲಿ ಚರ್ಚಿಸಬೇಕಿತ್ತು. ಅದ್ಯಾವುದನ್ನೂ ಮಾಡದೇ ರಾಷ್ಟ್ರಪತಿಗಳ ಒಂದು ಆದೇಶದಿಂದ ಈ ರೀತಿ ಮಾಡುವುದು ಸಂವಿಧಾನಬದ್ಧವಾಗುತ್ತದೆಯೇ ಎಂಬ ಪ್ರಶ್ನೆಯೂ ಇದೆ. ಸದರಿ ಮಾಹಿತಿಯನ್ನು ರಾಜ್ಯಸಭೆಗೆ ಅಮಿತ್ ಷಾ ನೀಡಿದ ನಂತರ ಪ್ರತಿಪಕ್ಷಗಳು ತೀವ್ರವಾಗಿ ಪ್ರತಿಭಟಿಸಲಾರಂಭಿಸಿದರು. ಅದರ ನಂತರವೂ ಕಾಶ್ಮೀರಕ್ಕೆ ಸಂಬಂಧಿಸಿದ ಹಲವು ಮಸೂದೆಗಳನ್ನು ಅಮಿತ್ ಷಾ ಮಂಡಿಸುತ್ತಿದ್ದು, ಗದ್ದಲದಲ್ಲಿ ಸರಿಯಾಗಿ ಕೇಳಿಸುತ್ತಿಲ್ಲ.

ನಂತರ ಇದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನೆ ಮಾಡಿದರೆ, ಸದರಿ ಆದೇಶವು ಊರ್ಜಿತವಾಗುತ್ತದೆಯೇ ಎಂಬ ಚರ್ಚೆ ಈಗಾಗಲೇ ಇದ್ದು, ಎರಡು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಜನಾಂದೋಲನದ ಶೆಹ್ಲಾ ರಷೀದ್ ಅವರು ಬಿಡುಗಡೆ ಮಾಡಿದ ವಿಡಿಯೋದಲ್ಲೂ ಇದನ್ನು ಹೇಳಿದ್ದರು.
ಬಿಜೆಪಿಯ ಮಿತ್ರಪಕ್ಷ ಜೆಡಿಯು ಸಹಾ ಕಲಂ 370ರ ಪರವಾಗಿದ್ದು, ಪದೇ ಪದೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತದಿಂದ ಇದನ್ನು ಸಾಧಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದ್ದರಿಂದಲೇ ಇಂತಹ ಕ್ರಮಕ್ಕೆ ಬಿಜೆಪಿ ಪಕ್ಷವು ಮುಂದಾಗಿರುವುದು ಎದ್ದು ಕಾಣುತ್ತಿದೆ.

ಕಳೆದ ಒಂದು ವಾರದಿಂದ ದೇಶದ ಆರ್ಥಿಕತೆಯು ತೀವ್ರ ಬಿಕ್ಕಟ್ಟಿನ ಕಡೆಗೆ ಸಾಗುತ್ತಿರುವ ಹಲವು ವರದಿಗಳು ಬಂದಿದ್ದವು. ಈ ಹಿಂದೆ ಮೋದಿಯವರ ಪ್ರಬಲ ಸಮರ್ಥಕರಾಗಿದ್ದ ಉದ್ದಿಮೆಪತಿಗಳೂ ಸಹಾ ಸರ್ಕಾರವನ್ನು ಟೀಕೆ ಮಾಡಲು ಆರಂಭಿಸಿದ್ದರು. ಆದ್ದರಿಂದಲೇ ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಸರ್ಕಾರವು ಕೈಗೆತ್ತಿಕೊಳ್ಳಲು ಹೊರಟಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಸ್ವಾತಂತ್ರ್ಯಾನಂತರ ನಡೆದಿರುವ ಅತೀ ಮಹತ್ವದ ಬೆಳವಣಿಗೆಗಳಲ್ಲಿ ಇದೂ ಒಂದಾಗಿರಲಿದ್ದು, ಇದರಿಂದ ಕಾಶ್ಮೀರದಲ್ಲಿ ಉಂಟಾಗಬಹುದಾದ ಅಶಾಂತಿಯ ಕುರಿತು ಆತಂಕ ಎದುರಾಗಿದೆ. ಕಾಶ್ಮೀರವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕಾದರೆ ಕಲಂ 370 ಇರಲೇಬೇಕು ಎಂದು ಇತ್ತೀಚೆಗೆ ತಾನೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದರು.

ಇವೆಲ್ಲಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹಲವಾರು ಸರಣಿ ಬೆಳವಣಿಗೆಗಳಿಗೆ ಕಾರಣವಾಗುವ ಬೆಳವಣಿಗೆ ಇದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.