ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ : 63 ಮಂದಿ ಸಾವು 182 ಜನರಿಗೆ ಗಾಯ

ಅಫ್ಘಾನಿಸ್ತಾನದ ವಿವಾಹ ಮಂಟಪವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 63 ಮಂದಿ ಸಾವನ್ನಪ್ಪಿ ಸುಮಾರು 182 ಜನರು ಗಾಯಗೊಂಡಿದ್ದಾರೆ.

ಈ ಘಟನೆ ಶನಿವಾರ ರಾತ್ರಿ ಅಫ್ಘಾನ್ ರಾಜಧಾನಿ ಕಾಬೂಲ್‍ನಲ್ಲಿ ನಡೆದಿದ್ದು, ತುಂಬಾ ಜನ ಸೇರಿದ್ದ ವಿವಾಹವೊಂದರ ಆರತಕ್ಷತೆಯ ಸಮಯದಲ್ಲಿ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರಸಂಘಟನೆ ನಿರಾಕರಿಸಿದ್ದು, ಇದುವರಿಗೂ ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯು ಹೊತ್ತುಕೊಂಡಿಲ್ಲ.

ಹತ್ತು ದಿನಗಳ ಹಿಂದೆ, ಪಶ್ಚಿಮ ಕಾಬೂಲ್‍ನಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರಸಂಘಟನೆ ನಡೆಸಿದ ಕಾರು ಬಾಂಬ್ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿ, 145 ಮಂದಿ ಗಾಯಗೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ ವಿವಾಹ ಮಂಟಪದಲ್ಲಿ ಉರುಳಿಬಿದ್ದ ಟೇಬಲ್ ಮತ್ತು ಕುರ್ಚಿಗಳ ನಡುವೆ ಬಾಂಬ್ ಸ್ಫೋಟದ ತೀವ್ರತೆ ಛಿದ್ರವಾಗಿರುವ ಮೃತದೇಹಗಳು ಕಂಡು ಬಂದಿವೆ. ಈ ಅತ್ಮಾಹುತಿ ಬಾಂಬ್ ದಾಳಿಯನ್ನು ಪುರುಷ ವ್ಯಕ್ತಿಯೊಬ್ಬ ಮಾಡಿದ್ದಾನೆ ಎಂದು ಕಾಬೂಲ್‍ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ ಉಗ್ರಸಂಘಟನೆಗಳು ಸೇರಿದಂತೆ ಸುನ್ನಿ ಮುಸ್ಲಿಂ ಸಮುದಾಯದ ಸಶಸ್ತ್ರ ಗುಂಪುಗಳು ಹಲವಾರು ವರ್ಷಗಳಿಂದ ಅಫ್ಘಾನಿಸ್ತಾನ ಮತ್ತು ನೆರೆಯ ಪಾಕಿಸ್ತಾನದಲ್ಲಿರುವ ಶಿಯಾ ಹಜಾರಾ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ಈ ರೀತಿಯ ದಾಳಿ ನಡೆಸುತ್ತಿವೆ.

ಈ ದಾಳಿಯ ರೀತಿಯಲ್ಲೇ ಪಾಕಿಸ್ತಾನದ ಮಸೀದಿಯ ಮೇಲೆ ಕಳೆದ ಶುಕ್ರವಾರ ನಡೆದ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂಡ್ಜಾಡಾನ ಸಹೋದರ ಸಾವನ್ನಪ್ಪಿದ್ದ. ಅವನ ಜೊತೆಗೆ ನಾಲ್ಕು ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 20 ಮಂದಿ ಗಾಯಗೊಂಡಿದ್ದರು. ಆದರೆ ಈ ಸ್ಫೋಟದ ಜವಾಬ್ದಾರಿಯನ್ನು ಕೂಡ ಯಾವ ಉಗ್ರ ಸಂಘಟನೆಯು ವಹಿಸಿಕೊಂಡಿಲ್ಲ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.