ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ : ಬಿಜೆಪಿಯಲ್ಲೂ ಭಿನ್ನಮತ ಶುರು

ಉಪಚುನಾವಣೆಯ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅನರ್ಹರಿಗೆ ಸಂಬಂಧಿಸಿದ ಸುಪ್ರೀಂಕೋರ್ಟು ತೀರ್ಪು ಸಹಾ ಬಂದ ಮೇಲೆ ಗೆಲುವು ಸೋಲಿನ ಲೆಕ್ಕಾಚಾರಗಳು ಆರಂಭವಾಗಿವೆ. 12ರಲ್ಲಿ ಗೆಲ್ಲುತ್ತೇವೆ, 15 ಗೆದ್ದರೂ ಆಶ್ಚರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಕೂಗು ಹಾಕುತ್ತಿದ್ದಾರಾದರೂ, ಮೂರೂ ಪಕ್ಷಗಳು ದುಸ್ಥಿತಿಯಲ್ಲೇ ಇವೆ ಎಂಬುದು ಎದ್ದು ಕಾಣುತ್ತಿದೆ. ಮೂರೂ ಪಕ್ಷಗಳ ‘ಒಳಗಿನ’ ಮೂಲಗಳನ್ನು ಮಾತಾಡಿಸಿದಾಗ ಕಂಡುಬಂದಿರುವ ಸಂಗತಿ ಇದಾಗಿದೆ.

ಈಗಾಗಲೇ ಗೆದ್ದು ಬಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರನ್ನು ಪಕ್ಷಾಂತರ ಮಾಡಿಸಿದ ಬಿಜೆಪಿ ಪಕ್ಷವು ಅದೇ (ಅನರ್ಹ) ಶಾಸಕರಿಗೇ ಟಿಕೆಟ್ ಕೊಟ್ಟರೂ, ಬಹುಮತಕ್ಕೆ ಅಗತ್ಯವಿರುವ 8 ಸೀಟುಗಳನ್ನು ಗೆಲ್ಲುವ ಸ್ಥಿತಿಯಲ್ಲಿ ಇಲ್ಲ.

ಅಧಿಕಾರದಲ್ಲಿದ್ದು, ಬಲಿಷ್ಠ ಹೈಕಮ್ಯಾಂಡ್ ಹೊಂದಿರುವ, ವಿರೋಧ ಪಕ್ಷಗಳ ಘಟಾನುಘಟಿ ನಾಯಕರನ್ನೂ ಹೆದರಿಸಿಟ್ಟುಕೊಂಡಿರುವ ಬಿಜೆಪಿಯಲ್ಲೂ ಭಿನ್ನಮತ ಇದೆ. ಹೊಸಕೋಟೆಯಲ್ಲಿ ಈಗಾಗಲೇ ಹಾಲಿ ಬಿಜೆಪಿ ಸಂಸದ ಬಚ್ಚೇಗೌಡರ ಮಗ ಮತ್ತು ಬಿಜೆಪಿಯ ಪರಾಜಿತ ಅಭ್ಯರ್ಥಿ ಶರತ್ ಪಕ್ಷೇತರರಾಗಿ ನಿಲ್ಲುವುದಾಗಿ ಘೋಷಿಸಿಯಾಗಿದೆ.

ಅಥಣಿಯಲ್ಲಿ ಪರಾಜಿತ ಅಭ್ಯರ್ಥಿ ಲಕ್ಷ್ಮಣ ಸವದಿಯೇ ಈಗ ಉಪಮುಖ್ಯಮಂತ್ರಿ. ಅವರನ್ನೇ ಈ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಎಂದು ಘೋಷಿಸಲಾಗಿದೆ. ಆದರೆ ಅಭ್ಯರ್ಥಿ ಯಾರೆಂದು ಹೇಳಿಲ್ಲ. ಮಹೇಶ್ ಕುಮಟಳ್ಳಿಯವರನ್ನು ತಾವೇ ನಿಂತು ಗೆಲ್ಲಿಸುತ್ತಾರೋ ಸೋಲಿಸುತ್ತಾರೋ ನೋಡಬೇಕು. ಉಳಿದಂತೆ ಭಿನ್ನಮತವನ್ನು ಮೇಲ್ನೋಟಕ್ಕೆ ಬಿಜೆಪಿಯು ಹತ್ತಿಕ್ಕಿದಂತೆ ತೋರುತ್ತದಾದರೂ, ಮತದಾನ ಹೇಗೆ ನಡೆಯುತ್ತದೆಂಬುದು ಗೊತ್ತಾಗಲು ಫಲಿತಾಂಶದ ದಿನದವರೆಗೂ ಕಾಯಬೇಕು. ಹೀಗಾಗಿಯೇ ಬಿಜೆಪಿಯು 7ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಹೊಂದಿಲ್ಲ.

ಇನ್ನು ಕಾಂಗ್ರೆಸ್ನ ದುಸ್ಥಿತಿ ಕಡಿಮೆ ಏನಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿ ಹುಡುಕಲು ಸಾಧ್ಯವಾಗಿಲ್ಲ. ಹೊಸಕೋಟೆಯಲ್ಲಿ ಎಂಟಿಬಿ ಸೋಲುವಂತಾಗಲು ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲ್ಲಬೇಕು. ಹಾಗಾಗಿ ಭೈರತಿ ಸುರೇಶ್ ಪತ್ನಿಯನ್ನು ಕಣಕ್ಕಿಳಿಸಲಾಗುತ್ತಿದೆ. ಯಶವಂತಪುರ ಕ್ಷೇತ್ರದಲ್ಲಿ ಇದುವರೆಗೆ ಅಭ್ಯರ್ಥಿಯನ್ನು ಹುಡುಕಿಕೊಳ್ಳುವುದೇ ಸಾಧ್ಯವಾಗಿಲ್ಲ. ಅಲ್ಲಿ ಜವರಾಯಿಗೌಡರನ್ನು ಕಾಂಗ್ರೆಸ್‍‌ಗೆ ತರುವ ಪ್ರಯತ್ನ ಸಫಲವಾಗದೇ, ಈಗ ಜೆಡಿಎಸ್‌ನ ಜವರಾಯಿಗೌಡರನ್ನು ಗೆಲ್ಲಿಸುವಂತಹ ಕ್ಯಾಂಡಿಡೇಟ್ ಹಾಕುವುದಷ್ಟೇ ಕಾಂಗ್ರೆಸ್‌ಗೆ ಸಾಧ್ಯ.

ಇನ್ನು ಚಿಕ್ಕಬಳ್ಳಾಪುರದಲ್ಲಿ ಘೋಷಣೆ ಮಾಡಲಾಗಿದ್ದ ಅಭ್ಯರ್ಥಿ ಅಂಜನಪ್ಪ ಹಿಂದೆ ಸರಿದಾಗಿದೆ. ಈ ಸದ್ಯ ಅವರನ್ನೇ ಮನವೊಲಿಸುವ ಕೆಲಸ ಸಾಗಿದೆ. ಆ ಲೆಕ್ಕದಲ್ಲಿ ಸುಧಾಕರ್‌ಗೆ ನಿರಾತಂಕ ಗೆಲುವಿಗೆ ದಾರಿ ಮಾಡಿಕೊಡಲಾಗಿದೆ. ಗೋಕಾಕ್‍‌ನಲ್ಲೂ ಕ್ಯಾಂಡಿಡೇಟ್ ಅಂತಿಮವಾಗಿಲ್ಲ. ಪಕ್ಷಾಂತರದಿಂದ ತೊಂದರೆ ಅನುಭವಿಸಿದ್ದರೂ, ಕಾಗವಾಡ ಮತ್ತು ಗೋಕಾಕ್‌ನಲ್ಲಿ ಬಿಜೆಪಿಯಿಂದ ಬರುವ ಅಭ್ಯರ್ಥಿಗೆ ಕಾಯುತ್ತಿರುವ ಹೀನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಇನ್ನೂ ಕೆಲವು ಕ್ಷೇತ್ರಗಳಲ್ಲೂ ಹೀಗೆಯೇ ಆಗಬಹುದು.

ಜೆಡಿಎಸ್‍ ಮಿಕ್ಕೆಲ್ಲರಿಗಿಂತಲೂ ಕೆಟ್ಟ ಸ್ಥಿತಿಯಲ್ಲಿದೆ. ಉಪಚುನಾವಣೆಯ ಫಲಿತಾಂಶ ನೆಗೆಟಿವ್ ಆದರೆ ಬಿಜೆಪಿಗೆ ತಾನೇ ಬೆಂಬಲ ಕೊಡುವುದಾಗಿ ಗೌಡರು ಮತ್ತು ಮಗ ಘೋಷಿಸಿಯಾಗಿದೆ. ತನ್ನ ಸರ್ಕಾರವನ್ನು ಇಳಿಸಿದ ಪಕ್ಷಕ್ಕೆ ಇಷ್ಟು ಬೇಗ ಬೆಂಬಲ ನೀಡಲು ನಿಂತಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆ ಕಡೆಗೆ ಗೋಪಾಲಯ್ಯ ಹೋಗಿದ್ದಷ್ಟೇ ಅಲ್ಲ; ಬಹಳ ಕಾಲದಿಂದ ಜೆಡಿಎಸ್‍‌ ದುಡಿಯುತ್ತಾ ಬಂದಿದ್ದ ಆರ್.ವಿ.ಹರೀಶ್‍ ಸಹಾ ಪಕ್ಷಕ್ಕೆ ಮೊನ್ನೆಯಷ್ಟೇ ರಾಜೀನಾಮೆ ಕೊಟ್ಟಿದ್ದಾರೆ. ಏಕೆಂದರೆ ಅಲ್ಲಿ ಇನ್ಯಾರೋ ವಲಸೆ ಹಕ್ಕಿಯನ್ನು ಅಪ್ಪ ಮಕ್ಕಳು ಹಿಡಿದುಕೊಂಡು ಬರಲಿದ್ದಾರೆ ಎಂಬ ತನ್ನ ಭಾವನೆಯನ್ನೂ ಅವರು ಮುಚ್ಚಿಟ್ಟಿಲ್ಲ.

ಹುಣಸೂರಿನಲ್ಲಿ ಎಚ್.ವಿಶ್ವನಾಥ್‌ರನ್ನು ಗೆಲ್ಲಿಸಿಕೊಂಡು ಬಂದಿದ್ದ ಜೆಡಿಎಸ್ ಈಗ ಕಾಂಗ್ರೆಸ್‌ಗೆ ಗೆಲುವು ಬಿಟ್ಟುಕೊಟ್ಟಂತಿದೆ. ದೇವೇಗೌಡರನ್ನು ಹಾವು, ವಿಷ ಎಂದೆಲ್ಲಾ ಬಯ್ದಿದ್ದ ಬಚ್ಚೇಗೌಡರ ಮಗನಿಗೆ ಹೊಸಕೋಟೆಯಲ್ಲಿ ಬೆಂಬಲ ಸೂಚಿಸಿ ಅಭ್ಯರ್ಥಿಯನ್ನೇ ಹಾಕುವುದಿಲ್ಲ ಎಂದಿರುವುದೂ ಜೆಡಿಎಸ್‍‌ನ ಪರಿಸ್ಥಿತಿ ಬಿಂಬಿಸುತ್ತಿದೆ.

ಈ ಎಲ್ಲಾ ಕಾರಣಗಳಿಂದಾಗಿ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ಬಿಜೆಪಿ 7, ಕಾಂಗ್ರೆಸ್ 5 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು ಕಾಣುತ್ತಿದೆ. ಇನ್ನೊಂದು ಕ್ಷೇತ್ರವು ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಒಲಿಯಬಹುದು, ಬಿಜೆಪಿಗೇ ಸಾಧ್ಯತೆ ಹೆಚ್ಚು.

Donate

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.