Women’s day special : ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಶೋಷಣೆಗೆ ಒಳಪಡುತ್ತಿದ್ದಾಳೆ.. ಇದು ನಿಜಾನಾ?

ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಶೋಷಣೆಗೆ ಒಳಪಡುತ್ತಿದ್ದಾಳೆ. ಇಂಥಹ ಮಾತನ್ನ ಮಹಿಳಾ ದಿನಾಚರಣೆಯ ದಿನ ಬಹುತೇಕ ಜನ ನೆನಪಿಸಿಕೊಳ್ತಾರೆ. ತುಂಬಿದ ಸಭೆಗಳಲ್ಲಿ ಪ್ರಸ್ತಾಪ ಮಾಡುತ್ತಾರೆ. ಇದನ್ನ ಬಿಟ್ರೆ ಯಾವುದಾದರೂ ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪ್ರಸ್ತಾಪಿಸುವುದುಂಟು. ಅನ್ಯಾಯ, ಅತ್ಯಾಚಾರ, ಶೋಷಣೆ, ದಬ್ಬಾಳಿಕೆ, ಕೊಲೆ, ಜೀತಪದ್ಧತಿ ಇಂತೆಲ್ಲಾ ಸಾಮಾಜಿಕ ಕಟ್ಟುಪಾಡುಗಳಿಗೆ, ಪುರುಷರ ಹಿಡಿತಕ್ಕೆ ಒಳಗಾಗುವ ಮಹಿಳೆ ನಿಜವಾಗಲೂ ಶೋಷಣೆಗೆ ಒಳಗಾಗುತ್ತಾಳಾ…? ಇಂಥಹದೊಂದು ಪ್ರಶ್ನೆ ಎದುರಾಗಿದ್ದಕ್ಕೆ ಕಾರಣ ಮಹಿಳೆ ಶೋಷಣೆಗೆ ಒಳಪಡುತ್ತಾಳಾ…? ಅಥವಾ ಶೋಷಣೆಗೆ ಒಳಗಾಗುತ್ತಾಳಾ..? ಇವು ಎರಡಕ್ಕೂ ವಿಭಿನ್ನ ಅರ್ಥಗಳಿವೆ.

ಹೌದು… ಮಹಿಳೆ ತಾನು ಮಾಡುವ ಕೆಲಸದ ಸ್ಥಳಗಳಲ್ಲಿ ಒಬ್ಬ ಪುರುಷ ಅಥವಾ ಹಲವಾರು ಪುರುಷರಿಂದ (ಎಲ್ಲರಿಗಿಂತ ವಿಭಿನ್ನವಾಗಿ ಕಾಣುವ/ನಡೆಸಿಕೊಳ್ಳುವ/ಅನುಚಿತವಾಗಿ/ ನಡೆದುಕೊಳ್ಳುವುದು- ನೋಡುವುದು) ಶೋಷಣೆಗೆ ಒಳಪಟ್ಟರೆ ಅದು ಮಹಿಳೆ ಶೋಷಣೆ ಒಳಪಟ್ಟಿದ್ದಾಳೆಂದು ಅರ್ಥ. ಇನ್ನೂ ಶೋಷಣೆಗೆ ಒಳಗಾಗುತ್ತಾಳೆ ಎನ್ನುವುದರ ಅರ್ಥ ಮಹಿಳೆ ತಾನು ತನ್ನೊಂದಿಗಿರುವ ಸಹಪಾಠಿಗಳು ತೋರಿಸುವ ಆಮಿಷಗಳಿಗೆ (ಇತರ ಪುರುಷರು ತೋರಿಸುವ ಆಮಿಷಗಳು ಅಂದರೆ- ತಮ್ಮೊಂದಿಗೆ ಆತ್ಮೀಯವಾಗಿದ್ದರೆ ಅಧಿಕ ಸಂಬಳ, ಅಧಿಕ ಸೌಲಭ್ಯ, ಅಧಿಕ ರಜೆ, ಇತ್ಯಾದಿ ) ಬಲಿಯಾಗಿ ಮೋಸ ಹೋಗುವುದು. ಹೀಗೆ ಎರಡಕ್ಕೂ ವಿಭಿನ್ನ ಅರ್ಥಗಳಿವೆ.

ಇವೆರಡನ್ನು ಅವಲೋಕಿಸಿ ನೋಡಿದಾಗ ಮಹಿಳೆ ಶೋಷಣೆಗೆ ಒಳಪಡುತ್ತಾಳೆ ಎನ್ನುವುದಕ್ಕಿಂತ ಶೋಷಣೆಗೆ ಒಳಗಾಗುತ್ತಾಳೆ ಎನ್ನುವುದೇ ಹೆಚ್ಚು ಎನ್ನಲಾಗುತ್ತದೆ. ಹೌದು… ಇಂದು ಮಹಿಳೆ ಎಲ್ಲಾ ರಂಗದಲ್ಲು ಪುರುಷನಿಗೆ ಸಮಾನಳಾಗಿ ನಿಂತಿದ್ದಾಳೆ. ಕ್ರೀಡೆ, ಸಿನಿಮಾ, ರಾಜಕೀಯ, ಸೇನೆ ಹೀಗೆ ಎಲ್ಲಾ ವಿಭಾಗಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ‘ಮಹಿಳೆ ಅಡುಗೆ ಮನೆಗಷ್ಟೇ’ ಎಂಬ ಪುರುಷ ದಬ್ಬಾಳಿಕೆ ಮೀರಿ ತಾನು ಆಡಳಿತವನ್ನು ನಡೆಸಬಲ್ಲೆ ಎಂದುದನ್ನು ಸಾಧಿಸಿ ತೋರಿಸಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗಿಂತಲು ಮಿಗಿಲು ಎಂಬುದನ್ನು ಆಗಾಗ ಪ್ರೂವ್ ಮಾಡುತ್ತಲೇ ಇದ್ದಾಳೆ. ಇಂಥಹ ಸಂತಸ ಸುದ್ದಿಯ ನಡುವೆ ಮಹಿಳೆ ಅತೀ ಹೆಚ್ಚು ಶೋಷಣೆಗೆ ಒಳಗಾಗುತ್ತಾಳೆ ಯಾಕೆ…? ಇದಕ್ಕೆ ಕಾರಣವೇನು..? ಇಂಥಹ ಪ್ರಶ್ನೆ ಎದುರಾಗುತ್ತದೆ.

ಹಾಗೇ ಒಂದು ಬಾರಿ ಯೋಚಿಸಿ ನಮ್ಮ ದೇಶದಲ್ಲಿ ಬಲವಂತವಾಗಿ ಹೆಣ್ಣಿನ ಮೇಲೆ ಒಬ್ಬ ಪುರುಷ ಎರಗಿದರೆ ಅದು ಕಾನೂನು ಪ್ರಕಾರ ತಪ್ಪು. ಅದಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ತಮ್ಮನ್ನ ರಕ್ಷಿಸಿಕೊಳ್ಳಲು ಪುರುಷರು ಅನ್ಯಮಾರ್ಗದ ಮೂಲಕ ಮಹಿಳೆಯರನ್ನ ಸೆಳೆಯುತ್ತಿದ್ದಾರೆ. ಬಹುತೇಕ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಅವಳಿಗೆ ಆಮಿಷಗಳನ್ನ ಒಡ್ಡಿ ತನ್ನತ್ತ ಸೆಳೆಯುವ ಪುರುಷರೇ ಹೆಚ್ಚಾಗಿ ಬಿಟ್ಟಿದ್ದಾರೆ. ಆಮಿಷೆಗೆ ಒಳಗಾದ ಮಹಿಳೆ ಪುರುಷರ ಯಾವುದೇ ತಪ್ಪುಗಳನ್ನ ಬಹಿರಂಗ ಪಡಿಸುವುದಿಲ್ಲ ಎನ್ನುವ ಕಲ್ಪನೆಯಲ್ಲಿ ಈ ರೀತಿ ಕೆಲಸ ಪುರುಷ ಸಮಾಜ ಮಾಡುತ್ತಿದೆ.

ಇಂತಹ ಶಿಕ್ಷೆಗಳು ನಮ್ಮ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಆಗಿವೆ..? ಶಿಕ್ಷೆ ಒಂದು ಕಡೆ ಇರಲಿ. ಈ ರೀತಿ ಆಮಿಷಗಳಿಗೆ ಒಳಗಾಗುವ ಮಹಿಳೆಯರು ಮೋಸ ಹೋದಲ್ಲಿ ಅದು ಬೆಳಕಿಗೆ ಬರುವುದು ತೀರಾ ಕಡಿಮೆ. ಒಂದು ವೇಳೆ ಬಂದರೂ ಯಾವ ಮಹಿಳೆಯೂ ತನ್ನ ಮೇಲೇ ಇಂಥಹ ಶೋಷಣೆ ಆಗಿದೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಕಾರಣ ನಮ್ಮದು ಸಾಂಪ್ರದಾಯಿಕವಾದಂತಹ ದೇಶವಾಗಿರುವುದರಿಂದ ಮರಿಯಾದೆ ಪ್ರಶ್ನೆಗೆ ಅಂಜಿ ಅದನ್ನ ಹಾಗೇ ಮುಚ್ಚಿಟ್ಟಿಕೊಳ್ಳಲಾಗುತ್ತಿದೆ. ಇದು ದೌರ್ಬಾಗ್ಯವೇ ಸರಿ.

ಹೀಗೆ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ ಮತ್ತು ಒಳಪಡುತ್ತಿದ್ದಾಳೆ ಕೂಡ. ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿದೆ. ಅದನ್ನ ಕಣ್ಮರೆಯಾಗಿ, ಕಗ್ಗತ್ತಲಲ್ಲಿ ಮುಚ್ಚಿಡಲಾಗುತ್ತಿದೆ. ಕೊಲೆ ಮಾಡುವುದು ಎಷ್ಟು ತಪ್ಪೋ ಕೊಲೆಗೆ ಸಹಾಯ ಮಾಡುವುದೂ ತಪ್ಪೇ.. ಹೀಗೆ ಅಮಾಯಕ ಮಹಿಳೆಯರಿಗೆ ಆಮಿಷಗಳನ್ನ ಒಡ್ಡಿ, ಅವರ ಅಸಹಾಯಕತೆಯನ್ನು ಬಳಸಿಕೊಂಡು ತಮ್ಮತ್ತ ಸೆಳೆಯುವ ಪ್ರತಿಯೊಬ್ಬ ಪುರುಷರದ್ದೂ ತಪ್ಪೇ. ಇದನ್ನ ಬಹಿರಂಗವಾಗಿ ಮಹಿಳೆಯರು ಹೇಳಿಕೊಳ್ಳುವಂತಾಗಬೇಕು. ಮಹಿಳೆಯರು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಆಮಿಷ ಒಡ್ಡಿ ಆ ಮೂಲಕ ತಮ್ಮ ಆಸೆ ತೀರಿಸಿಕೊಳ್ಳುವಂತಹ ಪುರುಷರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕೆ ಉದ್ಯೋಗಸ್ಥ ಮಹಿಳೆಯರು ಮುಂದಾಗಬೇಕಿದೆ.

ಇದಕ್ಕೆ ಸರ್ಕಾರ ಕೂಡ ಕೈಜೋಡಿಸಬೇಕಿದೆ. ಅಂದಾಗ ಮಾತ್ರ ದೇಶದಲ್ಲಿ ಹೆಣ್ಣಿಗಿರುವ ಸ್ಥಾನ ಮಾನ ಗೌರವ ಉತ್ತುಂಗಕ್ಕೇರಲು ಸಾಧ್ಯ.

– ಸುನೀತಾ ಭಂಡಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights