ಪ್ರವಾಸ ಕಥನ: ಸುತ್ತೋಣ ಬನ್ನಿ ‘ಪೊನ್ಮುಡಿ’ ಎಂಬ ಸಹ್ಯಾದ್ರಿಯ ಶಿಖರವನ್ನ!

ಪೊನ್ಮುಡಿ ಮಲೆಗಳಲ್ಲಿ ಹುದುಗಿಹೋಗಿರುವ ಹಚ್ಚ ಹಸುರಿನ ತಾಣ. ಪೊನ್ಮುಡಿ  ಎಂದರೆ ಚಿನ್ನದ ಕಿರೀಟವೆಂದೇ ಅರ್ಥ. ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಈ ಸಣ್ಣ ಗಿರಿಧಾಮದಲ್ಲಿ ಒಂದಿಡೀ ದಿನ ಓಡಾಡುತ್ತ ಕಾಲ ಕಳೆದರೆ ಒಂದು ದಶಕದ ಹುಮ್ಮಸ್ಸು ತನುವಿನಲ್ಲಿ ಇಳಿದುಬಿಡುತ್ತದೆ. ನೀವಿದನ್ನು ನೋಡಬೇಕೆನಿಸಿದರೆ ಮಳೆಗಾಲದಲ್ಲಿ ಅಥವಾ ಮಳೆಗಾಲದ ನಂತರದ ಕೆಲವು ತಿಂಗಳಲ್ಲಿ ಅನಂತಪದ್ಮನಾಭನ ಸನ್ನಿಧಾನ ತಿರುವನಂತಪುರದಿಂದ ಐವತ್ತು ಕಿಮೀ ದೂರ ಸಹ್ಯಾದ್ರಿ ಪರ್ವತದ ನೆಯ್ಯಾರ್ ಬೆಟ್ಟಗಳನ್ನು
ಏರಿ ಬರಬೇಕು.
ಕನ್ಯಾಕುಮಾರಿ ಬಿಟ್ಟು ಪೊನ್ಮುಡಿ ತಲುಪುವ ಹಾದಿಯೇ ಒಂತರದಲ್ಲಿ ಸಣ್ಣ ಸಣ್ಣ ಅಚ್ಚುಕಟ್ಟಿಲ್ಲದ ದಾರಿಯ ಪಯಣ. ಈ ಪ್ರವಾಸದಲ್ಲಿ ಕ್ರಮಿಸಿದ ಹಾದಿ 150ಕಿಮೀ ಅಷ್ಟೇ. ಆದರೆ, ಮಳೆಗಾಲದ ನಂತರದ ದಿನಗಳಲ್ಲಿ ನೋಡಿದ ನಳನಳಿಸುವ ಹಸಿರಿನ ರಾಶಿ, ತೂಗುವ ತೆಂಗಿನ ಮರಗಳ ಸಾಲು, ರಬ್ಬರ್ ಚಹಾ ತೋಟಗಳ ನಡುವಿನ ಸಣ್ಣ ಹಾದಿ, ಕೈಗೆ ಸಿಗುವ ಸಣ್ಣ ಝರಿಗಳು, ಹಾದು ಹೋದ ದಾರಿಯಲ್ಲಿ ಅಡ್ಡ ಬಂದು ನಿಂತು ಸ್ಪರ್ಶಿಸಿ ಹೋಗುವ ಹಿನ್ನೀರಿನ ಜಲಧಾರೆ, ದಾರಿಯಂಚಿನಲಿ ನಲಿದು ಹೋಗುವ ಸಣ್ಣ ತೊರೆಗಳು, ತುಂಬಿ ತುಳುಕುವ ಕೆರೆಗಳು, ಸದ್ದು ಮಾಡುವ ಜಲಪಾತ, ಜಲಪಾತದಾಚೆಗೆ ಭೋರ್ಗರೆಯುತ್ತಾ ಹರಿಯುವ ನೀರು, ಮಳೆಯಲ್ಲಿ ನೆಂದುಹೋದ ಹಳ್ಳಿಯ ಮನೆಗಳು, ತುಂತುರು ಹನಿಗಳ ನಡುವೆ ಶಾಲೆಗೆ ಹೊರಟ ಮಕ್ಕಳು, ಮಳೆಯ ಹನಿಗಳಿಗೆ ಕೈ ಅಡ್ಡ ಹಿಡಿದು ಶುಚೀಂದ್ರಂನ ದೇಗುಲದ ಬಳಿಯ ಕೊಳದಲ್ಲಿ ಪೂಜೆಗೆ ಕುಳಿತ ಹೆಣ್ಣುಮಕ್ಕಳು, ಅವರ ಜೊತೆಗೆ ಕೈ ಮುಗಿದು ನಿಂತ ಒಂದಷ್ಟು ಜನರು, ತನ್ನ ಪಾಡಿಗೆ ತಾನು ನಿಂತಿರುವ ಆಂಜನೇಯ, ದಾರಿಯುದ್ದಕ್ಕೂ ತಳ್ಳುಗಾಡಿಗಳಲ್ಲಿ ಸಿಗುವ ಬಿಸಿ ಕಾಫಿ •••ಒಂದೆರಡಲ್ಲ ಬದುಕೆಂದರೆ ಅನವರತ ಅನುಭವದ ಯಾನ.
No photo description available.
ಕನ್ಯಾಕುಮಾರಿ ಬಿಟ್ಟು ದಾರಿಗೆ ಬಿದ್ದವರಿಗೆ ಮೊದಲು ಸಿಕ್ಕಿದ ಊರೇ Suchindram. ಇಲ್ಲೊಂದು ಅತೀ ಪುರಾತನವಾದ ತನುಮಾಲಯನ್ ಎಂಬ ಶಿವನ ದೇವಾಲಯವೂ, ಆಂಜನೇಯನ ಬೃಹತ್ ವಿಗ್ರಹವೂ ಇದೆ. ದೇವರ ರಥಬೀದಿಯಲ್ಲಿ ಒಂದು ಸುತ್ತು ಸುತ್ತಿ ಕಡ್ಲೇ ಮಿಠಾಯಿ ಖರೀದಿಸಿ, ನಾಗರಕೋಯಿಲ್ ಕಡೆಗೆ ಹೊರಟೆವು.
ಹೆಸರಿಗೆ ಕನ್ಯಾಕುಮಾರಿ ಜಿಲ್ಲೆಯಾದರೂ ಜಿಲ್ಲಾ ಕೇಂದ್ರ ಸ್ಥಳ ನಾಗರಕೋಯಿಲ್:
ಊರ ಹೆಸರೇ ನಾಗದೇವನ ದೇವಾಲಯ ಎಂದಿರುವ ಕಾರಣದಿಂದಲೋ ಏನೋ ಇಡೀ ಪಟ್ಟಣವು ಕಿಷ್ಷಿಂಧೆಯಂತೆ ಸಂದಿಗೊಂದಿಗಳಲ್ಲಿ ಅಡಗಿ ಕುಳಿತಿದೆ. ವ್ಯವಹಾರದ ಕಾರಣದಿಂದ ಬೆಳೆದುಹೋಗಿರುವ ಈ ಊರಿನ ತುಂಬ ಜನಸಂದಣೆ, ನಾಗ ದೇವನ ಗುಡಿಯ ಬಳಿಯೂ ಅದೇ ಸ್ಥಿತಿ.
ಅಲ್ಲಿಂದ ಮುಂದೆ ನಾವು ನೋಡಿದ್ದು, ಮರವನ್ನು ಹೆಚ್ಚು ಬಳಸಿ ಕಟ್ಟಿದ ಅರಮನೆ ಪದ್ಮನಾಭಪುರಂ ಪ್ಯಾಲೆಸ್. ತಿರುವಂಕೂರು ಪ್ರದೇಶವನ್ನು ಹಿಂದೆ ಆಳ್ವಿಕೆ ಮಾಡಿದ ಇರವಿವರ್ಮ ಕುಲಶೇಖರ ಪೆರುಮಾಳ್ ರಾಜನು 1601ರಲ್ಲಿ ನಿರ್ಮಾಣ ಮಾಡಿದ ಅರಮನೆ. ಈ ನಗರವು ಮೊದಲು ತಿರುವಂಕೂರು ಅರಸರ ರಾಜಧಾನಿಯಾಗಿತ್ತು, ಕಾಲಕ್ರಮೇಣ ರಾಜಧಾನಿಯು ತಿರುವನಂತಪುರಕ್ಕೆ ಸ್ಥಳಾಂತರವಾಯಿತು. ಅರಮನೆಯ ತುಂಬಾ ಈಕೆ ರಾಜಕುಮಾರಿಯಂತೆ ಓಡಾಡಿ, ಹತ್ತಿಳಿದು ಬಂದಳು. ನೋಡಲು ಅಷ್ಟು ಬೃಹದಾಕಾರದ ಅರಮನೆಯಲ್ಲವಾದರೂ ರಾಜನ ಒಡ್ಡೋಲಗ, ರಾಣಿಯರ ಅಂತಃಪುರ, ಸಭಾ ಮಂದಿರ, ಮದ್ದು ಗುಂಡಿನ ಜಾಗಗಳು ನೋಡುವಂತಿವೆ. ಕೇರಳ ರಾಜ್ಯಕ್ಕೆ ಇದೊಂದು ಐತಿಹಾಸಿಕ ಸ್ಮಾರಕವಾಗಿ ಉಳಿದಿದೆ. ಪದ್ಮನಾಭಪುರಂ ಊರು ಈಗಿನ ತಮಿಳುನಾಡಿಗೆ ಸೇರಿದ್ದರೂ ಅರಮನೆಯ ನಿರ್ವಹಣೆ ಕೇರಳ ರಾಜ್ಯಕ್ಕೆ ಸೇರಿದೆ.
ಮಾತೂರುತೊಟ್ಟಿಪಾಲಂ ಒಂದು ಸಣ್ಣ ಪ್ರವಾಸದ ಜಾಗ. ಹತ್ತಿರದ ಡ್ಯಾಮಿನಿಂದ ಹರಿದು ಬರುವ ನೀರನ್ನು ಸಾಗಿಸುವ ಹಂತದಲ್ಲಿ ಮಧ್ಯದಲ್ಲಿ ಪಹ್ರಾಳಿ ನದಿ ಅಡ್ಡ ಬರುತ್ತದೆ. ಹೀಗಾಗಿ ನೀರನ್ನು ಆ ಕಡೆಗೆ ದಾಟಿಸುವ ಸಲುವಾಗಿ ಇಲ್ಲಿ ಎತ್ತರದ ಮೇಲ್ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಒಂದು ಪಕ್ಕದಲ್ಲಿ ನೀರು ಹರಿದುಹೋಗಲು ಮತ್ತು ಇನ್ನೊಂದು ಪಕ್ಕದಲ್ಲಿ ಜನರು ಓಡಾಡಲು ಒಂದರ್ಧ ಕಿಮೀ ಉದ್ದದ ವ್ಯವಸ್ಥೆ ಇದೆ.
No photo description available.
ವಾಂಗ ಸಾರ್ ಇಂಗೆ ನಲ್ಲ ಹೋಮ್ ಸ್ಟೇ ಇರುಕ್ಕಿರುದು, ಇವತ್ತು ಇಲ್ಲೇ ತಂಗಿದ್ದು ಹೋಗಿ, ನಲ್ಲ ನಾಟ್ಟು ಕೋಳಿ ಕೋಳಂಬು ಮಾಡಿಕೊಡುತ್ತೇನೆಂದು ದಂಪತಿಗಳಿಬ್ಬರು ಸ್ವಲ್ಪ ಹೊತ್ತು ತಲೆ ತಿಂದರು. ಅಲ್ಲೇ ಹತ್ತಿರದಲ್ಲಿದ್ದ ಮನೆಯ ಹಿಂಭಾಗದ ತೋಟದ ಮೂಲೆಯಲ್ಲಿ ಒಂದೆರಡು ರೂಮುಗಳನ್ನು ನಿರ್ಮಿಸಿ ಆದಾಯಕ್ಕೊಂದು ದಾರಿ ಮಾಡಿಕೊಂಡಿದ್ದರು. ಅಷ್ಟರಲ್ಲಿ ಅವರ ಚಿಕ್ಕ ವಯಸ್ಸಿನ ಮಗಳು ಒಂದು ನಾಟಿ ಕೋಳಿಯನ್ನು ಹಿಡಿದು ಕೊಂಡು ಬಂದಳು. ಅದನ್ನು ತೋರಿಸುತ್ತಾ ಇದೇ ನಾಟಿ ಕೋಳಿ ಸಾರು ಮಾಡಿಕೊಡುವುದಾಗಿ ಒತ್ತಾಯ ಮಾಡಿದರು.
ಆ ಹುಡುಗಿಯನ್ನು ಹತ್ತಿರ ಕರೆದ ಇವಳು ಪರ್ಸಿನಿಂದ ಒಂದೆರಡು ಚಾಕಲೇಟ್ ಕೊಟ್ಟು, ಅವಳ ಹೆಸರು, ಓದು ಕೇಳಿ ನಲ್ಲ ಪಡಿ ಎಂದು ಹೇಳಿ, ನಾವು ಮುಂದೆ ಹೋಗಬೇಕಾಗಿದೆ ಎಂದು ತಿಳಿಸಿ ಅಲ್ಲಿಂದ ಹೊರಟೆವು. ನನಗ್ಯಾಕೋ ನಾಟಿ ಕೋಳಿಯನ್ನು ಕತ್ತರಿಸಿ ರೋಸ್ಟ್ ಮಾಡಿಸಿಕೊಂಡು ಒಂದು ಬಾಕ್ಸಿನಲ್ಲಿ ಹಾಕಿಸಿಕೊಂಡು ಹೋಗಬೇಕೆಂದು ಮನಸ್ಸಾಗುತ್ತಿತ್ತು.
#ಈ ಜಾಗದಿಂದ ನೋಡಿದರೆ ಕಣ್ಣು ಸೋಲುವವರೆಗೂ ತೆಂಗಿನಮರಗಳು ತೊನೆಯುತ್ತಾ ನಿಂತಿವೆ. ಸುತ್ತಲೂ ಮರಗಳಿಂದ ಆವೃತವಾದ ಈ ಸೇತುವೆಯು ಕಣೆವೆಯಲ್ಲಿ ನಿಂತಿರುವ ಜೋಕಾಲಿಯಂತೆ ಕಾಣುತ್ತಿತ್ತು. ಹತ್ತಿರದಲ್ಲಿನ ಸಣ್ಣ ಹೋಟೆಲಿನಲ್ಲಿ ಬಿಸಿಯಾದ ಕಾಫಿ ಕುಡಿಯುತ್ತಾ ನಿಂತೆ. ಇಲ್ಲಿ ಹಲವು ತಮಿಳು ಸಿನೆಮಾಗಳ ಶೂಟಿಂಗ್ ನಡೆದಿದೆ ಎಂದು ಕಾಫಿ ಕೊಟ್ಟವರು ಹೇಳಿದರು.
ಮುಂದೆ ಸಿಕ್ಕ ಸಣ್ಣ ಟೌನ್ ಕುಲಶೇಖರಂ. ಪದ್ಮನಾಭಪುರದ ಅರಸ ಕುಲಶೇಖರ ಪೆರುಮಾಳನ ಹೆಸರೇ ಈ ಊರಿಗೆ ಬಂದಿರಬೇಕೆಂದು ಕೊಂಡೆವು. ಇಡೀ ಊರು ಮಳೆಯ ಕಾರಣದಿಂದ ಇನ್ನೂ ತೇವದಿಂದ ಕೆಸರಿನಿಂದಲೇ ಕೂಡಿ ಪಿಚಿಪಿಚಿ ಎನ್ನುವಂತಿತ್ತು. ಸದಾ ಜನರಿಂದ ಕೂಡಿರುವ ಕುಲಶೇಖರದಲ್ಲಿ ಊರ ತುಂಬಾ ಬೈಕುಗಳ ಹಾವಳಿ, ಕನ್ಯಾಕುಮಾರಿ ಜಿಲ್ಲೆಯಲ್ಲಿ ಅತ್ಯಂತ ಪ್ರಮುಖವಾದ ವಾಣಿಜ್ಯ ಪಟ್ಟಣವಾಗಿದ್ದು ರಬ್ಬರ್ ವ್ಯಾಪಾರವು ಮುಖ್ಯವಾಗಿದೆ. ಇಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಮತ್ತು ಹಿಂದುಗಳ ನಾಡಾರ್ ಜನರು ಸಮಾನವಾಗಿದ್ದು ತಮಿಳರು, ಮಲೆಯಾಳಿಗಳು ಸಮಾನ ಸಂಖ್ಯೆಯಲ್ಲಿದ್ದಾರೆ.
ದಾರಿಯಲ್ಲಿ ನಮಗೆ ಸಿಕ್ಕ ಕೋಡೆಯಾರ್ ನದಿಗೆ ಹತ್ತಿರದಲ್ಲೇ ಪೇಚಿಪರೈ ಎಂಬಲ್ಲಿ ಸಣ್ಣ ಡ್ಯಾಮ್ ಕಟ್ಟಿದ್ದು, ಇದನ್ನು 1906ರಲ್ಲಿ ಹಂಫ್ರೀ ಅಲೆಕ್ಸಾಂಡರ್ ಮಿಂಕಿನ್ ಎನ್ನುವ ಯೂರೋಪಿಯನ್ ಇಂಜನಿಯರ್ ತಿರುವಂಕೂರು ಅರಸರ ಕಾಲದಲ್ಲಿ ನಿರ್ಮಾಣ ಮಾಡಿದ ದಾಖಲೆಗಳಿವೆ. ಡ್ಯಾಮಿನ ಮುಂದೆ ಆತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
No photo description available.
ಈ ಡ್ಯಾಮಿನ ಉತ್ತರದಲ್ಲಿ ಕಡಿದಾದ ಪರ್ವತಗಳಿದ್ದು ಹಸಿರು ಸಾಗರದಂತೆ ಕಾಣುತ್ತದೆ. ಇಲ್ಲಿಂದಾಚೆಗೆ ಯಾವುದೇ ಜನವಸತಿ ಇಲ್ಲ. ಸಹ್ಯಾದ್ರಿ ಪರ್ವತಗಳ ಕೊಂಡಿಯಂತಿರುವ ಈ ಪರ್ವತಗಳ ಆಚೆಗೆ ತಿರುನೆಲ್ವೇಲಿ, ತೆನ್ಕಾಶಿ, ಕುಟ್ರಾಲಮ್ ಗಳಿದ್ದು
ಅಲ್ಲಿಗೆ ತಲುಪಲು ಸುತ್ತಿ ಬಳಸಿಕೊಂಡು ಹೋಗಬೇಕು.
ಕೊಡೆಯಾರ್ ನದಿ ಮುಂದೆ ಹರಿದು ತಿರುಪರಪ್ಪು ಎನ್ನುವ ಕಡೆ ಸೊಗಸಾದ ನೀರಿನ ವಿಸ್ತಾರವನ್ನು ನಿರ್ಮಿಸಿದೆ. ಅದರ ಪಕ್ಕದಲ್ಲಿ ಮಹಾದೇವನ ಕೋವಿಲ್ ಇದೆ. ಅಲ್ಲಿಂದ ತುಸು ದೂರದಲ್ಲಿ ನೀರಿನ ನಡುವೆ ಕಲ್ಲಿನ ಮಂಟಪವಿದ್ದು ಅಲ್ಲಿಯವರೆಗೆ ನಡೆದು ಹೋಗಿ ಕುಳಿತು ಬರಬಹುದು. ದೇವಾಲಯದ ಮುಂದೆ ದೇವಸ್ಥಾನದ ಆನೆಯೊಂದನ್ನು ಕಟ್ಟಿಹಾಕಿದ್ದು, ಅದರ ಪಕ್ಕದಲ್ಲಿ ಸಾಗಿದರೆ ಭೋರ್ಗರೆಯುವ #TirparappuWaterFalls ಜಲಪಾತವಿದೆ. ಮಳೆಗಾಲದಲ್ಲಿ ಅದರ ರಭಸವನ್ನು ದೂರದಿಂದಲೇ ನೋಡಿ ಆನಂದಿಸಬೇಕು.
ಅದರ ಕೆಳಗೆ ನಿಂತು ನೀರಿನ ಅಭಿಷೇಕದಲ್ಲಿ ತೊಯ್ದು ಹೋಗಬೇಕೆಂದರೆ ನೀರು ಕಡಿಮೆ ಇರುವಾಗ ಹೋಗಬೇಕು. ಅಲ್ಲಿ ಪೊಲೀಸರಿದ್ದು ನಿಗಾ ವಹಿಸುತ್ತಾರೆ. ಕೆಳಗೆ ನಿಂತು ರಭಸದ ನೀರಿನಲ್ಲಿ ಮೀಯಲು ಸ್ಟೀಲ್ ಪೈಪುಗಳ ಆಸರೆ ಮಾಡಲಾಗಿದೆ. ಅಲ್ಲಿ ಹೆಚ್ಚು ಜನರೇನೂ ಇರಲಿಲ್ಲ. ಅಲ್ಲಿ ಗಂಡಸರು ಹೆಂಗಸರಿಗೆ ಪ್ರತ್ಯೇಕ ಭಾಗಗಳಿದ್ದು ಅಲ್ಲಿಯೇ ನಿಲ್ಲಬೇಕು. ನೀವೇನೇ ಗಂಡ ಹೆಂಡತಿ ಸಂಬಂಧ ಹೇಳಿದರೂ ಏನೂ ನಡೆಯುವುದಿಲ್ಲ.
PONMUDI AND BRAEMORE: - TRAVEL GODS OWN COUNTRY
ಹೊರಗೆ ಮರದ ಕೆಳಗೆ ಸಕಲ ಗಿಡ ಮೂಲಿಕೆಗಳು, ಬಣ್ಣ ಬಣ್ಣದ ತೈಲವನ್ನು ಗುಡ್ಡೆ ಹಾಕಿಕೊಂಡವನ ಮುಂದೆ ಕುಳಿತು ಅವನ ಕೊಟ್ಟ ಸುಗಂಧ ಮಿಶ್ರಿತ ಬಿಸಿ ಗಾಳಿಗೆ ತಲೆಯೊಡ್ಡಿದೆವು. ಇನ್ನು ಮುಂದೆ ಶೀತ ಚಳಿ ಒಂದೂ ಬರುವುದಿಲ್ಲವೆಂದು ಆಶ್ವಾಸನೆ ನೀಡಿದ. ಅವನು ನೀಡಿದ ಬಿಸಿಯು ಮನಸ್ಸಿಗೆ ಹಿತವಾಗಿತ್ತು.
ನೀರಿನಿಂದ ಮಿಂದ ಕಾರಣಕ್ಕೆ ಹಸಿವು ಹೆಚ್ಚಾಗಿತ್ತು. ಹತ್ತಿರದಲ್ಲಿದ್ದ ಕಡೈಯಲ್ ಊರಿನಲ್ಲಿ ಬಾಳೆ ಎಲೆಯ ಮೇಲೆ ಬಡಿಸಿದ ಸೊಗಸಾದ ಬಿಸಿ ಊಟದ ನಂತರ ನಾವು ಮತ್ತೆ ನಿಲ್ಲಲೇ ಬೇಕೆನಿಸಿದ್ದು ಚಿತ್ತಾರ್_ಡ್ಯಾಮಿನ ಹಿನ್ನೀರಿನ ಸಮೀಪದಲ್ಲಿ. ರಸ್ತೆಗೆ ಅಂಟಿಕೊಂಡಂತೆ ಇದ್ದ ಹಿನ್ನೀರಿನಲ್ಲಿ ನೀಳವಾಗಿ ಹರಡಿಕೊಂಡ ಮಣ್ಣು ದಿಬ್ಬದ ಮೇಲೆ ಸಾಕಷ್ಟು ದೂರದವರೆಗೂ ನಡೆದಾಡಿ ಬಂದೆವು. ಎರಡು ಬದಿಯಲ್ಲಿ ನಿಶ್ಚಲವಾಗಿ ನಿಂತ ನೀಲಿ ಬಣ್ಣದ ನೀರು. ನೀರಿನೊಳಗೆ ಬೆರೆತುಹೋದ ದೂರದ ಬೆಟ್ಟಗಳ ನೆರಳಿನ ಪ್ರತಿಬಿಂಬ. ಅವಿಸ್ಮರಣೀಯ ಅನುಭವ ನೀಡುವ ನೀರು, ಪರ್ವತ, ಪ್ರತಿಬಿಂಬಗಳ ನಡುವಿನಲ್ಲಿ ಕೆಲವು ಹೊತ್ತು ಅಲ್ಲೇ ಕುಳಿತೆವು. ಜೊತೆಗೆ ಸಣ್ಣಗೆ ಬೀಸುವ ತೆಳುಗಾಳಿ, ಅಲ್ಲಲ್ಲಿ ಒಂದೆರಡು ಹನಿಗಳು. ಐರಾವತವೇರಿ ಬಂದು ವಿಶ್ರಾಂತಿಗೆ ನಿಂತಂತಹ ದಿವ್ಯವಾದ ಅಮೋಘ ಸನ್ನಿವೇಶ. ಪ್ರಶ್ನೆ ಕೇಳಿ ಉತ್ತರ ಪಡೆಯಲು ಮನಸ್ಸು ಬಾರದ ಪರಿಸರ. ಮೌನವೇ ನಿಜವಾದ ಸಾಕ್ಷಾತ್ಕಾರ.
No photo description available.
ಇಲ್ಲಿಂದ ಹೊರಡಲೇ ಬೇಕಾದ ಅನಿವಾರ್ಯತೆಯಲ್ಲಿ ಕೇರಳ ಗಡಿದಾಟಿ ಬಂದೆವು. ಸಿಕ್ಕಿದ್ದು ಸಣ್ಣ ಊರು ವೆಲ್ಲರಡಾ. ಎರಡು ರಾಜ್ಯಗಳ ನಡುವೆ ಗಡಿಯನ್ನು ಗುರುತಿಸಲು ಸಾಧ್ಯವಿಲ್ಲದ ಹಸಿರುಕಾಡು. ಮನುಷ್ಯರು ಗಡಿಗಳನ್ನು ನಿರ್ಮಿಸಿಕೊಂಡರೂ ನಾವು ಗಡಿ ಮೀರಿ ಬೆಳೆದು ತೋರುತ್ತೇವೆ ಎಂಬಂತೆ ಎರಡೂ ಗಡಿಗಳಲ್ಲಿ ಹಸಿರು ವನ ಬೆಳೆದು ನಿಂತಿತ್ತು.
ಮುಂದೆ ಸಿಕ್ಕಿದ್ದು ನೆಯ್ಯಾರ್ ಡ್ಯಾಮಿನ ಹಿನ್ನೀರು ತುಸು ದೂರದಲ್ಲಿ ನೀಲಿ ನೀರಿನಿಂದ ಕಂಗೊಳಿಸುತ್ತಿತ್ತು. ಇಲ್ಲಿಗೆ ಸಮೀಪದಲ್ಲಿ ಶಿವಾನಂದ ಯೋಗ ಆಶ್ರಮ ಮತ್ತು ಶಿವಾನಂದ ವೇದಾಂತ ಧನ್ವಂತರಿ ಆಶ್ರಮಗಳಿವೆ. ನಿಸರ್ಗದ ಪರಿಸರದಲ್ಲಿ ಯೋಗ ಶಿಕ್ಷಣ ಪಡೆಯುವ ಸೌಲಭ್ಯವಿದೆ.
ಇಲ್ಲಿಂದ ಮುಂದಕ್ಕೆ ನೆಡುಮಂಗಾಡನ್ನು ಎಡಕ್ಕೆ ಬಿಟ್ಟು ಕಲ್ಲಾರ್ ವರೆಗೆ ಬೆಟ್ಟವನ್ನು ಏರುತ್ತಾ ಹೋದೆವು. ಮುಂಗಾರಿನ ಮಳೆ ರಸ್ತೆಯನ್ನು ಅಲ್ಲಲ್ಲಿ ಘಾಸಿ ಮಾಡಿತ್ತು. ರಸ್ತೆಯಲ್ಲಿ ನೀರು ಸಣ್ಣಗೆ ಹರಿದು ಕೊರಕಲು ಸೃಷ್ಟಿ ಮಾಡಿದ್ದವು. ಕಾರಿನ ವೈಪರಿನ ರೆಕ್ಕೆಗಳು ನಿಧಾನವಾಗಿ ಓಡುತ್ತಿದ್ದವು.
ಕಾರಿನ ವೇಗವೂ ರಸ್ತೆಯ ನಿಯಂತ್ರಣದಲ್ಲಿತ್ತು. ಮರದಿಂದ ಬೀಳುವ ಹನಿಗಳು ವಿಂಡ್ ಶೀಲ್ಡಿನ ಮೇಲೆ ಚಡಪಡಿಸುತ್ತಿದ್ದವು. ನಂತರದಲ್ಲಿ ದಿಡೀರನೇ ಎದುರಾಗುವ ಇಪ್ಪತ್ತೆರಡು ಏರ್ ಪಿನ್ ತಿರುವುಗಳನ್ನು ಏರಿದ ನಂತರ ಅಂತಿಮ ತಾಣ ಸಿಕ್ಕೇ ಬಿಟ್ಟಿತು. ಆಗಷ್ಟೇ ಸಂಜೆಯ ಸಮಯ, ಅಲ್ಲಲ್ಲಿ ಉದುರುವ ಸಣ್ಣ ಹನಿಗಳು. ರೂಮಿನ ಒಳಹೊಕ್ಕಿದ ನಂತರ ಬಾಲ್ಕಾನಿಯಲ್ಲಿ ಕುಳಿತು ದೂರದವರೆಗೂ ನೋಡುತ್ತಾ ನಿಂತೆವು. ಕೇವಲ ಕೆಲವೇ ಜನರಿದ್ದರು. ಎಲ್ಲೆಲ್ಲೂ ಮೋಡಗಳ ನರ್ತನ, ಅವುಗಳ ಮರೆಯಲ್ಲಿ ಅಲ್ಲಲ್ಲಿ ಮರೆಯಾದ ಬಿಸಿಲಿನ ತಿಳಿ ಬೆಳಕು. ಬೆಳಕು ಕಂದುವ ಹೊತ್ತಿಗೆ ಚಳಿ ಬೀಸಿ ಬಂದ ಅನುಭವ. ಇಬ್ಬರೂ ಸ್ವೆಟರ್ ಏರಿಸಿಕೊಂಡು ಮಂಕಿ ಕ್ಯಾಪ್ ಧರಿಸಿ ಊರ ಕೋತಿಗಳಂತೆ ಕುಳಿತು, ಕೆಟಿಡಿಸಿ ಗೋಲ್ಡನ್ ಪೀಕ್ ರಿಸಾರ್ಟಿನಲ್ಲಿ ಕೊಟ್ಟ ಬಿಸಿ ಬಿಸಿ ಆನಿಯನ್ ಪಕೋಡ, ಚಹಾ ಸವಿಯುತ್ತಾ ಕುಳಿತೆವು.
May be an image of 1 person and text that says "action"
ಸುಮಾರು ಹೊತ್ತು ಹೀಗೇ ಕುಳಿತೇ ಇದ್ದೆವು. ಊರುಕೇರಿ ಮನೆಗಿನೆ ಆಫೀಸು ಬಾಸು ಮಳೆಮೋಡ ಹೀಗೆ ಅಲ್ಲ ಸಲ್ಲದ ಕೊನೆಯೇ ಇಲ್ಲದ ಮಾತುಗಳು ಮೂಡುತ್ತಲೇ ಇದ್ದವು. ಈ ಮಳೆಗಾಲದ ನಂತರದಲ್ಲಿ ಇಬ್ಬರೂ ಇಲ್ಲಿ ಬಂದು ಕುಳಿತ ಕಾರಣವಾದರೂ ಏನೆಂದು ಪತ್ತೆ ಹಚ್ಚುವುದು ಇಬ್ಬರಿಗೂ ಸಾಧ್ಯವಾಗದೇ ಕಪ್ಪಿಟ್ಟ ಆಕಾಶವನ್ನು ನೋಡುತ್ತ ಲೊಚಗುಟ್ಟಿ ಕುಳಿತೆವು. ಇಬ್ಬರ ನಡುವಿನ ಅನಿರ್ವಚನೀಯ ಸಂಬಂಧದ ಎಳೆಗಳನ್ನು ಬಲವಾಗಿ ಎಳೆದರೆ ಎಲ್ಲಿ ಸ್ನೇಹದ ತಂತುಗಳು ಹರಿದು ಹೋಗಬಹುದೆಂಬ ಗಾಬರಿಗೆ ಬಿದ್ದವರಂತೆ ಮಾತುಗಳು ಎಚ್ಚರದಿಂದ ಮೂಡುತ್ತಿದ್ದವು. ನಡುವೆ ನೀರವ ಮೌನ.
ನಾಳೆ ಇಡೀ ದಿನ ಪೊನ್ಮುಡಿಯನ್ನು ಒಂಚೂರು ಬಿಡದಂತೆ ಸುತ್ತಿ ಬರಬೇಕೆಂದು ಯೋಜನೆ ಹಾಕಿ ಮಲಗಿದೆವು. ಸುಮಾರು ಸರಿ ಹೊತ್ತಿನಲ್ಲಿ ದೂರದಲ್ಲಿ ಆನೆಗಳು ಘೀಳಿಡುವ ಸದ್ದು ಮೆದುವಾಗಿ ತೇಲಿ ಬರುತ್ತಿತ್ತು. ಮುಂಜಾನೆಯ ಚುಮುಚುಮು ಚಳಿಯಲ್ಲಿ ಕೊಡೆ ಹಿಡಿದು ನಡೆದೆವು. ಸಣ್ಣ ಕಪ್ಪೆಗಳು, ಹುಳುಹುಪ್ಪಟೆಗಳು ಕಾಲಿಗೆ ಸಿಗದೆ ಕುಪ್ಪಳಿಸುತ್ತಿದ್ದವು. ಡಾಮರು ರಸ್ತೆಯ ಮೇಲೆ ತೆಳುವಾಗಿ ಹರಿಯುವ ನೀರಿನಲ್ಲಿ ಬೆರಳು ಆಡಿಸುತ್ತಾ ಇವಳು ಕುಳಿತಳು. ಪೊನ್ಮುಡಿಯ ಟಾಪ್ ಪಾಯಿಂಟ್ ವರೆಗೂ ನಡೆದು ಹೋಗಿ ಅಲ್ಲಿನ ಕಲ್ಲಿನ ಮೇಲೆ ದೂರದ ದಿಗಂತದವರೆಗೂ ದಿಟ್ಟಿಸುತ್ತಾ ಕುಳಿತೆವು.
ಮುಂದಿನ ಕಲ್ಲು ಗುಡ್ಡದ ಮೇಲೆ ನಮಗಿಂತ ಮೊದಲೇ ಬಂದು, ಯಾರೋ ಕುಳಿತಂತೆ ಕಂಡಿತು. ಗುಡ್ ಮಾರ್ನಿಂಗ್ ಹೇಳಿದೆವು. ಆಕೆ ಒಬ್ಬಳೇ ಯುವತಿ, ತಾನು ನಾರ್ವೆ ದೇಶದಿಂದ ಬಂದಿರುವ ಸೋಲ್ ಟ್ರಾವೆಲರ್ ಎಂದು ಹೇಳಿ, ಇಲ್ಲಿಗೆ ಬಂದು ಮೂರು ದಿನದಿಂದ ರಿಸಾರ್ಟಿನಲ್ಲಿ ತಂಗಿರುವುದಾಗಿ ತಿಳಿಸಿದಳು.ಮುಂಜಾನೆ ಮತ್ತು ಸಂಜೆ ಕಾಡಿನಲ್ಲಿ ಒಂಟಿಯಾಗಿ ಸುತ್ತುವುದು, ರಿಸಾರ್ಟಿನ ಅಡಿಗೆ ಮನೆಯಲ್ಲಿ ಊಟದ ತಯಾರಿ ನೋಡುವುದು, ಉಳಿದ ಸಮಯದಲ್ಲಿ ಒಂದಷ್ಟು ಪೇಟಿಂಗ್, ಪುಸ್ತಕ ಓದುವುದು, ನನಗೆ ಹಸಿರಿನ ಪ್ರಕೃತಿ ಬಹಳ ಇಷ್ಟ, ನಮ್ಮ ದೇಶದಲ್ಲಿ ಬಿಸಿಲೇ ಇರುವುದಿಲ್ಲ ಹೀಗಾಗಿ ಇಲ್ಲಿನ ಬಿಸಿಲು ಬೀಚುಗಳು ಬಹಳ ಇಷ್ಟ ಎಂದವಳು ನಮ್ಮ ಜೊತೆಗೆ ನಡೆದು ಬಂದಳು.
May be an image of text that says "Ashlands Photography"

ಪೊನ್ಮುಡಿಯಲ್ಲಿ ಸಿಗುವುದು ಕೇವಲ ಹಸಿರು ಮಳೆ ನೀರು ಝರಿ ತಂಪು ಉಲ್ಲಾಸ ನೀರವಮೌನ ನೆಮ್ಮದಿ ಮಾತ್ರ. ಇಂತಹ ಒಂದು ತಾಣದಲ್ಲಿ ಕಳೆಯುವ ಒಂದೊಂದು ದಿನಗಳೂ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ. ಪೊನ್ಮುಡಿಯ ವೀವಿಂಗ್ ಪಾಯಿಂಟ್ ತಲುಪಿದ ನಂತರ ಇಬ್ಬರೂ ದೂರದ ನೆಯ್ಯಾರ್ ಡ್ಯಾಮಿನಿಂದ ಹರಿಯುತ್ತಿದ್ದ ನೀರನ್ನು ವೀಕ್ಷಿಸುತ್ತಾ ಕುಳಿತೆವು. ಅದು ಆನೆಗಳು ಓಡಾಡುವ ಜಾಗವಾಗಿದ್ದು, ಸುತ್ತಲೂ ಮುಸುಕಿದಂತೆ ಹಸಿರು ಮರಗಳಿದ್ದವು. ಇಲ್ಲಿ ಕುಳಿತರೆ ದೂರದ ಪೆಪ್ಪಾರ ಡ್ಯಾಮಿನ ಹಿನ್ನೀರು, ಶೆನ್ ದುರ್ನೆ ವೈಲ್ಡ್ ಲೈಫ್ ಸ್ಯಾಂಚುರಿ, ಅಗಸ್ತಮಲೈ ಬೆಟ್ಟಗಳನ್ನು ನೋಡುತ್ತಾ, ಕಲ್ಲಾರ್ ಮೀನ್ಮುಟ್ಟಿ ಜಲಪಾತದ ಸದ್ದನ್ನು ನವಿರಾಗಿ ಕೇಳಬಹುದು.
#ಅಲ್ಲಿಂದ ಎದ್ದು ಅಪ್ಪರ್ ಸ್ಯಾನಟೋರಿಯಂ ಕಡೆಗೆ ಹೊರಟು ಅಲ್ಲಿನ ಕೆಫೆಟೇರಿಯದಲ್ಲಿ ಎತ್ತರದ ಸೀಟಿನಲ್ಲಿ ಕುಳಿತು ಒಂದಷ್ಟು ಕಾಫಿ ಹೀರಿದೆವು. ಮಧ್ಯಾಹ್ನದ ಲಂಚಿಗೆ ಆರ್ಡರ್ ಕೊಟ್ಟು, ಇಲ್ಲೇ ಒಂದಷ್ಟು ದೂರ ಓಡಾಡಿ ಬರುತ್ತೇವೆಂದು ಹೇಳಿ ಕೆಫೆಟೇರಿಯದಲ್ಲಿ ಎರಡು ಕೊಡೆಗಳನ್ನು ಪಡೆದು, ಮುಂದಿನ ಮಣ್ಣು ದಾರಿಯಲ್ಲಿ ನಡೆದೆವು. ನಡೆಯುವ ಹೆಜ್ಜೆಗಳ ಸದ್ದಿಗೆ ನಮ್ಮ ನಡುವಿನ ಮಾತುಗಳು ಒಂದು ರೀತಿಯ ಮಾಧುರ್ಯ ಮೂಡಿಸುತ್ತಿದ್ದವು. ಹೆಚ್ಚಿನ ಹೊತ್ತು ಮೌನದ ಜೊತೆಗೆ ನಡೆಯುತ್ತಲೇ ಇದ್ದೆವು. ನಡುವೆ ಸಣ್ಣ ಮಳೆ ಹನಿಗಳು ಬಂದು ಹೋಗುತ್ತಿದ್ದವು. ಕೊಡೆ ಇಲ್ಲದೇ ಮಳೆ ಹನಿಗಳ ನಡುವೆ ನಡೆಯುವುದೇ ಚೆನ್ನ ಎಂದು ಇಬ್ಬರೂ ಒಂದಷ್ಟು ಹನಿಗಳಿಗೆ ಮುಖವೊಡ್ಡಿದೆವು. ಇಂತಹ ನೀರವ ಮೌನದ ಪರಿಸರದಲ್ಲಿ ನಮ್ಮಿಬ್ಬರ ನಡುವೆ ಮೌನವೇ ಯಾಕೋ ಇಬ್ಬರಿಗೂ ಇಷ್ಟವಾಗುತ್ತಿತ್ತು.

ವಾಪಸ್ಸು ಬಂದು ಲಂಚ್ ಮುಗಿಸಿ ರಿಸಾರ್ಟಿಗೆ ಹಿಂತಿರುಗಿದೆವು. ನಾರ್ವೆ ಯುವತಿಯು ಆಹ್ವಾನಿಸಿದ ಕಾರಣ ಅವಳ ಜೊತೆ ಸಂಜೆಯವರೆಗೂ ಮಾತಿಗೆ ಕೂತೆವು. ಆಕೆ ನಾರ್ವೆ ಯೂನಿವರ್ಸಿಟಿಯಲ್ಲಿ ಪರಿಸರ ಅಧ್ಯಯನದಲ್ಲಿ ಸಂಶೋಧನೆ ನಡೆಸುತ್ತಿರುವ ಬಗ್ಗೆ, ಈಗ ರಜೆ ಇರುವ ಕಾರಣದಿಂದ ದಕ್ಷಿಣ ಭಾರತದ ಸಹ್ಯಾದ್ರಿ ಪರ್ವತಗಳನ್ನು ನೋಡಿ ಹೋಗಲು ಬಂದಿರುವುದಾಗಿ ತಿಳಿಸಿದಳು.
ಈಗಾಗಲೇ ಶಿರಸಿ, ತೀರ್ಥಹಳ್ಳಿ, ಮೂಡಿಗೆರೆ, ಕಾಸರಗೋಡು ಎಲ್ಲವನ್ನೂ ನೋಡಿ ಬಂದಿರುವ ಬಗ್ಗೆ ವಿವರಿಸಿದಳು. ನಮ್ಮೂರಿನ ಸಂಗತಿಗಳು ದೂರದ ನಾರ್ವೆ ಯುವತಿಯಲ್ಲಿ ಆಶಕ್ತಿ ಮೂಡಿಸಿರುವ ಬಗ್ಗೆ ಸಂತಸವಾಯಿತು. ಮಲೆನಾಡಿನ ಬಯೋಸ್ಪಿಯರ್, ಮಲೆನಾಡಿನ ಮಳೆ, ನದಿಗಳು, ಆಚೆಗೆ ಮಹಾರಾಷ್ಟ್ರದವರೆಗೆ ಹಬ್ಬಿರುವ ಸಹ್ಯಾದ್ರಿ ಪರ್ವತಗಳ ಬಗ್ಗೆ ಹರಟುತ್ತಾ ಹಿಂದಿರುಗಿದೆವು.
– ಶ್ರೀರಾಮ್ ಬಿದರಕೋಟೆ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights