ಬಸ್‌ನಲ್ಲಿ ಹೋಗಲು ನಿರಾಕರಿಸಿದ ಏಕೈಕ ಮಹಿಳಾ ಪ್ರಯಾಣಿಕರಿಗಾಗಿ 535 ಕಿ.ಮೀ ಕ್ರಮಿಸಿದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು

ಬಸ್ಸು ಟ್ಯಾಕ್ಸಿಯಲ್ಲಿ ಹೋಗಲು ನಿರಾಕರಿಸಿ ಏಕೈಕ ಮಹಿಳಾ ಪ್ರಯಾಣಿಕರಿಗಾಗಿ ದೆಹಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು 535 ಕಿ.ಮೀ ಕ್ರಮಿಸಿದೆ.

ಜಾರ್ಖಂಡ್‌ ರಾಜ್ಯದ ಟೋರಿ ಜಂಕ್ಷನ್‌ನಲ್ಲಿ ಸತತ ಮೂರು ದಿನಗಳಿಂದ ನಡೆಯುತ್ತಿರುವ ತಾನಾ ಭಗತ್‌ ಚಳುವಳಿಯಿಂದಾಗಿ ದೆಹಲಿ-ರಾಂಚಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಗುರುವಾರ ಹಲವು ಗಂಟೆಗಳ ಕಾಲ ಡಾಲ್ಟೋಂಗಂಜ್ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು.

ಹಾಗಾಗಿ ಎಲ್ಲಾ 930 ಪ್ರಯಾಣಿಕರನ್ನು ಡಾಲ್ಟೋಂಗಂಜ್ ನಿಲ್ದಾಣದಿಂದ ರಾಂಚಿಗೆ ಬಸ್ ಮೂಲಕ ಕರೆದೊಯ್ಯಲಾಯಿತು. ಆದರೆ, ಮಹಿಳಾ ಪ್ರಯಾಣಿಕರೊಬ್ಬರು ಬಸ್ ಅಥವಾ ಟ್ಯಾಕ್ಸಿಯಲ್ಲಿ ತೆರಳಲು ನಿರಾಕರಿಸಿದ ಕಾರಣ, ಆಕೆಯ ಮನವೊಲಿಸಲು ವಿಫಲವಾದ ರೈಲ್ವೇ ಅಧಿಕಾರಿಗಳು ರೈಲನ್ನು ರಾಂಚಿಗೆ ಓಡಿಸಿದ್ದು, ಶುಕ್ರವಾರ ರೈಲು ಒಬ್ಬರೇ ಮಹಿಳಾ ಪ್ರಯಾಣಿಕರಿಗಾಗಿ ರಾಂಚಿ ತಲುಪಿದೆ.

ಕಾನೂನು ವಿದ್ಯಾರ್ಥಿನಿಯಾಗಿರುವ ಅನನ್ಯಾ ಎಂಬುವವರು ರೈಲು ಪ್ರಯಾಣಕ್ಕೆ ಹಣ ಪಾವತಿಸಿದ್ದರಿಂದ ಬಸ್‌ನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದರು. ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪದ ಆಕೆಗಾಗಿ ರೈಲಿನ ಮಾರ್ಗವನ್ನು ಬದಲಿಸಿ ಗೋಮೋ ಮತ್ತು ಬೊಕಾರೊ ಮೂಲಕ 535 ಕಿಲೋಮೀಟರ್ ಕ್ರಮಿಸಿ ರೈಲು ರಾಂಚಿ ತಲುಪಿದೆ. ಇದು ಸಾಮಾನ್ಯ ಮಾರ್ಗಕ್ಕಿಂತ 225 ಕಿಲೋಮೀಟರ್ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಬಸ್ ಅಥವಾ ಟ್ಯಾಕ್ಸಿ ಮೂಲಕ ತೆರಳುವಂತೆ ನನ್ನ ಮೇಲೆ ಒತ್ತಡ ಹಾಕಲಾಯಿತು. ಆದರೆ ನಾನು ಈಗಾಗಲೇ ರೈಲು ಪ್ರಯಾಣಕ್ಕೆ ಹಣ ಪಾವತಿಸಿದ್ದರಿಂದ ಅದಕ್ಕೆ ನಾನು ಒಪ್ಪಲಿಲ್ಲ. ಅಂತಿಮವಾಗಿ, ನಾನು ಟ್ವಿಟ್ಟರ್ ಮೂಲಕ ಭಾರತೀಯ ರೈಲ್ವೆಗೆ ಮಾಹಿತಿ ನೀಡಿದಾಗ, ಅವರು ನನ್ನನ್ನು ರಾಂಚಿಗೆ ರೈಲಿನಲ್ಲಿ ಕಳುಹಿಸಿದರು” ಎಂದು ಅನನ್ಯಾ ಹೇಳಿದ್ದಾರೆ.


ಇದನ್ನೂ ಓದಿ: ಒಳಮೀಸಲಾತಿಯ ತತ್ವವಿಲ್ಲದೇ ಮೀಸಲಾತಿಗೆ ಸತ್ವವಿರದು: ಅಧ್ಯಯನ ಬರಹ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights