ಏಕತ್ವಂ: ಕಂಪನಿ ಜಾಹೀರಾತು ಮಾತ್ರವಲ್ಲ, ಭಾರತೀಯ ಭ್ರಾತೃತ್ವದ ಸಂಕೇತ!

ತನಿಷ್ಕ್‌ ಆಭರಣ ಕಂಪನಿಯ ಏಕತ್ವಂ ಜಾಹೀರಾತಿಗೆ ಬಲಪಂಥೀಯ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದನ್ನು ವಿರೋಧಿಸಿ, ಮಾತನಾಡಿರುವ ಮುಂಬೈಯ ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿಯ ಉಪನ್ಯಾಸಕಿ ಸಮೀನಾ ದಳವಾಯಿ ಅವರು,  “ನನ್ನ ಜೀವನವು ಅಸಂಗತತೆಯಿಂದ ಕೂಡಿದ್ದಲ್ಲ. ಭಾರತದಲ್ಲಿ ವಿಭಿನ್ನ ರೀತಿಯ ಜನರು ಪರಸ್ಪರ ಪ್ರೀತಿಸುತ್ತಾರೆ, ಸ್ನೇಹಿತರಾಗುತ್ತಾರೆ ಹಾಗೂ ಕುಟುಂಬವು ಆಗುತ್ತಾರೆ. ಇದು ಭಾರತದ ಮೂಲ ಸಂರಚನೆಯಾಗಿದ್ದು, ಭಾರತದ ನನ್ನ ಕಲ್ಪನೆಯನ್ನು ಆಕ್ಷೇಪಿಸಲು ನೀವು ಯಾರು?” ಎಂದು ಪ್ರಶ್ನಿಸಿದ್ದಾರೆ.

ವಾರಗಳ ಹಿಂದೆ ದೇಶದಾದ್ಯಂತ ಸಂಚಲನ ಮೂಡಿಸಿದ್ದ ತನಿಷ್ಕ್ ಆಭರಣ ಕಂಪೆನಿಯ ’ಏಕತ್ವಂ’ ಜಾಹಿರಾತಿಗೆ ಬಲಪಂಥೀಯ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಭಾರಿ ವಿರೋಧ ವ್ಯಕ್ತವಾದ ನಂತರ ತನಿಷ್ಕ್ ಈ ಜಾಹಿರಾತನ್ನು ಹಿಂಪಡೆದಿತ್ತಾದರೂ ಜಾಹಿರಾತು ಜನರ ಮನಸ್ಸನ್ನು ಗೆದ್ದಿತ್ತು.

ದಿ ಕ್ವಿಂಟ್ ಮಾಡಿರುವ ಈ ವಿಡಿಯೋದಲ್ಲಿ ಅವರು “ನೀವು ಮುಸ್ಲಿಮರನ್ನು ಆಕ್ಷೇಪಿಸುತ್ತಿದ್ದೀರಾ? ನಿಮ್ಮದೇ ಹೆಣ್ಣು ಮಕ್ಕಳ ಆಯ್ಕೆಗಳ ಬಗ್ಗೆ ಆಕ್ಷೇಪಿಸುತ್ತಿದ್ದೀರಾ? ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸುಂದರ ಭಾರತದ ಸಮ್ಮಿಶ್ರ ಸಂಸ್ಕೃತಿಯನ್ನು ಆಕ್ಷೇಪಿಸುತ್ತಿದ್ದೀರಾ? ನೀವು ಯಾರು? ಯಾಕೆ ಆಕ್ಷೇಪಿಸುತ್ತೀರಿ? ಯಾಕೆ ನಿಮಗೆ ಅಷ್ಟೊಂದು ಅಸಹನೆ?” ಎಂದು ಪ್ರಶ್ನಿಸಿದ್ದಾರೆ.

“ನನ್ನ ತಾಯಿ ಶಮಾ ದಳವಾಯಿ ಸಾರಸ್ವತ ಬ್ರಾಹ್ಮಣ, ತಂದೆ ಹುಸೈನ್ ದಳವಾಯಿ ಕೊಂಕಣ ಮೂಲದ ಮುಸ್ಲಿಂ. ಅವರಿಬ್ಬರೂ 1970 ರ ದಶಕದ ವಿದ್ಯಾರ್ಥಿ ಸಂಘಟನೆಯಾದ ಯುವಕ್ ಕ್ರಾಂತಿ ದಳಕ್ಕೆ ಸೇರಿದ ಸಮಾಜವಾದಿ ಸಂಘಟನೆಯವರು. ಮದುವೆಯ ನಂತರ ನನ್ನ ತಾಯಿ ಹಿಂದೂ ಆಗಿಯೆ ಮುಂದುವರೆದರು. ಅವರು ಕಟ್ಟಾ ಸಾಂಪ್ರದಾಯಿಕ ಹಿಂದೂ ಅಲ್ಲದಿದ್ದರೂ, ತನ್ನ ಅಸ್ಮಿತೆಯನ್ನು ಮುಂದುವರೆಸಲು ಮದುವೆಯಾದ ನಂತರವು ಬಿಂದಿ ಧರಿಸುತ್ತಿದ್ದಾರೆ. ಮುಸಲ್ಮಾನನ್ನು ಮದುವೆಯಾಗಿದ್ದರೂ ಇಸ್ಲಾಂಗೆ ಮತಾಂತರಗೊಂಡಿಲ್ಲ, ನಾವು ಹಿಂದೂ ಮತ್ತು ಮುಸ್ಲಿಂ ಎರಡೂ ಕೂಡಾ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏಕತ್ವಂ ಜಾಹೀರಾತಿಗೆ ಭಾರಿ ಬೆಂಬಲ: ಅಂತರ್‌ಧರ್ಮೀಯ ಜೋಡಿಗಳ ಮನದ ಮಾತುಗಳೇನು?

“ನಾವು ಈದ್‌, ದೀಪಾವಳಿ, ಕ್ರಿಸ್‌ಮಸ್‌ ಆಚರಿಸುತ್ತೇವೆ. ಹೊಸ ವರ್ಷವನ್ನೂ ಸ್ವಾಗತಿಸುತ್ತೇವೆ. ಅಂಬೇಡ್ಕರ್‌ ಜಯಂತಿ, ಲೆನಿನ್‌ ಜಯಂತಿಯನ್ನೂ ಆಚರಿಸುತ್ತೇವೆ. ಇವೆಲ್ಲವೂ ನಮ್ಮ ಹಬ್ಬಗಳೇ ಆಗಿದೆ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

“ಏಕತೆಯನ್ನು ಕಂಡುಕೊಂಡಿದ್ದ ನಮ್ಮ ಕುಟುಂಬ, 1992 ರ ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಬಾಂಬೆಯಲ್ಲಿ ನಡೆದ ಗಲಭೆಯಿಂದಾಗಿ ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಮುಖ್ಯವಾಹಿನಿಯ ಸಮಾಜವು ಕೋಮುವಾದಿಯಾಗಿ ಪರಿವರ್ತನೆಯಾಗಿದ್ದು ನಮ್ಮ ಕಷ್ಟಗಳನ್ನು ಹೆಚ್ಚಿಸಿತ್ತು. ಅಂತಿಮವಾಗಿ ನಾವು ನಮ್ಮ ಮನೆಯಿಂದ ಹೊರಹೋಗಬೇಕಾಯಿತು” ಎಂದು ಅವರು ವಿಷಾಧಿಸಿದ್ದಾರೆ.

“ಇನ್ನು ಬದುಕುವುದು ಹೇಗೆ? ನಮ್ಮ ಜೊತೆಗಾರರು ಯಾರು? ನಮ್ಮ ಕುಟುಂಬ ಸಂಬಂಧಗಳನ್ನು ವಿಸ್ತರಿಸಿಕೊಳ್ಳುವುದು ಹೇಗೆ? ಎಂಬಂತಹ ಆತಂಕಗಳ ನಡುವೆಯೇ ನಾವು ಹೊಸ ಜಗತ್ತುಗಳಿಗೆ ತೆರೆದುಕೊಂಡು ದೇಶ ಸುತ್ತಿದೆವು. ಪಿಎಚ್‌ಡಿಗಳನ್ನು ಪಡೆದು, ನಮ್ಮಂತೆಯೇ ಇರುವ ಹತ್ತಾರು ಜನರನ್ನು ನೋಡಿ, ಅಂಥವರೊಂದಿಗೆ ಸ್ನೇಹವನ್ನು ಏರ್ಪಡಿಸಿಕೊಂಡೆವು” ಎಂದು ಅವರು ಹೇಳಿದ್ದಾರೆ.

“ನನ್ನ ಸಹೋದರ ಹೈನಾನ್‌ನ ಚೀನೀ ಹುಡುಗಿಯನ್ನು ಮದುವೆಯಾದ್ದಾರೆ. ನಾನು ತೆಲಂಗಾಣ ರೆಡ್ಡಿಯನ್ನು ಮದುವೆಯಾಗಿದ್ದೇನೆ. ನಾವು ನಾಗಲ್ಯಾಂಡ್‌‌ನ ಪುಟ್ಟ ಹುಡುಗಿಯನ್ನು ದತ್ತು ಪಡೆದಿದ್ದಲ್ಲದೆ ಇನ್ನೂ ಇಬ್ಬರು ಮಕ್ಕಳನ್ನು ಹೊಂದಿದ್ದೇವೆ, ಮಕ್ಕಳು ಹೊರಗೆ ಆಡವಾಡುವಾಗ ಇದು ಹೇಗೆ ಸಾಧ್ಯ, ಒಬ್ಬರನ್ನು ಒಬ್ಬರು ಹೋಲುವುದಿಲ್ಲ ಎಂದು ಕೇಳುತ್ತಾರೆ ಆದರೆ ನಾವು ನಕ್ಕು ಮುಂದೆ ಸಾಗುತ್ತೇವೆ” ಎಂದು ಅವರು ಹೇಳಿದ್ದಾರೆ.

“ಶ್ರೇಷ್ಠ ಚಿಂತಕದಾದ ಮಹಾತ್ಮ ಫುಲೆ ಅವರು ವಿಶ್ವ ಕುಟುಂಬದ ಬಗ್ಗೆ ಮಾತನಾಡಿದ್ದರು. ಹಾಗಾದರೆ, ನನ್ನ ಭಾರತವನ್ನು ಆಕ್ಷೇಪಿಸುತ್ತಿರುವ ಈ ಜನರೆಲ್ಲರೂ ಯಾರು? ನೀವು ಮುಸ್ಲಿಮರನ್ನು ಆಕ್ಷೇಪಿಸುತ್ತಿದ್ದೀರಾ? ನಿಮ್ಮ ಸ್ವಂತ ಹೆಣ್ಣುಮಕ್ಕಳ ಆಯ್ಕೆಗಳಿಗೆ ನೀವು ಆಕ್ಷೇಪಿಸುತ್ತಿದ್ದೀರಾ? ಅಥವಾ ಭಾರತದ ಕಲ್ಪನೆಯನ್ನು ನೀವು ಆಕ್ಷೇಪಿಸುತ್ತಿದ್ದೀರಾ?” ಎಂದು ಅವರು ಹೇಳಿದ್ದಾರೆ.

ನಮ್ಮ ಜೀವನವು ಈ ಏಕತೆಯನ್ನು ಆಕ್ಷೇಪಿಸುವ ಎಲ್ಲ ಜನರಿಗೆ ಉತ್ತರವಾಗಿದೆ. ನಾವು ಹೆಮ್ಮೆಯಿಂದ, ಪ್ರೀತಿಯಿಂದ ಬದುಕುತ್ತೇವೆ ಎಂದು ಅವರು ಹೇಳಿದ್ದಾರೆ.

ಕೃಪೆ: ದಿಕ್ವಿಂಟ್


ಇದನ್ನೂ ಓದಿ: ಡಿಜಿಟಲ್‌ ಇಂಡಿಯಾ: ಭಾರತದ್ದು ವಿಶ್ವದಲ್ಲಿಯೇ ಅತ್ಯಂತ ಕಳಪೆ ಇಂಟರ್‌ನೆಟ್‌ ಸ್ಪೀಡ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights