ಮತಾಂದ ಸರ್ವಾಧಿಕಾರ: ರಾಜ್ಯದ ಮುಂದೆ ‘ಧಾರ್ಮಿಕ ಬಂಧೀಖಾನೆಯ ವಿದೇಯಕ’

ಭಾರತ ಕಂಡರಿಯದ ಕಠೋರ ವಿಧೇಯಕವೊಂದನ್ನು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದೆ. ಯುಎಪಿಎ ಕಾಯ್ದೆಗಳೂ ಸಹ ಇಷ್ಟೊಂದು ಕಠೋರ ಎಂಬುದನ್ನು ಗಮನಿಸಬೇಕು. ಈ ವಿಧೇಯಕದಲ್ಲಿ ಏನಿದೆ? ಯಾವ ಉದ್ದೇಶಕ್ಕೆ ಇದನ್ನು ತರಲಾಗಿದೆ? ಇದರ ಪರಣಾಮವೇನು? ಸಂಕ್ಷಿಪ್ತ ಟಿಪ್ಪಣಿ.

ವಿಧೇಯಕ ಏನು ಹೇಳುತ್ತಿದೆ?

  1. ವಿಧೇಯಕಕ್ಕೆ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ” ಎಂಬ ಸುಂದರ ಹೆಸರನ್ನು ನೀಡಲಾಗಿದೆ.
  2. ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ವಂಚನೆ, ಒತ್ತಾಯ, ಆಮಿಷ, ಮದುವೆ, ಮದುವೆ ವಾಗ್ದಾನ ಅಥವಾ ಇನ್ನಾವುದೇ ವಂಚಕ ವಿಧಾನಗಳ ಮೂಲಕ ಮಾಡಲಾಗುವ ಮತಾಂತರವನ್ನು ತಡೆಯುವುದು ಮತ್ತು ಶಿಕ್ಷಿಸುವುದು ಇದರ ಉದ್ದೇಶವಾಗಿ ಹೇಳಲಾಗಿದೆ.
  3. ಅಪರಾಧಿಗಳಿಗೆ 3 ರಿಂದ 5 ವರ್ಷಗಳ ತನಕ ಕಾರಾಗೃಹದ ಶಿಕ್ಷೆ.
  4. ಅಪ್ರಾಪ್ತ, ಅಸ್ವಸ್ಥಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆ.
  5. ಸಾಮೂಹಿಕ ಮತದಾನ ಮಾಡಿದರೆ ಮತ್ತಷ್ಟು ಕಠಿಣ ಶಿಕ್ಷೆ.
  6. ಈ ಶಿಕ್ಷೆಗಳ ಪ್ರಮಾಣ ಏರುಗತಿಯಲ್ಲಿರುತ್ತದೆ. ಕನಿಷ್ಟ 3 ವರ್ಷದಿಂದ 10 ವರ್ಷಗಳವರೆಗಿನ ಕಾರಾಗೃಹ, 1 ಲಕ್ಷದವರೆಗೆ ಜುಲ್ಮಾನೆ ಮತ್ತು ಮತಾಂತರಗೊಂಡಿದ್ದವರಿಗೆ ಮತಾಂತರ ಮಾಡಿದವರು 5 ಲಕ್ಷದವರೆಗೆ ಪರಿಹಾರ ನೀಡಬೇಕು.
  7. ಇದರಲ್ಲಿ ಯಾವುದಾದರೂ ಸಂಸ್ಥೆ ಒಳಗೊಂಡಿದ್ದರೆ ಅದರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಅದು ಪಡೆಯುತ್ತಿರಬಹುದಾದ ಅನುದಾನಗಳನ್ನು ನಿಶೇಧಿಸಲಾಗುವುದು.
  8. ಅಕ್ರಮ ಮತಾಂತರ ನಡೆದಿದೆ ಎಂಬ ದೂರನ್ನು ಮತಾಂತರಗೊಂಡವರನ್ನು ‘ಬಲ್ಲ’ ಯಾರು ಬೇಕಾದರೂ ದೂರು ನೀಡಬಹುದು.
  9. ಈ ಅಪರಾಧವನ್ನು ಹೀನಾಯವಾದುದೆಂದು ಪರಿಗಣಿಸಲಾಗುವುದು ಮತ್ತು ಇದು ಜಾಮೀನು ರಹಿತವಾದದ್ದು.
  10. ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದು.
  11. ಅಪರಾಧಕ್ಕೆ ಸಹಾಯ ಮಾಡಿದವರ ಮೇಲೂ ಮತ್ತು ಅವರ ಪರವಾಗಿ ನಿಲ್ಲುವವರ ಮೇಲೂ ಕ್ರಮ ಜರುಗಿಸಬಹುದು.ಮತಾಂತರದ ಉದ್ದೇಶದಿಂದ ಮದುವೆಯಾಗಿದ್ದರೆ ಅಂತಹ ಅಂತರ್ ಧರ್ಮೀಯ ಮದುವೆಗಳನ್ನು ರದ್ದುಗೊಳಿಸಬಹುದು.
  12. ಸಕ್ರಮವಾಗಿ ಮತಾಂತರವಾಗಲು ಬಯಸಿದಲ್ಲಿ ಅದಕ್ಕೆ ಸುದೀರ್ಘ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕು: 30 ದಿನಗಳ ಮೊದಲು ಮತಾಂತರವಾಗುವವರು ಮತ್ತು ಮತಾಂತರ ಮಾಡುವವರು ತಮ್ಮ ವಿವರ ಹಾಗೂ ಉದ್ದೇಶಗಳುಳ್ಳ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಅದರ ಕುರಿತು ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಕಟಣೆ ಹಾಕಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು, ಬಂದ ಆಕ್ಷೇಪಣೆಗಳನ್ನು ವಿಚಾರಣೆಗೆ ಒಳಪಡಿಸಬೇಕು, ಅನುಮೋದನೆ ದೊರಕಿದಲ್ಲಿ ಅದರ ಪ್ರಕಟಣೆಯನ್ನು ಮತ್ತೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಹಾಕಬೇಕು. ಅದಕ್ಕೆ ಯಾವ ಆಕ್ಷೇಪಣೆಯೂ ಬರದಿದ್ದಲ್ಲಿ ಆಗ ಅದನ್ನು ಸಕ್ರಮಗೊಳಿಸಲಾಗುವುದು. ಆದರೆ ಈ ಪ್ರಕ್ರಿಯೆಯಲ್ಲಿ ದೋಷ ಅಥವ ದುರುದ್ದೇಶ ಕಂಡುಬಂದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಪೋಲೀಸರಿಗೆ ಸೂಚಿಸಬಹುದು. ಈ ಕ್ರಮವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬಹುದು.

ಇದರ ಉದ್ದೇಶಗಳೇನು?

  1. ಧಾರ್ಮಿಕ ದುರಭಿಮಾನ ಮತ್ತು ವಾಗ್ವಾದಗಳಲ್ಲಿ ರಾಜ್ಯವನ್ನು ಸಿಲುಕಿಸುವುದು ಮತ್ತು ಮುಂದಿನ ಚುನಾವಣೆಯಲ್ಲಿ ಅದರ ರಾಜಕೀಯ ಲಾಭ ಪಡೆಯುವುದು.
  2. ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ಬಂಧನದಿಂದ ಮುಕ್ತಿ ಪಡೆಯದಂತೆ ಕಟ್ಟಿಡುವುದು.
  3. ಅಂತರ್ ಧರ್ಮೀಯ ಮದುವೆಗಳನ್ನು ತಡೆಯುವುದು. ಮಹಳೆಯರನ್ನು ಹೊಸಿಲು ದಾಟದಂತೆ ಬಂಧಿಸುವುದು.
  4. ಕ್ರೈಸ್ತ ಮತ್ತು ಇತರೆ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿ ಕಟಕಟೆಯಲ್ಲಿ ನಿಲ್ಲಿಸುವುದು. ಅವರ ಸಂಪನ್ಮೂಲಗಳನ್ನು ರದ್ದುಗೊಳಿಸಿ, ಅವು ಮಾಡುತ್ತಿದ್ದ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು.
  5. ಹೋರಾಟಗಾರರನ್ನು ಮತ್ತೊಮ್ಮೆ ಭಾವನಾತ್ಮಕ ವಾದ ವಿವಾದದಲ್ಲಿ ಮುಳುಗಿಸಿ ನಿಜವಾದ ವಿಚಾರಗಳ ಸುತ್ತ ಹೋರಾಟಗಳು ಬೆಳೆಯದಂತೆ ನೋಡಿಕೊಳ್ಳುವುದು.
  6. ಇದನ್ನೂ ಓದಿ:ಮತಾಂತರ ನಿಷೇಧ ಕಾಯಿದೆ ಹಿಂದೆ ದೇಶದ ಕೋಮುಸೌಹಾರ್ದತೆ ಹಾಳುಗೆಡವುವ ದುರುದ್ದೇಶವಿದೆ- ಸಿದ್ದರಾಮಯ್ಯ

ಇದರ ಪರಿಣಾಮಗಳೇನು?

  1. ಆಮಿಷ ಮತ್ತು ಅನುಚಿತ ಪ್ರಭಾವದ ಹೆಸರಿನಲ್ಲಿ ಸಲೀಸಾಗಿ ಅಲ್ಪಸಂಖ್ಯಾತ ಧರ್ಮದ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಕಟಕಟೆಯಲ್ಲಿ ನಿಲ್ಲಿಸಬಹುದು.
  2. ಅವರಿಗೆ ಜಾಮೀನು ಸಿಗದಂತೆ, ಅವರ ಪರವಾಗಿ ಯಾರೂ ದನಿ ಎತ್ತದಂತೆ ಮಾಡಬಹುದು. ಅವರ ಆರ್ಥಿಕ ಸಂಪನ್ಮೂಲಗಳನ್ನೆಲ್ಲಾ ರದ್ದುಗೊಳಿಸಬಹುದು.
  3. ಕೇಸರಿ ಪಡೆಗಳಿಗೆ, ಪೋಲೀಸ್ ಪಡೆಗಳಿಗೆ ಮತ್ತು ಅಧಿಕಾರಿಗಳಿಗೆ ಅಲ್ಪಸಂಖ್ಯಾತರನ್ನು ಕಾಡುವ ಅಪರಿಮಿತ ಅಧಿಕಾರವನ್ನು ನೀಡಲಾಗುತ್ತಿದೆ.
  4. ಜಾತಿ ಮತ್ತು ಪುರುಷ ಮೇಲಾಧಿಪತ್ಯದಿಂದ ದೌರ್ಜನ್ಯಗಳಿಂದ ಮುಕ್ತಿ ಪಡೆಯಲು ದಲಿತರು, ಆದಿವಾಸಿಗಳು, ಅಲೆಮಾರಿಗಳು ಬೌದ್ಧ, ಕ್ರೈಸ್ತ, ಸಿಖ್ ಅಥವ ಮುಸ್ಲಿಂ ಧರ್ಮಕ್ಕೆ ಮತಾತಂತರಗೊಂಡ ಪರಿಪಾಠ ಇದ್ದದ್ದಿದೆ. ಸ್ವಯಂ ಇಚ್ಛೆ ಮಾತ್ರವಲ್ಲ ಮುಕ್ತಿಯ ಮಾರ್ಗಗಳಾಗಿಯೂ ದಮನಿತ ಜನ ಅದನ್ನು ಪರಿಗಣಿಸಿದ್ದಿದೆ. ಸ್ವಯಂ ಅಂಬೇಡ್ಕರ್ ಅವರು ಮುಂದೆ ನಿಂತು ಅದನ್ನು ಮಾಡಿಸಿದ್ದಾರೆ. ಸ್ವಧರ್ಮದಲ್ಲಿ ಸೂಕ್ತ ಗೌರವ ನೀಡಿ ಉಳಿಸಿಕೊಳ್ಳಲಾಗದ ಜಾತಿಗ್ರಸ್ಥ ಮನಸ್ಸುಗಳು ಈಗ ಬಲವಂತದ ಮೂಲಕ ದಮನಿತ ಸಮುದಾಯಗಳನ್ನು ಜಾತಿ ಮತ್ತು ಪುರುಷಾಧಿಪತ್ಯ ವ್ಯವಸ್ಥೆಯಡಿ ಕಟ್ಟಿಡಲು ಹೊರಟಿದ್ದಾರೆ.
    ಅಲ್ಪಸಂಖ್ಯಾತ ಸಮುದಾಯಗಳು ದೇಶದ ಉದ್ದಗಲಕ್ಕೂ ಆಹಾರ, ಆರೋಗ್ಯ, ಶಿಕ್ಷಣವನ್ನು ನೀಡುವಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಫಲ ಈ ದೇಶದ ದಮನಿತ ಮತ್ತು ಶೋಷಿತ ಜನ ವರ್ಗಗಳು ಪಡೆದಿವೆ, ಪಡೆಯುತ್ತಿವೆ. ಈ ಎಲ್ಲಾ ಸಂಸ್ಥೆಗಳು ಶಂಕಿತ ಸ್ಥಾನದಲ್ಲಿ ನಿಲ್ಲಲಿವೆ ಮತ್ತು ನಿಂತು ಹೋಗುವ ಅಪಾಯವನ್ನು ಎದುರಿಸಲಿವೆ.
    ಅಂತರ್ ಧರ್ಮೀಯ ಪ್ರೀತಿ ಮತ್ತು ಅಂತರ್ ಧರ್ಮೀಯ ಮದುವೆಗೆ ಶಾಶ್ವತವಾಗಿ ಮುಳ್ಳು ಬೇಲಿಯನ್ನು ಜಡಿಯಲಾಗುತ್ತಿದೆ.ಮಾಡಬೇಕಾದುದೇನು?

ಮನುಷ್ಯರಾಗಿ ಪ್ರತಿರೋಧಿಸೋಣವೆ? ಗುಲಾಮತೆಯನ್ನು ಒಪ್ಪಿಕೊಳ್ಳೋಣವೆ? ಎಂಬ ತೀರ್ಮಾನಕ್ಕೆ ಬರಬೇಕಿರುವುದು. ಆಯ್ಕೆ ನಿಮ್ಮದು ನಮ್ಮದು.

– ನೂರ್‌ ಶ್ರೀಧರ್

Also Read: ಕೇರಳ: ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ಪ್ರಶ್ನಿಸಿದ್ದ ಅರ್ಜಿ ವಜಾ; ಅರ್ಜಿದಾರರಿಗೆ ಒಂದು ಲಕ್ಷ ರೂ. ದಂಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights