ವಿವಿಧ ದೇಶಗಳಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ; ಭಾರತದಲ್ಲಿ ಕೊರೊನಾ 3ನೇ ಅಲೆ ಮುನ್ಸೂಚನೆ?!

ಕೊರೊನಾ 2ನೇ ಅಲೆಯ ಆಕ್ರಮಣದಿಂದ ಬಸವಳಿದ ಭಾರತ, ಇದೀಗ ಕೊರೊನಾ ಪ್ರಕರಣಗಳ ಇಳಿಕೆಯಿಂದ ನಿಟ್ಟುಸಿರು ಬಿಡುತ್ತಿದೆ. ಇದೇ ವೇಳೆ, ಜಗತ್ತಿನ ವಿವಿಧ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ರಾಷ್ಟ್ರಗಳು ಮತ್ತೆ ಲಾಕ್‌ಡೌನ್‌ ಮೊರೆಹೋಗುತ್ತಿವೆ. ಇದು 3ನೇ ಅಲೆಯ ಮುನ್ಸೂಚನೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚುತ್ತಿದ್ದು, ಆಸ್ಟ್ರೀಯಾ, ನೆದರ್ಲೆಂಡ್, ಡೆನ್ಮಾರ್ಕ್‌, ಜರ್ಮನಿ, ನಾರ್ವೆ, ಲ್ಯಾಟ್ವಿಯಾ ಮತ್ತು ರಷ್ಯಾದಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿಯಾಗಿದೆ.

ಕಳೆದ ಎರಡು ಕೊರೊನಾ ಅಲೆಗಳ ವೇಳೆ ಮಾಡಲಾಗಿದ್ದ ಸಂಪೂರ್ಣ ಲಾಕ್‌ಡೌನ್‌ ಪದ್ದತಿಯನ್ನು ತೊರೆದಿರುವ ಈ ರಾಷ್ಟ್ರಗಳು, ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ಕೊರೊನಾ ವಿರುದ್ದ ನೀಡಲಾಗುವ ಎರಡು ಡೋಸ್‌ಗಳ ವ್ಯಾಕ್ಸಿನ್‌ ಅನ್ನು ಪಡೆಯದೇ ಇರುವವರಿಗೆ ಮಾತ್ರ ನಿರ್ಬಂಧಗಳನ್ನು ಹೇರುವ ಮೂಲಕ ಭಾಗಶಃ ಲಾಕ್‌ಡೌನ್‌ ಮಾಡಲು ಮುಂದಾಗಿವೆ.

ಈ ರೀತಿಯಲ್ಲಿ, ಕೊರೊನಾ ಲಸಿಕೆ ಹಾಕಿಸಿಕೊಳ್ಳದವರು ತ್ವರಿತವಾಗಿ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಅಲ್ಲಿನ ಸರ್ಕಾರಗಳು ಜನರನ್ನು ಒತ್ತಾಯಿಸುತ್ತಿವೆ.

ಯಾವ ದೇಶದಲ್ಲಿ ಯಾವ ರೀತಿಯ ಲಾಕ್‌ಡೌನ್‌:

ನೆದರ್ಲೆಂಡ್: ನೆದರ್ಲೆಂಡ್‌ನಲ್ಲಿ ದಿನಕ್ಕೆ 16,000 ಪ್ರಕರಣಗಳು ದಾಖಲಾಗಿತ್ತಿವೆ. ಹೀಗಾಗಿ, ಶನಿವಾರದಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಅಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಅಂಗಡಿಗಳು, ಶಾಂಪಿಂಗ್ ಮಾಲ್ಗಗಳನ್ನು ಮುಚ್ಚಲಾಗಿದೆ. ಸೂಪರ್‌ ಮಾರ್ಕೆಟ್‌ ಹಾಗೂ ಆವಶ್ಯಕವಲ್ಲದ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಈ ನಿಯಮಗಳು ಅನ್ವಯವಾಗುತ್ತವೆ ಎಂದು ಅಲ್ಲಿನ ಹಂಗಾಮಿ ಪ್ರಧಾನಿ ಮಾರ್ಕ್‌ ರಟ್ಟೆ ಹೇಳಿದ್ದಾರೆ. ರಾತ್ರಿ 08 ಗಂಟೆವರೆಗೆ ಮಾತ್ರ ಕೆಫೆಗಳು, ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಆಸ್ಟ್ರಿಯಾ: ಆಸ್ಟ್ರೀಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರದಿಂದಲೇ ಲಾಕ್‌ಡೌನ್‌ ಜಾರಿಯಾಗಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವವರಿಗೆ ಹೆಚ್ಚಾಗಿ ಸೋಂಕು ಭಾದಿಸುವುದರಿಂದ, ಲಸಿಕೆ ಹಾಕಿಸಿಕೊಳ್ಳದೇ ಇರುವವರು ಸಾರ್ವಜನಿಕ ಸ್ಥಳಗಳಿಗೆ ತೆರಳುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: ಕೊರೊನಾದಿಂದ ಬಡತನ, ನಿರುದ್ಯೋಗ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 850 ಜನರು ಆತ್ಮಹತ್ಯೆ

ವೃತ್ತಿ ಸಂಬಂಧಿತ ಓಡಾಟ, ದಿನಸಿ ಖರೀದಿ, ವ್ಯಾಯಾಮದ ಉದ್ದೇಶದ ವಾಕಿಂಗ್, ಲಸಿಕೆ ಪಡೆಯುವವರಿಗೆ, ಆರೋಗ್ಯ ತಪಾಸಣೆಗೆ ತೆರಳುವವರಿಗೆ ಮಾತ್ರ ಹೊರಹೋಗಲು ಅವಕಾಶವಿದ್ದು, ಉಳಿದ ಎಲ್ಲಾ ರೀತಿಯ ಓಡಾಟಗಳನ್ನು ನಿರ್ಬಂಧಿಸಲಾಗಿದೆ. ನ.24ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿರಲಿದೆ.

ನಾರ್ವೆ: ನಾರ್ವೆಯಲ್ಲಿಯೂ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಆದರೆ, ಅಲ್ಲಿನ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಲು ನಿರಾಕರಿಸುತ್ತಿದ್ದು, ಲಾಕ್‌ಡೌನ್‌ಗೆ ಬದಲಾಗಿ ಪರ್ಯಾಯ ಕ್ರಮಗಳನ್ನು ಜಾರಿಗೊಳಿಸಲು ಆಲೋಚಿಸುತ್ತಿದೆ. ಅದಕ್ಕಾಗಿ, ಪರ್ಯಾಯಗಳನ್ನು ಯಾವುದು ಎಂದು ಹುಡುಕಾಟ ನಡೆಸುತ್ತಿದೆ. ಲಾಕ್‌ಡೌನ್ ಬದಲು, ದೇಶದ ಎಲ್ಲರಿಗೂ 3ನೇ ಡೋಸ್‌ ಲಸಿಕೆ ನೀಡುವ ಬಗ್ಗೆ ನಾರ್ವೆ ಪ್ರಧಾನಿ ಜೋನಾಸ್‌ ಜೋಹರ್‌ ಚಿಂತನೆ ನಡೆಸಿದ್ದು, ಲಸಿಕೆ ಪಡೆದ ಎಲ್ಲರಿಗೂ ಕರೋನಾ ಪಾಸ್‌ಗಳನ್ನು ವಿತರಿಸುವಂತೆ ಸ್ಥಳೀಯ ಸರ್ಕಾರಗಳಿಗೆ ಸೂಚಿಸಲು ತೀರ್ಮಾನಿಸಲಾಗಿದೆ. ಅಂತಹ ಪಾಸ್‌ಗಳನ್ನು ಪಡೆದವರಿಗೆ ಮಾತ್ರ ಮನೆಗಳಿಂದ ಹೊರಬರಲು ಅವಕಾಶ ಸಿಗಲಿದೆ.

ಡೆನ್ಮಾರ್ಕ್: ಡೆನ್ಮಾರ್ಕ್‌ನಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. ಇದೇ ಹೊತ್ತಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಕಳೆದ ಬಾರಿ ವಿಧಿಸಿದ್ದ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಲು ಮುಂದಾಗಿದೆ. ಲಸಿಕೆ ಪಡೆದವರಿಗೆ ಅಥವಾ ಕೊರೊನಾ ನೆಗೆಟಿವ್‌ ಟೆಸ್ಟ್‌ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಬಾರ್‌ ಮತ್ತು ಕ್ಲಬ್‌ಗಳಿಗೆ ಪ್ರವೇಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಎರಡು ಡೋಸ್ ಪಡೆದವರಿಗೆ ಹಾಗೂ ಕೊರೊನಾದಿಂದ ಗುಣ ಮುಖರಾದವರಿಗೆ ಸಾರ್ವಜನಿಕ ಸ್ಥಳಗಳನ್ನು ಬಳಸಲು ಕೊರೊನಾ ಪಾಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.

ಜರ್ಮನಿ: ಜರ್ಮನಿಯಲ್ಲಿ ಈಗಾಗಲೇ ಕೊರೊನಾ 4ನೇ ಅಲೆ ಆವರಿಸಿಕೊಂಡಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಪ್ರತಿದಿನ 50,000 ದಾಟುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ, ಹಲವು ನಿರ್ಬಂಧಗಳನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕ ಸ್ಥಳಗಳಿಗೆ ಎರಡು ಡೋಸ್ ಲಸಿಕೆ ಪಡೆಯದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಎರಡು ಡೋಸ್ ಪಡೆದವರು ಮತ್ತು ಕೊರೊನಾದಿಂದ ಗುಣಮುಖರಾದವರಿಗೆ ಮಾತ್ರ ರೆಸ್ಟೋರೆಂಟ್‌ಗಳಲ್ಲಿ, ಬಾರ್‌ ಮತ್ತು ಕ್ಲಬ್‌ಗಳಿಗೆ ಪ್ರವೇಶವನ್ನು ಸೂಚಿಸಲಾಗಿದೆ. ವೈದ್ಯಕೀಯ ಕಾರಣಗಳಿಗಾಗಿ ಮನೆಗಳಿಂದ ಹೊರ ಬರುವವರಿಗೆ ಹಾಗೂ ಮಕ್ಕಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಲ್ಯಾಟ್ವಿಯಾ: ಯೂರೋಪ್‌ ರಾಷ್ಟ್ರಗಳ ಪೈಕಿ, ಅತೀ ಕಡಿಮೆ ಜನರಿಗೆ ಲಸಿಕೆ ನೀಡಿದ ರಾಷ್ಟ್ರ ಎಂಬ ಕುಖ್ಯಾತಿಗೆ ಲ್ಯಾಟ್ವಿಯಾ ಗುರಿಯಾಗಿದೆ. ಈ ದೇಶದಲ್ಲಿ ಲಸಿಕೆ ಅಭಿಯಾನ ಕುಂಟುತ್ತಾ ಸಾಗಿದೆ. ಹೀಗಾಗಿ, ಕಳೆದ ಅಕ್ಟೋಬರ್‌ನಲ್ಲಿಯೇ ಇಲ್ಲಿ ನಾಲ್ಕು ವಾರಗಳ ಲಾಕ್‌ಡೌನ್ ಹೇರಲಾಗಿತ್ತು. ಇದೀಗ, ನವೆಂಬರ್‌ನಿಂದ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ, ಕೊರೊನಾ ಅಬ್ಬರ ಲ್ಯಾಟ್ವಿಯಾದಲ್ಲಿ ಏರಿಳಿತ ಕಾಣುತ್ತಿದ್ದು, ಮತ್ತೆ ಸಂಪೂರ್ಣ ಲಾಕ್‌ಡೌನ್ ಮೊರೆ ಹೋಗುವ ಸಾಧ್ಯತೆ ಇದ್ದು, ಸರ್ಕಾರ ಹಲವು ಹಂತಗಳಲ್ಲಿ ಸಭೆ ನಡೆಸುತ್ತಿದೆ.

ರಷ್ಯಾ: ಭಾನುವಾರ ರಷ್ಯಾದಲ್ಲಿ 38,000ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಅಂದು ಒಂದೇ ದಿನ 1,219 ಸಾವುಗಳಾಗಿವೆ. ಹೀಗಾಗಿ, ಅಲ್ಲಿಯೂ ಸಹ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಈ ಕುರಿತಂತೆ ಸರ್ಕಾರವು ಸಂಸತ್ತಿನಲ್ಲಿ ಎರಡು ಮಸೂದೆಗಳನ್ನು ಮಂಡಿಸಿದೆ. ಅವುಗಳ ಪ್ರಕಾರ,  ಅಂತರ್‌ರಾಷ್ಟ್ರ ರೈಲು ಮತ್ತು ವಿಮಾನ ಪ್ರಯಾಣಕ್ಕೆ ನಿರ್ಬಂಧ, ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಲಸಿಕೆ ಪಡೆಯುವವರಿಗೆ ನಿರ್ಬಂಧ ಹೇರುವ ಅಂಶಗಳಿವೆ. ಸಂಸತ್ತು ಇದಕ್ಕೆ ಅನುಮೋದಿಸಿದರೆ, 2022 ಫೆಬ್ರವರಿಯಲ್ಲಿ ರಷ್ಯಾದಲ್ಲಿ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆಗಳಿವೆ ಎಂದು ರಷ್ಯಾದ ಕೊರೊನಾ ಟಾಸ್ಕ್ಫೋರ್ಸ್‌ನ ಮುಖ್ಯಸ್ಥರು ಆಗಿರುವ ಉಪಪ್ರಧಾನಿ ತಾತ್ಯಾನಾ ಗೊಲಿಕೊವಾ ತಿಳಿಸಿದ್ದಾರೆ.

ಈ ರಾಷ್ಟ್ರಗಳ ಹೊರತಾಗಿಯೂ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಅಮೆರಿಕಾದಲ್ಲಿ ವ್ಯಾಕ್ಸಿನೇಷನ್‌ ಪ್ರಕ್ರಿಯೆ ಗಣನೀಯವಾಗಿ ನಡೆದ ಬಳಿಕ ಅಲ್ಲಿನ ಜನರಿಗೆ ಮಾಸ್ಕ್‌ ಹಾಕುವುದರಿಂದ ವಿನಾಯತಿ ನೀಡಲಾಗಿತ್ತು. ಆದರೆ, ಇದೀಗ ಕೊರೊನಾ ರೂಪಾಂತರಿಗಳು ಕಾಣಿಸಿಕೊಳ್ಳುತ್ತಿದ್ದು, ಅಮೆರಿಕಾ ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೊರೊನಾ ನಂತರ ಜಾಗತಿಕ ಮಾಲಿನ್ಯ ಮತ್ತೆ ಹೆಚ್ಚಳ: ಭಾರತದಲ್ಲಿ ಇಂಗಾಲ ಹೊರಸೂಸುವಿಕೆ 3% ಹೆಚ್ಚಳ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights