ರಾಜ್ಯಸಭಾ ಉಪಚುನಾವಣೆ: ಡಾ. ಕೆ.ನಾರಾಯಣ್‌ಗೆ ಬಿಜೆಪಿ ಟಿಕೆಟ್‌!

ಅಶೋಕ್ ಗಸ್ತಿಯವರ ನಿಧನದಿಂದ ತೆರವಾಗಿದ್ದ ಕರ್ನಾಟಕದ ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್ 01 ರಂದು ಉಪಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ.ನಾರಾಯಣ ಆಯ್ಕೆಯಾಗಿದ್ದಾರೆ.

“ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ.ನಾರಾಯಣ (ಸ್ಪ್ಯಾನ್ ಪ್ರಿಂಟ್) ಅವರಿಗೆ ಹ್ರತ್ಪೂರ್ವಕ ಅಭಿನಂದನೆಗಳು” ಎಂದು ಡಾ.ಸುಧಾಕರ್ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ಡಾ.ಕೆ.ನಾರಾಯಣ ದೇವಾಂಗ ಸಮುದಾಯದಕ್ಕೆ ಸೇರಿದವರಾಗಿದ್ದು, ಮುದ್ರಣ ಉದ್ಯಮ ನಡೆಸುತ್ತಿದ್ದಾರೆ.‌ ಸ್ಪ್ಯಾನ್ ಪ್ರಿಂಟ್ ಎಂಬ‌ ಮುದ್ರಣ ಸಂಸ್ಥೆ ಹೊಂದಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಕರಪತ್ರಗಳನ್ನು ಮುದ್ರಿಸಿ ಕೊಡುತ್ತಿದ್ದರು.‌ ಬೆಂಗಳೂರಿನಲ್ಲಿ 1982ರಲ್ಲಿ ಮೊದಲ ಬಾರಿಗೆ ಮಲ್ಟಿ ಕಲರ್‌ ಪ್ರಿಂಟಿಂಗ್‌ ತಂತ್ರಜ್ಞಾನವನ್ನು ಪರಿಚಯಿಸಿ, 25 ವರ್ಷಗಳಿಂದ ಸಂಸ್ಕೃತ ಮಾಸ ಪತ್ರಿಕೆ ‘ಸಂಭಾಷಣ ಸಂದೇಶ’ವನ್ನು ಪ್ರಕಟಿಸುತ್ತಿದ್ದಾರೆ. ಹಿಂದೂ ಸೇವಾ ಪ್ರತಿಷ್ಠಾನದ ಖಜಾಂಚಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್ ಕೂಡ‌ ಬಂದಿದೆ.

ರಾಜ್ಯಸಭೆ ಉಪಚುನಾವಣೆಗೆ ನವೆಂಬರ್‌ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.19 ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ನ.23 ಕೊನೆಯ ದಿನವಾಗಿದೆ.

ಜೂನ್‌ 19ರಂದು ನಡೆಯಬೇಕಿದ್ದ ಕರ್ನಾಟಕದ ನಾಲ್ಕು ಸ್ಥಾನಗಳ ರಾಜ್ಯಸಭಾ ಚುನಾಚಣೆಯು ನಾಲ್ಕಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ನಿರೀಕ್ಷೆಯಿಂತೆ ಎಲ್ಲರೂ (ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಹೆಚ್.ಡಿ. ದೇವೇಗೌಡ ಮತ್ತು ಬಿಜೆಪಿಯ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅಧಿಕೃತವಾಗಿ ಘೋಷಿಸಿದ್ದರು.

ಇವರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಸಂಸದ ಅಶೋಕ್ ಗಸ್ತಿ (55) ಕೊರೊನಾದಿಂದ ಸೆಪ್ಟಂಬರ್ 17 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹಾಗಾಗಿ ಈ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯಲಿದೆ.


Read Also: ವಿಜಯೇಂದ್ರರ ವಿಜೃಂಭಣೆಗೆ ಅಭ್ಯಂತರವಿಲ್ಲ; ಆದರೆ, ಗೆಲುವು ಒಬ್ಬರಿಂದ ಅಲ್ಲ: ಸಚಿವ ಈಶ್ವರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights