ಸಾಮಾಜಿಕ ತುಡಿತ – ಸಹಾಯಾಸ್ತ ಹೊಂದಿರುವ ಸೂಕ್ಷ್ಮ ಸಂವೇದನೆಯ ನಟ ಪ್ರಕಾಶ್ ರೈ

ಚಿತ್ರರಂಗದ ಸಾಕಷ್ಟು ಸ್ಟಾರ್‌ಗಳು, ನಟ ನಟಿಯರು ತಮಗೆ ಸೆಲಬ್ರಿಟಿ ಎಂಬ ಪಟ್ಟ ಸಿಗುತ್ತಿದ್ದಂತೆಯೇ ತಮ್ಮ ಹುಚ್ಚಾಟಗಳನ್ನು ಹೆಚ್ಚಿಸಿಕೊಂಡು ಸುದ್ದಿಯಾಗುವುದೇ ಹೆಚ್ಚು. ಇಂತಹ ನಟರು ಜನ ಸಾಮಾನ್ಯರ ನೋವುಗಳಿಗೆ ಸ್ಪಂಧಿಸುವುದಿರಲಿ, ಅವರ ಕೈಗೆ ಸಿಗದೆ, ಯಕ್ಷರಂತೆ ಪರದೆ ಮೇಲೆ ಮಾತ್ರ ಕಾಣಸಿಗುತ್ತಾರೆ. ಹಾಗಂತ ಎಲ್ಲಾ ಸ್ಟಾರ್‌ಗಳೂ ಹಾಗೆಯೇ ಎಂದೇನೂ ಇಲ್ಲ. ಕೆಲವು ತಮ್ಮ ಅಭಿಮಾನಿಗಳ ಸಮಸ್ಯೆಗೆ ಅಥವಾ ತಮ್ಮ ಸುತ್ತಲಿನ ಸ್ನೇಹಿತರ ಸಂಕಷ್ಟಕ್ಕೆ ಸ್ಪಂಧಿಸುವದೂ ಇದೆ. ಆದರೆ, ಸಾಮಾಜಿಕ ಕಳಕಳಿಯೊಂದಿಗೆ ಮುನ್ನೆಡೆಯುವವರ ಸಂಖ್ಯೆ ವಿರಳ.

ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ ವರೆಗಿನ ಭಾರತೀಯ ಫಿಲ್ಮ್‌ ಇಂಡಸ್ಟ್ರಿಯಲ್ಲಿ ಬೆರಳೆಣಿಕೆಯಷ್ಟು ಕಲಾವಿದರು ಮಾತ್ರ ಸಾಮಾಜಿಕ ಹೊಣೆಗಾರಿಕೆ, ಸ್ಪಂದನೆಯೊಂದಿಗೆ ತಮ್ಮ ಸಿನಿಮಾ ವೃತ್ತಿ ಜೀವನ ನಡೆಸುತ್ತಿದ್ದಾರೆ. ಅಂತಹವರಲ್ಲಿ ಪ್ರಕಾಶ್‌ ರೈ ಕೂಡ ಒಬ್ಬರು.

ಇತ್ತೀಚೆಗಿನ ದಿನಗಳಲ್ಲಿ ಪ್ರಕಾಶ್ ರೈ ಅವರು ತಮ್ಮ ಸಿನಿಮಾ ಬದುಕಿಗಿಂತ ಹೆಚ್ಚು ಸುದ್ದಿಯಾಗಿದ್ದು, ಸಮಾಜದಲ್ಲಾಗುತ್ತಿರುವ ಕ್ರೌರ್ಯ, ದಬ್ಬಾಳಿಕ, ಹಿಂಸೆಯನ್ನು ವಿರೋಧಿಸಿ ಮಾತನಾಡಿದ ಮಾತುಗಳಿಂದ. ಭಾರತದ ಸೌಹರ್ದ ಪರಂಪರೆ ಮತ್ತು ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿರುವ ಶಕ್ತಿಗಳ ವಿರುದ್ಧ ದನಿ ಎತ್ತಿದ, #just Asking ಎಂದು ಪ್ರಶ್ನೆ ಮಾಡಿದ ಕಾರಣಕ್ಕೆ ಸಾಕಷ್ಟು ವಿರೋಧಗಳನ್ನು ಎದುರಿಸಿದ ಪ್ರಕಾಶ್‌ ರೈ ಅವರು ಟೀಕೆಗಳು ಹಾಗೂ ವೈಯಕ್ತಿಕ ದಾಳಿಗಳಿಗೆ ಎದೆಗುಂದದೆ ತಮ್ಮ ಸಾಮಾಜಿಕ ಕಳಿಕಳಿಯೊಂದಿಗೆ, ಕೇವಲ ಪ್ರಶ್ನೆ ಮಾಡುವುದಷ್ಟೇ ಅಲ್ಲದೆ, ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ.

ಪ್ರಕಾಶ್ ರೈ ಅವರು ‘ಇಲ್ಲಿಯವರೆಗೆ ಸಮಾಜ ನನಗೆ ಕೊಟ್ಟಿದೆ, ಈಗ ನಾನು ಸಮಾಜಕ್ಕೆ ವಾಪಸ್‌ ಕೊಡಬೇಕು’ (Give back to life) ಎಂಬ ನಿಲುವುಳ್ಳ ಪ್ರಕಾಶ್‌ ರೈ ಅವರು ತಾವು ದುಡಿದಿದ್ದರಲ್ಲಿ ಬಹುಪಾಲನ್ನು ಸಮಾಜಕ್ಕಾಗಿ, ಬಡ ಜನರ ಏಳಿಗೆಗಾಗಿ, ಸರ್ಕಾರಿ ಶಿಕ್ಷಣಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಬಡತನ ಬೇಗುದಿಯಲ್ಲಿ ಬೆಳೆದ ಇವರು, ರಂಗಭೂಮಿ ಮುಖೇನ ಸಿನೆಮಾ ರಂಗ ಪ್ರವೇಶಿಸಿ ಇಂದು ಬಹುಭಾಷಾ ನಟನಾಗಿ, ಹಲವರಿಗೆ ಮಾದರಿಯಾಗಿ ಬೆಳೆದಿದ್ದಾರೆ. ನಟನಾಗಿ ಅಭಿಮಾನಿಗಳನ್ನು ರಂಜಿಸುವುದಷ್ಟೇ ಅಲ್ಲದೆ, ತಮ್ಮನ್ನು ಬೆಳೆಸಿದ ಸಮಾಜಕ್ಕಾಗಿ ದುಡಿಯುವ ಉದ್ದೇಶದಿಂದ “ಪ್ರಕಾಶ್‌ರಾಜ್‌ ಫೌಂಡೇಷನ್‌” ಆರಂಭಿಸಿ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಹಳ್ಳಿಗಾಡಿನ ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಅಭಿವೃದ್ಧಿ ಪಡಿಸಲು ಸ್ಥಳೀಯ ಸಂಘ ಸಂಸ್ಥೆಗಳ ಜೊತೆ, ಸರ್ಕಾರಿ ಶಾಲೆಗಳಿಂದ ದೂರ ಉಳಿದಿದ್ದ ಮಕ್ಕಳು ಹಾಗೂ ಪೋಷಕರು ಸರ್ಕಾರಿ ಶಾಲೆಗಳಿಗೆ ಹಿಂದಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್‌.ಪೇಟೆ ನಗರದಲ್ಲಿರುವ ಶತಮಾನದ ಶಾಲೆ, ಪಾಂಡವಪುರ ಸರ್ಕಾರಿ ಶಾಲೆ, ಮಳವಳ್ಳಿ ಹತ್ತಿರದ ಮೆಣಸಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಯ ನಂಜಯ್ಯಗಾರಹಳ್ಳಿ, ತುಮಕೂರು ಜಿಲ್ಲೆಯ ಹೊಯ್ಸಳಕಟ್ಟೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಶ್ರಮಿಸಿತ್ತಿದ್ದಾರೆ.

Prakash Raj on Twitter: "#menesagere #hoysalakatte govt schools in  Karnataka..Preparing every students health card..,distributing sports  kits,..interacting with teachers/parents to ensure equal and quality  education for all..#charaka trust #ssjd a ...

ಇಂಗ್ಲೀಷ್‌ ಮಾಧ್ಯಮ ಶಾಲೆಗಳಿಗೆ ಮಾರುಹೋಗಿರುವ ಈ ಸಂದರ್ಭದಲ್ಲಿ ಸರ್ಕರಿ ಶಾಲೆಗಳಲ್ಲಿಯೇ ಇಂಗ್ಲೀಷನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸಲು ಇಂಗ್ಲಿಷ್‌ ಶಿಕ್ಷಕರನ್ನು ಈ ಎಲ್ಲಾ ಶಾಲೆಗಳಿಗೂ ನೇಮಿಸಿದ್ದಾರೆ. ಮಕ್ಕಳು ಓದಿನ ಕಲಿಕೆಯಷ್ಟೇ ಅಲ್ಲದೆ, ಬೇರೆ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳಲು ರಂಗ ತರಬೇತಿ ಶಿಕ್ಷಕರನ್ನೂ ನೀಡಿ, ರಂಗ ಶಿಬಿರಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲಾ ಕೆಲಸಗಳಿಂದಾಗಿ ಬೆರಳೆಣಿಕೆಯಷ್ಟು ಮಕ್ಕಳಿದ್ದ ಮೇಲಿನ ಸರ್ಕಾರಿ ಶಾಲೆಗಳು ಇಂದು ಖಾಸಗೀ ಶಾಲೆಗಳ ರೀತಿಯಲ್ಲಿ ‘ದಾಖಲಾತಿ ಭರ್ತಿಯಾಗಿದೆ’ ಎಂದು ಬೋರ್ಡ್‌ ಹಾಕುವಂತಹ ಉತ್ತನ್ನ ಮಟ್ಟಕ್ಕೆ ಬೆಳೆದಿವೆ.

ಈ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟದ ಅಡುಗೆ ಸಿಬ್ಬಂಧಿ ಆಯಾಗಳಿಗೂ ಸಹ ಸರ್ಕಾರ ನೀಡುವ ಗೌರವಧನದ ಜೊತೆಗೆ, ಫೌಂಡೇಶನ್ ಇಂದಲೂ ಸಹ ಗೌರವಧನ ನೀಡುತ್ತಿದ್ದಾರೆ. ಅಲ್ಲದೆ, ಅಡುಗೆ ಸಿಬ್ಬಂಧಿಗಳಿಗೆ ಸರ್ಕಾರ ನೀಡುತ್ತಿರುವ ಗೌರವಧನವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಸಹ ಒತ್ತಾಯಿಸುತ್ತಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜೊತೆಗೆ ಕೆಲವು ಹಳ್ಳಿಗಳನ್ನು ದತ್ತು ಪಡೆದು ಮಾದರಿ ಹಳ್ಳಿಗಳನ್ನಾಗಿ ನಿರ್ಮಿಸಲು ಮುಂದಾಗಿದ್ದು, ಕರ್ನಾಟಕದಲ್ಲಿ ಚಿತ್ರದುರ್ಗ ಜಿಲ್ಲೆಯ ಬಂಡ್ಲೋರಹಟ್ಟಿ ಗ್ರಾಮವನ್ನು ದತ್ತುಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವ ವಯಸ್ಸಾದ ಕಲಾವಿದರು, ಸಾಮಾಜಿಕ ಕಾರ್ಯಕರ್ತರಿಗೂ ಆರೋಗ್ಯದ ಖರ್ಚಿಗಾಗಿ ಅವರ ಹೆಸರನ್ನು ಬಹಿರಂಗ ಪಡಿಸದೆ ಸಹಾಯಧನ ನೀಡುತ್ತಿದ್ದಾರೆ. ದಿನಕಳೆಂದತೆ ಪ್ರಕಾಶ್‌ ರೈ ಅವರ ಸಾಮಾಜಿಕ ಕಾರ್ಯಚಟುವಟಿಕೆಗಳ ಕ್ಷೇತ್ರ ವಿಸ್ತಾರವಾಗುತ್ತಿರುವುದು ಆಶ್ವರ್ಯ ತರುವಂತಹದ್ದೇ ಆಗಿದೆ.

50ಲಕ್ಷ ನೀಡಿ ನಟನ ಜೀವ ಉಳಿಸಿದ ಪ್ರಕಾಶ್ ರೈ

ತೆಲುಗಿನ ಹಿರಿಯ ನಟ ರಾಜಾ ರವೀಂದ್ರ ಅವರು ಒಂದು ಸಂದರ್ಶನದಲ್ಲಿ ಮಾತನಾಡುತ್ತ ತನಗೆ ಜೀವನದಲ್ಲಿ ಸ್ಪೂರ್ತಿ ನೀಡಿದ ವ್ಯಕ್ತಿಗಳಲ್ಲಿ ಪ್ರಕಾಶ್‌ ರೈ ಕೂಡ ಒಬ್ಬರು. ನನ್ನ ದೊಡ್ಡ ಮಗಳ ವಿವಾಹ ಸಂದರ್ಭದಲ್ಲಿ ಮದುವೆಯ ಖರ್ಚಿಗೆ ಹಣ ಸಾಕಾಗದೇ ಕಷ್ಟದಲ್ಲಿ ಒದ್ದಾಡುತ್ತಿದ್ದೆ, ಆ ವಿಷಯ ತಿಳಿದು ಪ್ರಕಾಶ್‌ ರೈ ನನ್ನನ್ನು ಕರೆದು ನಿನ್ನ ಮಗಳ ಮದುವೆಗೆ ಎನ್ ತಯಾರಿ ನಡೆಸಿದ್ದೀಯ ಎಂದು ಕೇಳಿ ಒಂದಷ್ಟು ಹಣ ಕೊಟ್ಟರು ಇದುವರೆಗೂ ನಾನು ಅದನ್ನು ಹಿಂತಿರುಗಿಸಿಯೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ, ಹಿರಿಯ ನಟನೊಬ್ಬ ಕಷ್ಟದಲ್ಲಿ ಇರುವುದನ್ನು ತಿಳಿದು, ಅವರ ಸಮಸ್ಯೆಯ ಬಗ್ಗೆ ವಿಚಾರಿಸಿದ್ದರು. ಅವರು ಸಾಲ ಮಾಡಿಕೊಂಡಿರುವುದಾಗಿಯೂ, ತೀರಿಸಲಾಗದೆ ಆತ್ಮಹತ್ಯೆಯ ದಾರಿ ಹುಡುಕೊಂಡಿದ್ದೇನೆಂದು ಹೇಳಿದ್ದನ್ನು ಕೇಳಿ, ಆ ಸಾಲದ ಬಗ್ಗೆ ಮರೆತು ನೀವು ನೆಮ್ಮದಿಯಾಗಿ ಸಿನೆಮಾ ಮಾಡಿ ಎಂದು ಹೇಳಿ ಅವರ 50 ಲಕ್ಷ ಸಾಲವನ್ನು ತೀರಿಸಿದ್ದರು. ಪ್ರಕಾಶ್ ರೈ ರೀತ ಬದುಕೋಕೆ ನಮಗೆ ತುಂಬಾ ಕಷ್ಟ ನಾವು ಬರೀ ಮಾತನಾಡಬಹುದಷ್ಟೇ , ಜನರು ಅಂದಕೊಳ್ಳುವುದಕ್ಕೂ ಅವರ ಜೀವನ ಶೈಲಿಗೂ ತುಂಬಾ ಭಿನ್ನತೆಯಿದೆ ಎಂದು ರಾಜಾ ರವೀಂದ್ರ ಅವರು ಪ್ರಕಾಶ್‌ ರೈ ಅವರ ಸಹಾಯಾಸ್ತದ ಬಗ್ಗೆ ಹೇಳಿಕೊಂಡಿದ್ದಾರೆ.

ಕೊರೊನಾ ಸಮಸ್ಯೆಯಿಂದ ಜೊತೆ ಕೆಲಸ ಮಾಡವವರನ್ನು ಕೈ ಬಿಡದ ಪ್ರಕಾಶ್ ರೈ

ಕೊರೊನಾ ವೈರಸ್ ಹಾವಳಿಯಿಂದ ಜಗತ್ತೇ ತತ್ತರಿಸಿದೆ. ಭಾರತದ್ಲಲೂ ಲಾಕ್‌ಡೌನ್ ಘೋಷಿಸಲಾಗಿದ್ದು, ಬಡವರ ಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ತೆಗೆದುಕೊಳ್ಳುವ ತುರ್ತು ಕ್ರಮಗಳ ಜೊತೆ ಕೈ ಜೋಡಿಸಿ ನಾವು ನಮ್ಮ ಜವಬ್ದಾರಿ ನಿರ್ವಹಿಸಬೇಕು ಎಂಬುದು ಪ್ರಕಾಶ್ ರೈ ರವರ ಅಭಿಪ್ರಾಯವಾಗಿದ್ದು, ಅವರು ನಿರ್ಮಾಪಕರಾಗಿರುವ ಎರಡು ಸಿನೆಮಾದಲ್ಲಿ ಕೆಲಸ ಮಾಡುವವರಿಗೆ, ತೋಟದ ಮನೆಯಲ್ಲಿ ಕೆಲಸಮಾಡುವವರಿಗೆ, ಫೌಂಡೆಶನ್ ಅಲ್ಲಿ ಕೆಲಸ ಮಾಡುವವರಿಗೆ ಎಲ್ಲರಿಗೂ ಮೂರು ತಿಂಗಳ ಸಂಬಳ ಮುಂಚೆಯೇಕೊಡುವುದಾಗಿ ಘೋಷಿಸಿ, ಸಂಬಳ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ತಮಿಳು ಸಿನಿ ಕಾರ್ಮಿಕರ ಅಸೋಷಿಯೇಷನ್ ಗೆ ದವಸ ಧಾನ್ಯಗಳನ್ನು ಕಳುಹಿಸಿದ್ದಾರೆ.  ಇದು ನಿಜವಾಗಲೂ ಈ ಸಮಯದ ಸಕಾಲದ ನೆರವೂ, ಉಪಯುಕ್ತವೂ ಆಗಲಿದೆ.

ಸೂಕ್ಷ್ಮ ಸಂವೇದಯೊಂದಿಗೆ ವೃತ್ತಿ ಜೀವನದ ಜೊತೆಗೆ ಸಾಮಾಜಿಕ ಕಳಕಳಿಹೊಂದಿರುವ ಕನ್ನಡದ ಹೆಮ್ಮೆಯ ನಟ ಪ್ರಕಾಶ್‌ ರೈ. ಇಂದು ಅವರ ಹುಟ್ಟಿದ ದಿನ, ಈ ಸಂದರ್ಭದಲ್ಲಿ ಅವರ ಸಾಮಾಜಿಕ ಹೊಣೆಗಾರಿಕೆ, ಕಳಕಳಿ ಹೀಗೆ ಮುಂದುವರೆಯಲಿ ಎಂದು ಆಶಿಸೋಣ.

  – ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಇದನ್ನೂ ಓದಿ: 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಕನ್ನಡ ಚಿತ್ರ ಅಕ್ಷಿ‌; ಅತ್ಯುತ್ತಮ ನಟ ಧನುಷ್!‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights